'ಖಾತ್ರಿ' ಸಮರ್ಪಕ ಜಾರಿಗೆ ಒತ್ತಾಯ
ಲಿಂಗಸ್ಗೂರು: ತಾಲೂಕಿನ ಮಾವಿನಬಾವಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿಗೊಳಿಸಬೇಕೆಂದು ಗ್ರಾಮೀಣ ಕೂಲಿಕಾರ ಸಂಘಟನೆ ನೇತೃತ್ವದಲ್ಲಿ ಕೂಲಿಕಾರರು ಗ್ರಾಪಂ ಮುಂದೆ ಪ್ರತಿಭಟನಾ ಧರಣಿ ನಡೆಸಿದರು.
ಉದ್ಯೋಗ ಖಾತ್ರಿ ಕಾಮಗಾರಿಗೆ ಕಳೆದ ಹಲವು ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ ಕೂಲಿಕಾರರಿಗೆ ಕೆಲಸ ನೀಡುವಲ್ಲಿ ಮತ್ತು ಕೂಲಿ ಕೆಲಸ ವಿಳಂಬಕ್ಕೆ ನಿರುದ್ಯೋಗ ಭತ್ಯೆ ನೀಡುವಲ್ಲಿ ಹಾಗೂ ಮಾವಿನಬಾವಿ ಗ್ರಾಮದಲ್ಲಿ ಮೂಲ ಸೌಕರ್ಯ ಒದಗಿಸುವಲ್ಲಿ ಗ್ರಾಪಂ ಆಡಳಿತ ಮಂಡಳಿ ವಿಫಲವಾಗಿದೆ. ಪ್ರಸಕ್ತ ಸಾಲಿನಲ್ಲಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಕೂಲಿಕಾರರ ಅಗತ್ಯತೆಗೆ ತಕ್ಕಂತೆ ಕ್ರಿಯಾಯೋಜನೆಯಲ್ಲಿ ಕೆಲಸ ಸೇರ್ಪಡೆಗೊಳಿಸುವಲ್ಲಿ ಮಲತಾಯಿ ಧೋರಣೆ ತೋರಲಾಗಿದೆ ಎಂದು ಆರೋಪಿಸಿದರು.
ಒತ್ತಾಯ: ಗ್ರಾಮದಲ್ಲಿ ಕುಡಿಯುವ ನೀರು ಸಮಸ್ಯೆ ಎದುರಾಗಿದ್ದು, ತಾಲೂಕು ಆಡಳಿತ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಶೌಚಾಲಯ ನಿರ್ಮಿಸಿಕೊಳ್ಳುವ ಕುಟುಂಬಗಳಿಗೆ ಅನುದಾನ ಬಿಡುಗಡೆ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿಗೂಳಿಸಿ ಕೂಲಿಕಾರರಿಗೆ ಕೆಲಸ ಒದಗಿಸಿ ನ್ಯಾಯ ದೊರಕಿಸಿ ಕೊಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾ ಧರಣಿಯಲ್ಲಿ ಸಂಘಟನೆಯ ದ್ಯಾಮಣ್ಣ, ಗದ್ದೆಪ್ಪ, ಹನುಮಂತ, ಗ್ಯಾನಪ್ಪ, ಅಮರಪ್ಪ, ಗದ್ದೆಪ್ಪ, ಬಸವರಾಜ, ನಿಂಗಪ್ಪ, ಮಲ್ಲಪ್ಪ, ಬುಡ್ಡಮ್ಮ, ಹನುಮವ್ವ, ಸಂಗೀತ, ಹುಸೇನಮ್ಮ, ಶಾಂತಾ ಇದ್ದರು.