ಅಕ್ರಮ ಪಡಿತರ ಚೀಟಿ: ಕ್ರಿಮಿನಲ್ ಮೊಕದ್ದಮೆ ಎಚ್ಚರಿಕೆ
ರಾಯಚೂರು: ನಗರದಲ್ಲಿ ವಿವಿಧ ಸರ್ಕಾರಿ ಹುದ್ದೆಗಳಲ್ಲಿರುವ ವಿವಿಧ ಪಡಿತರ ಚೀಟಿ ಹೊಂದಿರುವ ಬಗ್ಗೆ ದೂರು ಕೇಳಿಬಂದಿದ್ದು, ಕೂಡಲೇ ಅಂಥವರು ಪಡಿತರ ಚೀಟಿಯನ್ನು ಆಡಳಿತಕ್ಕೆ ಮರಳಿಸದಿದ್ದಲ್ಲಿ ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ ಎಂದು ಜಿಲ್ಲಾಡಳಿತ ಎಚ್ಚರಿಸಿದೆ.
ಈ ಕುರಿತು ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ ಎಸ್.ಎನ್.ನಾಗರಾಜ್ ಅವರು, ನಗರದ ಹರಿಜನವಾಡಾದಲ್ಲಿನ ಶ್ರೀಗಣೇಶ ನ್ಯಾಯಬೆಲೆ ಅಂಗಡಿ ಹಾಗೂ ಸಿಸಿಎಸ್ ಬಾಪೂಜಿ ನ್ಯಾಯಬೆಲೆ ಅಂಗಡಿಗೆ ಹೊಂದಿಸಲಾದ ಪಡಿತರ ಚೀಟಿಗಳನ್ನು ಅರ್ಹರಲ್ಲದವರು ಹಾಗೂ ಸರ್ಕಾರಿ ನೌಕರಿಯಲ್ಲಿರುವವರು ಪಡೆದಿರುವ ಬಗ್ಗೆ ದೂರು ಬಂದಿವೆ.
ಆಹಾರ ಇಲಾಖೆಯು ದೂರು ಆಧರಿಸಿ ಪರಿಶೀಲನೆ ನಡೆಸಿದ ವೇಳೆ ಸರ್ಕಾರಿ ನೌಕರರು, ಜೀವವಿಮಾ ನಿಗಮದ ನೌಕರರು ಅರ್ಹತೆ ಹೊಂದಿರುವವರು ಅಂತ್ಯೋದಯ ಹಾಗೂ ಅಕ್ಷಯ ಪಡಿತರ ಚೀಟಿಗಳನ್ನು ಪಡೆದಿರುವುದು ಗಮನಕ್ಕೆ ಬಂದಿದೆ. ಇಂತಹ ಪಡಿತರ ಚೀಟಿಗಳನ್ನು ಹೊಂದಿರುವ ನಗರದ ಹಾಗೂ ಜಿಲ್ಲೆಯ ಎಲ್ಲ ತಾಲೂಕುಗಳ ಸರ್ಕಾರಿ ನೌಕರರು, ಅರೆ ಸರ್ಕಾರಿ ನೌಕರರು, ಅರ್ಹತೆ ಹೊಂದದೇ ಅಂತ್ಯೋದಯ, ಅಕ್ಷಯ ಪಡಿತರ ಚೀಟಿಗಳನ್ನು ಪಡೆದಿರುವವರು ಕೂಡಲೇ ಆಯಾ ಪಡಿತರ ಚೀಟಿಗಳನ್ನು ಆಹಾರ ಇಲಾಖೆಯ ಕಾರ್ಯಾಲಯಕ್ಕೆ ಇಲ್ಲವೇ ತಹಸೀಲ್ದಾರ್ ಕಚೇರಿಗೆ ಹಿಂದಿರುಗಿಸಬೇಕು ಎಂದು ಸೂಚಿಸಿದ್ದಾರೆ.
ಮುಂದಿನ ದಿನಗಳಲ್ಲಿ ಆಹಾರ ಇಲಾಖೆಯು ಪರಿಶೀಲನೆ ನಡೆಸಿದ ವೇಳೆ ಕಾರ್ಡುಗಳು ಪತ್ತೆಯಾದಲ್ಲಿ ಅಂಥ ನೌಕರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಸಿದ್ದಾರೆ.