ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಖಾತ್ರಿ' ಅವ್ಯವಸ್ಥೆ ಖಂಡಿಸಿ ಉಪವಾಸ

Lingaraj Badiger
Updated On : 31 May 2013, 11:42 am

ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಮೇ 30
ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯ ಖಂಡಿಸಿ, ಕೂಲಿ ಪಾವತಿಸುವಲ್ಲಿನ ವಿಳಂಬಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆ(ಗ್ರಾಕೂಸ್) ಕಾರ್ಯಕರ್ತರು ಗುರುವಾರ ಉಪವಾಸ ಸತ್ಯಾಗ್ರಹ ಆರಂಭಿಸಿದರು.
ನಗರದ ಜಿಪಂ ಕಚೇರಿ ಎದುರು ಸಂಘಟನೆಯ ಮುಖಂಡ ಅಭಯ್ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಕಾರ್ಯಕರ್ತರು ಜಿಪಂ ಸಿಇಒಗೆ ಮನವಿ ಸಲ್ಲಿಸಿ, ಜಿಪಂ ಅಧಿಕಾರಿಗಳು ಉದ್ಯೋಗ ಖಾತ್ರಿ ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ವಿಫಲರಾಗಿದ್ದಾರೆ. ಕೂಲಿ ಹಣ ಪಾವತಿಸುವಲ್ಲಿ ಅನಗತ್ಯ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಪರಿಸ್ಥಿತಿ ಸುಧಾರಣೆ ಕಂಡಿಲ್ಲ: ಜಾಬ್ ಕಾರ್ಡು ನೀಡಿಕೆ ಮತ್ತು ಕೂಲಿಕಾರರಿಗೆ ಕೆಲಸ ನೀಡುವಲ್ಲಿಯೂ ಗ್ರಾಪಂ ಮಟ್ಟದಲ್ಲಿ ವಿಳಂಬ ಮಾಡಲಾಗುತ್ತಿದೆ. ಈ ಬಗ್ಗೆ ಏ.5ರಂದು ನಡೆಸಿದ ಹೋರಾಟದ ವೇಳೆ ಜಿಪಂ ಗಮನಕ್ಕೆ ತರಲಾಗಿತ್ತು. ಆದರೆ ಪರಿಸ್ಥಿತಿ ಮಾತ್ರ ಸುಧಾರಣೆ ಕಂಡಿಲ್ಲ ಎಂದು ದೂರಿದರು.
ಉದ್ಯೋಗ ಖಾತ್ರಿ ಯೋಜನೆಯನ್ನು ಕಾನೂನು ಪ್ರಕಾರ ಜಾರಿಗೆ ತರುವಲ್ಲಿ ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತಾಪಂ ಇಒ ಹಾಗೂ ಗ್ರಾಪಂ ಪಿಡಿಒಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಉದ್ಯೋಗ ಖಾತ್ರಿ ಯೋಜನೆ ಅಡಿ ಕೂಲಿಕಾರ್ಮಿಕರಿಗೆ ಕೆಲಸ ನೀಡದ ಈ ಅಧಿಕಾರಿಗಳ ವೇತನ ಜಪ್ತಿ ಮಾಡಿ ಕೂಲಿಕಾರ್ಮಿಕರಿಗೆ ನಿರುದ್ಯೋಗ ಭತ್ಯೆ ಒದಗಿಸುವಂತೆ ಒತ್ತಾಯಿಸಿದರು.
ಕಳೆದ ಎರಡು ತಿಂಗಳು ಚುನಾವಣೆಯ ಹಿನ್ನೆಲೆ ಜಿಲ್ಲೆಯಲ್ಲಿ ಚುನಾವಣೆ ಆಯೋಗ ಮತ್ತು ಎನ್ಆರ್ಇಜಿ ನಿರ್ದೇಶಕರು ಕೆಲಸ ನೀಡುವಂತೆ ಸೂಚನೆ ನೀಡಿದ್ದರೂ ಕೂಲಿಕಾರ್ಮಿಕರಿಗೆ ಕೆಲಸ ನೀಡಲು ನಿರಾಕರಿಸಿದ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕಾನೂನಿನಂತೆ ನಷ್ಟ ಪರಿಹಾರ ನೀಡಿ: 2012-13ನೇ ಸಾಲಿನಲ್ಲಿ ಕೆಲಸ ಮಾಡಿದ ಕೂಲಿಕಾರ್ಮಿಕರಿಗೆ ಕೂಲಿ ಹಣ ಪಾವತಿ ಜತೆಗೆ ಕೂಲಿ ಹಣ ಪಾವತಿಸಲು ವಿಳಂಬ ಮಾಡಿದ್ದಕ್ಕೆ ಜನರಿಗೆ ಉದ್ಯೋಗ ಖಾತ್ರಿ ಕಾನೂನಿನಂತೆ ನಷ್ಟ ಪರಿಹಾರ ನೀಡಬೇಕು. ಜಾಬ್ ಕಾರ್ಡ್ಗೆ ಅರ್ಜಿ ಸಲ್ಲಿಸಿರುವ ಕೂಲಿ ಕಾರ್ಮಿಕರಿಗೆ ಕೂಡಲೇ ಜಾಬ್ ಕಾರ್ಡ್ ವಿತರಿಸಬೇಕು ಎಂದು ಒತ್ತಾಯಿಸಿದರು.
ಕೂಲಿಕಾರ್ಮಿಕರಿಗೆ ಅವರ ಕೂಲಿಯನ್ನು ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವ ಪ್ರಕ್ರಿಯೆ ಜಾರಿಗೆ ತಂದಿರುವುದರಿಂದ ಬ್ಯಾಂಕ್ ಖಾತೆ ತೆರೆಯಲು ಕಾರ್ಮಿಕರಿಗೆ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಪಂ ಅಧಿಕಾರಿಗಳೇ ಕೂಲಿಕಾರ್ಮಿಕರ ಬ್ಯಾಂಕ್ ಖಾತೆ ತೆರೆಯಲು ನೆರವಾಗುವಂತೆ ಆದೇಶಿಸಲು ಆಗ್ರಹಿಸಿದರು.
ಬೆದರಿಕೆ: ಉದ್ಯೋಗ ಖಾತ್ರಿ ಯೋಜನೆ ಅಡಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟ ನಡೆಸುವ ಗ್ರಾಕೂಸ್ ಸಂಘಟನೆಯ ಕಾರ್ಯಕರ್ತರ ವಿರುದ್ಧ ಅಧಿಕಾರಿಗಳು ಸುಳ್ಳು ಕೇಸ್ ದಾಖಲಿಸುತ್ತಿದ್ದು, ಬೆದರಿಕೆಯೊಡ್ಡುತ್ತಿದ್ದಾರೆ. ಅಂಥವರಿಗೆ ವರ್ತನೆ ಬದಲಿಸಿಕೊಳ್ಳುವಂತೆ ಸೂಚಿಸಲು ಒತ್ತಾಯಿಸಿದರು.
ಕೂಲಿಕಾರ್ಮಿಕರಿಗೆ ವಹಿಸಿದ ಕಾಮಗಾರಿ ಸ್ಥಳಕ್ಕೆ, ಸಮಯಕ್ಕೆ ಸರಿಯಾಗಿ ಇಂಜಿನಿಯರ್ಗಳು ಆಗಮಿಸುವಂತೆ ಸೂಚಿಸಬೇಕು. ಅನಗತ್ಯವಾಗಿ ಕಡಿಮೆ ಕೂಲಿ ದೊರೆಯುವಂತೆ ಮಾಡುವ ಎಂಜಿನಿಯರ್ಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹೋರಾಟಗಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗ್ರಾಕೂಸ್ ಕಾರ್ಯಕರ್ತರಾದ ನಾಗವೇಣಿ ಬಾಯಿದೊಡ್ಡಿ, ಈರಣ್ಣ, ಗುರುರಾಜ್, ಬಸವರಾಜ್, ಶರಣೇಗೌಡ, ರಾಘವೇಂದ್ರ, ವಿದ್ಯಾ ಪಾಟೀಲ್, ಮುತ್ತಪ್ಪ ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement