ಸಿಐಟಿಯು 43ನೇ ಸಂಸ್ಥಾಪನಾ ದಿನಾಚರಣೆ
ರಾಯಚೂರು: ನಗರದ ಸಿಐಟಿಯು ಕಚೇರಿಯಲ್ಲಿ ಗುರುವಾರ ಸಂಘಟನೆಯ 43ನೇ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು.
ಕಚೇರಿಯ ಮುಂದೆ ಸಂಘಟನೆಯ ತಾಲೂಕು ಅಧ್ಯಕ್ಷ ವೈ. ಈರಣ್ಣ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕಾರ್ಮಿಕರ ಸಂಘಟನೆ ಮತ್ತು ಹೋರಾಟದ ಫಲವಾಗಿಯೇ ಸಿಐಟಿಯು ದೇಶ ಮಟ್ಟದಲ್ಲಿ ಬೃಹತ್ ಕಾರ್ಮಿಕ ಸಂಘಟನೆಯಾಗಿ ಬೆಳೆದಿದೆ ಎಂದು ಹೇಳಿದರು.
ಜಿಲ್ಲಾ ಜಂಟಿ ಕಾರ್ಯದರ್ಶಿ ಜೆ.ಎಂ.ಚನ್ನಬಸಯ್ಯ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಡಿ.ಎಸ್.ಶರಣಬಸವ, ತಾಲೂಕು ಕಾರ್ಯದರ್ಶಿ ಕೆ.ಜಿ.ವೀರೇಶ್, ಶಿಲ್ಪಾ ಸಂಸ್ಥೆಯ ನೌಕರರ ಸಂಘದ ಮುಖಂಡ ಗುರುಪಾದಯ್ಯ, ಸುರಾನಾ ಕಂಪನಿಯ ನೌಕರರ ಸಂಘದ ಅಧ್ಯಕ್ಷ ಸೂಗನಗೌಡ, ರಂಗಾರೆಡ್ಡಿ, ಆದಿಲಕ್ಷ್ಮಿ, ಗಂಗಮ್ಮ, ಫರೀದಾ, ಸುಲೋಚನಾ ಸೇರಿದಂತೆ ಅನೇಕರಿದ್ದರು.
ದಸಾಪಗೆ ಕೊರೇನಲ್ ನೇಮಕ
ರಾಯಚೂರು: ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿ ಹಾಗೂ ರಾಯಚೂರು ತಾಲೂಕು ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಬಿ.ಕೊರೇನಲ್ ಅವರನ್ನು ನೇಮಿಸಲಾಗಿದೆ. ಈ ಕುರಿತು ಪರಿಷತ್ತಿನ ಜಿಲ್ಲಾಧ್ಯಕ್ಷ ತಾಯರಾಜ್ ಮರ್ಚೇಟ್ಹಾಳ್ ಪ್ರಕಟಣೆ ನೀಡಿ, ತಾಲೂಕು ಘಟಕಕ್ಕೆ ಕಾರ್ಯದರ್ಶಿಯಾಗಿ ಚೆನ್ನಪ್ಪ ಬುಡದಿನ್ನಿ ಅವರನ್ನು ನೇಮಿಸಲಾಗಿದ್ದು, ಇವರು ದಲಿತ ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದ್ದಾರೆ.