ಜಿಲ್ಲೆಯ ವಿವಿಧೆಡೆ ಮಳೆ
ರಾಯಚೂರು: ನಗರ ಮತ್ತು ಜಿಲ್ಲೆಯ ಕೆಲವೆಡೆ ಬುಧವಾರ ಸಂಜೆ ಮಳೆ ಸುರಿದು ವಾತಾವರಣದಲ್ಲಿ ತಂಪು ತಂದಿತು. ಕಳೆದ ಎರಡು ದಿನಗಳಿಂದ ನಗರದಲ್ಲಿ ಸಂಜೆಯಾಗುತ್ತಿದ್ದಂತೆಯೇ ಮೋಡ ಕವಿದ ವಾತಾವರಣ ಕಂಡುಬಂದು ಮಳೆ ಸುರಿಯುತ್ತಿರುವುದು ನಾಗರಿಕರಲ್ಲಿ ಸಂತಸ ತಂದಿದೆ.
ಸುಮಾರು 1 ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ರಸ್ತೆಗೆ ನೀರು ನುಗ್ಗಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಬೇಸಿಗೆಯಲ್ಲಿ ಬಿರುಬಿಸಿಲಿನಿಂದ ತತ್ತರಿಸಿರುವ ಜನತೆಗೆ ದಿನವೂ ಸಂಜೆಯಾಗುತ್ತಿದ್ದಂತೆಯೇ ಸುರಿಯುತ್ತಿರುವ ಅಲ್ಪ ಮಳೆಯಿಂದಾಗಿ ಉತ್ತಮ ಮುಂಗಾರು ಮಳೆಯ ನಿರೀಕ್ಷೆ ಗರಿಗೆದರಿದೆ. ರಾಯಚೂರು ನಗರ ಹಾಗೂ ಸುತ್ತಲಿನ ಗ್ರಾಮಗಳು ಮತ್ತು ದೇವದುರ್ಗ ಪಟ್ಟಣದಲ್ಲಿ ಬುಧವಾರ ಸಂಜೆ ಮಳೆ ಸುರಿಯಿತು. ಮಾನವಿ ತಾಲೂಕಿನ ಬೊಮ್ಮನಾಳ, ಕಪಗಲ್, ನೀರಮಾನ್ವಿಯಲ್ಲಿ ಆಲಿಕಲ್ಲು, ಬಿರುಗಾಳಿ ಸಹಿತ ಮಳೆಯಾಗಿದೆ. ಸಿಂಧನೂರು ತಾಲೂಕಿನಲ್ಲಿ ಮಿಂಚು, ಗುಡುಗು ಸಮೇತ ಮಳೆಯಾಗಿದೆ. ಹಾನಿ ಬಗ್ಗೆ ಯಾವುದೇ ವರದಿಯಾಗಿಲ್ಲ. ಈ ಮಧ್ಯೆ ಮಂಗಳವಾರ ಬೆಳಗ್ಗೆವರೆಗೆ ರಾಯಚೂರು ತಾಲೂಕಿನ ಗಿಲ್ಲೆಸೂಗೂರು ಗ್ರಾಮದಲ್ಲಿ 33.5 ಮಿಮೀ ನಷ್ಟು ಭಾರೀ ಮಳೆಯಾಗಿದೆ. ಚಂದ್ರಬಂಡಾ-14 ಮಿಮೀ, ಯರಮರಸ್-21 ಮಿಮೀ ಮಳೆಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.