ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಕೈ'ಗೆ ಸರ್ಕಾರ ಬಂದ್ರೂ ಒಪೆಕ್ ಹಣೆಬರಹ ಬದಲಿಲ್ಲ

Lingaraj Badiger
Updated On : 1 Jun 2013, 11:09 am

ಕನ್ನಡಪ್ರಭ ವಾರ್ತೆ, ರಾಯಚೂರು, ಮೇ 31
ಅಪೋಲೋ ಸಂಸ್ಥೆಯಿಂದ ರಾಜ್ಯ ಸರ್ಕಾರ ಒಪೆಕ್ ಆಸ್ಪತ್ರೆ ಮರಳಿ ಪಡೆದು, ನಂತರ ಅದಕ್ಕೆ ಬೀಗ ಜಡಿದು ಮೇ 31ಕ್ಕೆ ಒಂದು ವರ್ಷ ಗತಿಸಿದೆ. ಬಡವರ ಪಾಲಿನ ಆರೋಗ್ಯ ಕೇಂದ್ರವಾಗಿದ್ದ ಆಸ್ಪತ್ರೆಯು ಈಗ ಸ್ಮಶಾನದಂತಾಗಿದೆ. ಪರಿಣಾಮ ಬಡಜನತೆಗೆ ಆರೋಗ್ಯ ಭಾಗ್ಯ ಎಂಬುದು ಮರೀಚಿಕೆಯಾಗಿದೆ. ಆಸ್ಪತ್ರೆಯ ಪುನಾರಂಭಕ್ಕೆ ಒತ್ತಾಯಿಸಿ ಹೋರಾಡುವ ಕಾರ್ಯಕ್ಕೆ ಸಂಘಟನೆಗಳು ಮುಂದಾಗಿವೆ.
ಹೈದರಾಬಾದ್ನ ಅಪೋಲೋ ಸಂಸ್ಥೆಯ ಅಧೀನದಲ್ಲಿ ಕಳೆದ 11 ವರ್ಷಗಳ ಅವಧಿಗೆ ನಿರ್ವಹಣೆಯಲ್ಲಿದ್ದ ಆಸ್ಪತ್ರೆಯನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಂಸ್ಥೆಯಿಂದ ಹಿಂಪಡೆಯಲಾಯಿತು. ಆಸ್ಪತ್ರೆಯನ್ನು ತನ್ನ ಸುಪರ್ದಿಗೆ ಪಡೆದ ಸರ್ಕಾರ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ಬೀದಿಪಾಲು ಮಾಡಿ ಆಸ್ಪತ್ರೆಗೆ ಬೀಗ ಹಾಕಿತು. ಹಾಗಾಗಿ ಒಂದು ವರ್ಷದಿಂದ ಜನತೆಗೆ ಸೂಪರ್ ಸ್ಪೆಷಾಲಿಟಿ ಚಿಕಿತ್ಸೆ ದೊರೆಯುತ್ತಿಲ್ಲ.
ಬಿಜೆಪಿ ಸರ್ಕಾರ ತನ್ನ ಅಧಿಕಾರವಧಿಯ ಕಡೆಗೆ ಗುಲ್ಬರ್ಗದಲ್ಲಿ ನಡೆಸಿದ ಸಚಿವ ಸಂಪುಟದ ಸಭೆಯಲ್ಲಿ ಒಪೆಕ್ ಆಸ್ಪತ್ರೆ ಪುನಾರಂಭಕ್ಕೆ 39 ಕೋಟಿ ಮಂಜೂರು ಮಾಡಿತ್ತು. ಆದರೆ ಇದುವರೆಗೆ 2 ಕೋಟಿ ಮಾತ್ರ ಬಿಡುಗಡೆಯಾಗಿದ್ದು, ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಖಾತೆಯಲ್ಲಿದೆ. ಆದರೆ ಯಾವುದೇ ಪ್ರಗತಿಯಾಗಿಲ್ಲ.
ಬಿಜೆಪಿ ಸರ್ಕಾರ ಈ ಆಸ್ಪತ್ರೆ ಪುನಾರಂಭಕ್ಕೆ ವಿಶೇಷಾಧಿಕಾರಿಯಾಗಿ ಡಾ.ಶಂಕರ ಮಲಪುರೆ ಅವರನ್ನು ನಿಯೋಜಿಸಿದೆ. ಅವರು ಅಧಿಕಾರ ವಹಿಸಿಕೊಂಡಾಗಿನಿಂದ ಆಸ್ಪತ್ರೆಯ ಪುನಾರಂಭಕ್ಕೆ ಶ್ರಮಿಸುತ್ತಿದ್ದಾರೆ. ಆದರೆ ಸರ್ಕಾರದಿಂದ ಮಾತ್ರ ಸ್ಪಂದನೆಯಿಲ್ಲವಾಗಿದೆ. ಪರಿಣಾಮ ಹೈ- ಕ ಭಾಗದ ಬಡವರ ಪಾಲಿನ ಆರೋಗ್ಯ ಕೇಂದ್ರ ಒಪೆಕ್ ಆಸ್ಪತ್ರೆಗೆ ಬಿದ್ದ ಬೀಗ ತೆರವು ಕಂಡಿಲ್ಲ.
ಮೂಲ ಆಶಯಕ್ಕೇ ಧಕ್ಕೆ: ಕಳೆದೊಂದು ದಶಕದಿಂದ ಅಪೋಲೋ ಸಂಸ್ಥೆಯ ನಿರ್ವಹಣೆಯಲ್ಲಿದ್ದ ಒಪೆಕ್ ಆಸ್ಪತ್ರೆಯಿಂದ ಬಡವರಿಗೆ ಸೂಪರ್ ಸ್ಪೆಷಾಲಿಟಿ ಸೌಲಭ್ಯವಿರಲಿ, ಕನಿಷ್ಠ ಸೌಲಭ್ಯ ದೊರೆತಿದ್ದೂ ಅಷ್ಟಕ್ಕಷ್ಟೇ. ಅಪೋಲೋ ಕೈಬಿಟ್ಟ ನಂತರದಲ್ಲಿ ಈ ಆಸ್ಪತ್ರೆಯನ್ನು ಸರ್ಕಾರವೇ ನಿರ್ವಹಿಸುವ ಹೊಣೆ ಹೊತ್ತಿತು. ಆದರೆ ಆಸ್ಪತ್ರೆ ವಹಿಸಿಕೊಂಡು ಬೀಗ ಜಡಿದಿರುವುದು ಮೂಲ ಆಶಯಕ್ಕೆ ಧಕ್ಕೆ ತಂದಿದೆ.
ಆಸ್ಪತ್ರೆಯಲ್ಲಿನ ಕೆಲ ಯಂತ್ರೋಪಕರಣಗಳು ಧೂಳು ತಿಂದರೆ ಮತ್ತೆ ಕೆಲವು ದುರಸ್ತಿಗೀಡಾಗಿವೆ. ಆಸ್ಪತ್ರೆ ಕಟ್ಟಡದ ನಿರ್ವಹಣೆ ಕೊರತೆಯಿಂದ ಎಲ್ಲೆಡೆ ಮುಳ್ಳುಕಂಟೆಗಳು ಬೆಳೆದು ಕಟ್ಟಡ ಹಾಳಾಗುತ್ತಿದೆ. ಇನ್ನು ಕಳೆದ 11 ವರ್ಷಗಳಿಂದ ಒಪೆಕ್ ಆಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದ್ದ 20 ಜನ ತಜ್ಞ ವೈದ್ಯರು ಹಾಗೂ 286 ಜನ ಸಿಬ್ಬಂದಿ ಮತ್ತು ಕಾರ್ಮಿಕರ ಭವಿಷ್ಯ ಸಹ ಆಸ್ಪತ್ರೆಯಂತೆ ಡೋಲಾಯಮಾನ ಸ್ಥಿತಿಗೆ ತಲುಪಿದೆ. ವೈದ್ಯರು ಅನಿವಾರ್ಯವಾಗಿ ಬೇರೆಡೆ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಇನ್ನಿತರ ಸಿಬ್ಬಂದಿ ಪರಿಸ್ಥಿತಿ ಅತಂತ್ರವಾಗಿದ್ದು ಬದುಕು ಬೀದಿಗೆ ಬಂದಿದೆ.
ಹೋರಾಟ: ಈ ಸಿಬ್ಬಂದಿಯ ಸೇವೆ ಮುಂದುವರಿಕೆಗೆ ಒತ್ತಾಯಿಸಿ ಉಗ್ರ ಸ್ವರೂಪದ ಹೋರಾಟಗಳು ಈಗಾಗಲೇ ನಡೆದಿವೆ. ಸಿಬ್ಬಂದಿ 57 ದಿನ ಸತತ ಉಪವಾಸ ಸತ್ಯಾಗ್ರಹವನ್ನೂ ನಡೆಸಿದ್ದಾರೆ. ಪರಿಣಾಮ ಆಗಿನ ಬಿಜೆಪಿ ಸರ್ಕಾರ ಆಸ್ಪತ್ರೆ ಪುನಾರಂಭಕ್ಕೆ ಒಪ್ಪಿತ್ತು. ಹಾಗೆಯೇ ಸಿಬ್ಬಂದಿ ಪುನಾ ನೇಮಕಕ್ಕೆ ಸಮ್ಮತಿಸಿತ್ತು.
ಆದರೆ ಸದ್ಯ ರಾಜ್ಯದಲ್ಲಿ ಸರ್ಕಾರ ಬದಲಾಗಿದೆ. ಕಾಂಗ್ರೆಸ್ ಸರ್ಕಾರದ ಗಮನ ಸೆಳೆಯಲು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಿಬ್ಬಂದಿ ಪುನಾ ಹೋರಾಟ ಮಾಡುವುದು ಅನಿವಾರ್ಯ ಎಂಬಂಥ ಸ್ಥಿತಿಯಿದೆ. ಹೀಗಾಗಿ ಪುನಾ ಸಿಬ್ಬಂದಿ ಹೋರಾಟಕ್ಕೆ ಸಜ್ಜಾಗಿದ್ದಾರೆ.
ಈ ಕುರಿತು 'ಕನ್ನಡಪ್ರಭ'ಕ್ಕೆ ಮಾತನಾಡಿದ ಒಪೆಕ್ ಉಳಿಸಿ ಹೋರಾಟ ಸಮಿತಿ ಮುಖಂಡ ಆರ್.ಮಾನಸಯ್ಯ ಅವರು, ರಾಜ್ಯ ಸರ್ಕಾರ ಈ ಹಿಂದೆ ಭರವಸೆ ನೀಡಿದಂತೆ ಕಾರ್ಯನಿರ್ವಹಿಸಿಲ್ಲ. ಹೀಗಾಗಿ ಸದ್ಯ ಪುನಾ ಹೋರಾಟಕ್ಕೆ ನಿರ್ಧರಿಸಲಾಗಿದೆ. ಆಸ್ಪತ್ರೆಯನ್ನು ಪುನಾರಂಭಿಸುವುದು, ಈ ಮೊದಲು ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯ ಪುನಾ ನೇಮಕ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜೂ.1ರಂದು ರಸ್ತೆ ತಡೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಎಚ್ಚರಿಸಿದ್ದಾರೆ.
ಈಗಾಗಲೇ ಕಳೆದ ಬಾರಿ 57 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ್ದ ಹೋರಾಟಗಾರರು ಪುನಾ ಪ್ರತಿಭಟನೆ ತೀವ್ರಗೊಳಿಸಲು ಮುಂದಾಗಿದ್ದಾರೆ. ಸರ್ಕಾರ ತುರ್ತಾಗಿ ಹೈ.ಕ. ಭಾಗದ ಜನರ ಬೇಡಿಕೆಗೆ ಸ್ಪಂದಿಸಬೇಕಿದೆ.
-ಜಗನ್ನಾಥ ಆರ್. ದೇಸಾಯಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement