ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಾರ್ಮಿಕ ಸಂಘಟನೆಗಳು ಸಾಮೂಹಿಕ ಹೋರಾಟದಿಂದ ಜಯ ಸಾಧಿಸಲಿ: ತಹಸೀಲ್ದಾರ್

Lingaraj Badiger
Updated On : 31 May 2013, 11:43 am

ಕನ್ನಡಪ್ರಭ ವಾರ್ತೆ, ಸಿಂಧನೂರು, ಮೇ 30
ಕಾರ್ಮಿಕರು ತಮ್ಮ ಮೂಲಭೂತ ಹಕ್ಕುಗಳಿಗೆ ಆದ್ಯತೆ ನೀಡಲಿ. ಸಂಘಟನೆಗಳು ಸಾಮೂಹಿಕ ಹೋರಾಟದಿಂದ ಜಯ ಸಾಧಿಸಲಿ ಎಂದು ತಹಸೀಲ್ದಾರ್ ಬಿ.ಟಿ. ಕುಮಾರಸ್ವಾಮಿ ಕರೆ ನೀಡಿದರು.
ಗುರುವಾರ ಎಪಿಎಂಸಿ ಆವರಣದಲ್ಲಿ ಎಐಟಿಯುಸಿ ನೇತೃತ್ವದಲ್ಲಿ ಗಂಜ್ ಹಮಾಲರ ಸಂಘ ಏರ್ಪಡಿಸಿದ್ದ ಕಾರ್ಮಿಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಉತ್ತಮ ಶಿಕ್ಷಣ ಪಡೆಯಲಿ: ಕಾರ್ಮಿಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಉನ್ನತ ಹುದ್ದೆಗಳಿಗೆ ಕಳಿಸಲಿ. ತಾವು ಸಹ ಸಾಮಾನ್ಯ ರೈತನ ಮಗನಾಗಿದ್ದು, ಮೊದಲು ಶಾಲಾ ಶಿಕ್ಷಕನಾಗಿ ಸೇವೆ ಆರಂಭಿಸಿ, ನಂತರ ಕಷ್ಟಪಟ್ಟು ಅಭ್ಯಾಸ ಮಾಡಿ ಕೆಎಎಸ್ ಪರೀಕ್ಷೆ ಪಾಸಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಹಸೀಲ್ದಾರರಾಗಿ ಕಾರ್ಯ ನಿರ್ವಹಿಸಿದೆ. ಅಂತೆಯೇ ಹಮಾಲರ ಮಕ್ಕಳು ಹಮಾಲಿ ಮಾಡುವುದು ಬೇಡ. ಬದಲಾಗಿ ಉತ್ತಮ ಶಿಕ್ಷಣ ಪಡೆದು ದೊಡ್ಡ ಹುದ್ದೆಗಳಲ್ಲಿ ಸೇವೆ ಸಲ್ಲಿಸಲಿ. ಸರ್ಕಾರದ ಯೋಜನೆಗಳನ್ನು ಕಾರ್ಮಿಕ ವರ್ಗ ಸದುಪಯೋಗ ಪಡೆಸಿಕೊಳ್ಳಲಿ. ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ಕೆಲಸಗಳಿರಲಿ ಕಚೇರಿಗೆ ಬಂದರೆ ಕೆಲಸ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಬಲಿಷ್ಠರಾಗಿ: ಎಐಟಿಯುಸಿ ಜಿಲ್ಲಾ ಸಮಿತಿ ಅಧ್ಯಕ್ಷ ಸಂಗಯ್ಯಸ್ವಾಮಿ ಚಿಂಚರಕಿ ಮಾತನಾಡಿ, ಕಾರ್ಮಿಕ ವರ್ಗ ಕ್ರಾಂತಿ ಪಥದಲ್ಲಿ ಸಾಗಬೇಕಾದರೆ ಲೆನಿನ್,ಮಾರ್ಕ್ಸ್ ಅವರ ತತ್ವ ಸಿದ್ಧಾಂತಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಕಾರ್ಮಿಕರು ಮದ್ಯಪಾನ, ಧೂಮಪಾನದಿಂದ ತಮ್ಮ ಆರೋಗ್ಯವನ್ನು ಕೆಡಸಿಕೊಳ್ಳಬಾರದು. ಕಾರ್ಮಿಕ ನಾಯಕರು ಜಾತಿವಾದಿಗಳಾಗದೆ, ಸರ್ವರ ನಾಯಕರಾಗಿ ಬೆಳೆದಾಗ ಸಂಘಟನೆಗಳು ಬಲಿಷ್ಠವಾಗುತ್ತದೆ. ಕಾರ್ಮಿಕರು ಇಂದು ಬರಿ ಕೂಲಿ, ಬೋನಸ್, ಬಿಪಿಎಲ್ ಕಾರ್ಡ್, ಲೈಸನ್ಸ್ಗಳಿಗಾಗಿ ಹೋರಾಟ ಮಾಡಿದರೆ ಸಾಲದು. ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಖಾಸಗಿಕರಣ, ಜಾಗತಿಕರಣ, ಉದಾರಿಕರಣಗಳ ನೀತಿಗಳ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಧ್ವನಿ ಎತ್ತಬೇಕಾಗಿದೆ. ದೇಶದಲ್ಲಿ ಮೂನ್ನೂರಕ್ಕೂ ಹೆಚ್ಚು ಕಾರ್ಪೋರೆಟ್ ಕಂಪನಿಗಳು ಬಂದಿವೆ. ಅವುಗಳ ವಿರುದ್ದ ಸಂಘಟಿತ ಹೋರಾಟ ನಡೆಸಬೇಕಾಗಿದೆ ಎಂದು ಸಲಹೆ ನೀಡಿದರು.
ಲೈಸನ್ಸ್ ವಿತರಣೆ: ಎಐಟಿಯುಸಿ ರಾಜ್ಯ ಸಮಿತಿ ಸದಸ್ಯ ಎಂ.ಡಿ. ಅಮೀರ್ ಅಲಿ, ವರ್ತಕರ ಸಂಘದ ಅಧ್ಯಕ್ಷ ಕಾನಿಹಾಳ ಮಲ್ಲನಗೌಡ ಮಾತನಾಡಿದರು. ಇದೇ ಸಂದರ್ಭದಲ್ಲಿ ಎಪಿಎಂಸಿ ವತಿಯಿಂದ ಗಂಜ್ ಹಮಾಲರಿಗೆ ಸಾಂಕೇತಿಕವಾಗಿ ಸನ್ನದು ಪ್ರಮಾಣಪತ್ರ (ಲೈಸನ್ಸ್ಗಳನ್ನು) ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಎಪಿಎಂಸಿ ಕಾರ್ಯದರ್ಶಿ ಸಿ.ಎಸ್. ಕರಡ್ಡಿ, ಸಹಕಾರ್ಯದರ್ಶಿ ನರಸಾರೆಡ್ಡಿ, ಎಪಿಎಂಸಿ ಉಪಾಧ್ಯಕ್ಷ ರಾಮಣ್ಣ ಹುಡಾ, ಹಂಚಿನಾಳ ಕ್ಯಾಂಪಿನ ಹಮಾಲರ ಸಂಘದ ಅಧ್ಯಕ್ಷ ಶ್ರೀನಿವಾಸ, ಗಂಜ್ ಹಮಾಲರ ಸಂಘದ ಕಾರ್ಯದರ್ಶಿ ಶರಣಪ್ಪ ಗೊರೇಬಾಳ, ಮುಖಂಡರಾದ ಹನುಮಂತಪ್ಪ ಹಂಚಿನಾಳ, ದುರುಗಪ್ಪ ಗುಮಗೇರಿ, ಆದಪ್ಪ ಬಿರಾದರ, ಗಂಜ್ ಗುಮಾಸ್ತರ ಸಂಘದ ಅಧ್ಯಕ್ಷ ಕಲ್ಲಪ್ಪ ಬದಾಮಿ ಮತ್ತಿತರರು ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಮಾಲರ ಸಂಘದ ಗೌರವಾಧ್ಯಕ್ಷ ವೆಂಕನಗೌಡ ಗದ್ರಟಗಿ ಮಾತನಾಡಿ, ಚಿಕಾಗೋ ನಗರದಲ್ಲಿ ಕಾರ್ಮಿಕರಿಗೆ 8 ತಾಸಿನ ವರೆಗೆ ಕೆಲಸ ನಿಗದಿಗೊಳಿಸಲು ನಡೆಸಿದ ಐತಿಹಾಸಿಕ ಹೋರಾಟದ ನೆನಪಿಗಾಗಿ ದೇಶದಾದ್ಯಂತ 127ನೇ ವರ್ಷದ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಕಾರ್ಮಿಕ ವರ್ಗದ ನಾಯಕರು ಶೋಷಣೆ ರಹಿತ ಸಮಾಜ ಕಟ್ಟುವ ದೃಷ್ಟಿಕೋನದಿಂದ ಕೆಲಸ ಮಾಡುವ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು. ಗಂಜ್ ಹಮಾಲರ ಸಂಘದ ಅಧ್ಯಕ್ಷ ಬಾಷುಮಿಯಾ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ಸಂಘದ ಉಪಾಧ್ಯಕ್ಷ ಬಾಷುಸಾಬ ಕಿಡದೂರ ಧ್ವಜಾರೋಹಣವನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಹಳ್ಳಿ ಮತ್ತು ಕ್ಯಾಂಪ್ಗಳಿಂದ ನೂರಾರು ಜನ ಕಾರ್ಮಿಕರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement