ಗುಟ್ಕಾ ನಿಷೇಧ: ಕನ್ನಡ ಚಳವಳಿ ಸ್ವಾಗತ
ಸಿಂಧನೂರು: ರಾಜ್ಯ ಸರ್ಕಾರ ಮಾದಕ ವಸ್ತುಗಳಾದ ಸ್ಟಾರ್, ವಿಮಲ್, ಹೀರಾ ಮತ್ತಿತರ ಗುಟ್ಕಾಗಳನ್ನು ನಿಷೇಧ ಮಾಡಿ ಆದೇಶ ಹೊರಡಿಸಿರುವುದನ್ನು ಅಖಿಲ ಕರ್ನಾಟಕ ಕನ್ನಡ ಚಳವಳಿ ಸ್ವಾಗತಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅಖಿಲ ಕರ್ನಾಟಕ ಕನ್ನಡ ಚಳುವಳಿ ರಾಜ್ಯ ಸಂಚಾಲಕ ಕೆ.ಬಾಳಪ್ಪ ಇಲ್ಲಿಯವರೆಗೆ ಆಡಳಿತ ಮಾಡಿದ ಸರ್ಕಾರಗಳು ಗುಟ್ಕಾ ನಿಷೇಧ ಮಾಡುವಲ್ಲಿ ಯಾವುದೇ ರೀತಿಯ ಕ್ರಮ ಕೈಗೊಂಡಿರಲಿಲ್ಲ ಆದರೆ ಇದೀಗ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ಯು.ಟಿ. ಖಾದರ್ ಹೊಸ ಹೆಜ್ಜೆ ಇಟ್ಟಿರುವುದು ನಿಜಕ್ಕೂ ಶ್ಲಾಘನೀಯ. ಇದರಿಂದಾಗಿ ಯುವಜನತೆ ದಾರಿತಪ್ಪಿ ನಾಡು, ನುಡಿಯ ರಕ್ಷಣೆ ಮರೆತು ತಮ್ಮ ಇರುವಿಕೆ ಅರಿಯದೇ ಹೋಗಿ ಪರಿಸರ ಮಾಲಿನ್ಯ ಉಂಟು ಮಾಡುತ್ತಿದ್ದರು.
ಉಗುಳಿ... ಉಗುಳಿ ರೋಗ ತಂದು ಕೊಳ್ಳುವಿಕೆಯನ್ನು ಸರ್ಕಾರ ತಡೆದಿರುವುದು ಯುವಕರಿಗೆ, ಬಡವರಿಗೆ, ಕೂಲಿಕಾರರಿಗೆ ಸಹಾಯಕವಾಗಿದೆ. ಇದೇ ರೀತಿಯಾಗಿ ಬೀಡಿ ಸಿಗರೇಟ್ ನಿಷೇಧಿಸಿದರೆ ಇನ್ನೂ ಒಳಿತಾದಿತು ಎಂದು ಅವರು ತಿಳಿಸಿದ್ದಾರೆ.