ರಾಜಾ ಕಾಲುವೆ ಸ್ವಚ್ಛತೆ ಶುರು
ರಾಯಚೂರು: ನಗರದಲ್ಲಿ ಇತ್ತೀಚೆಗೆ ಸುರಿದ ಮಳೆಯ ವೇಳೆ ಚರಂಡಿ ನೀರು ಕೆಲ ಮನೆಗಳಿಗೆ ನುಗ್ಗಿ ತೊಂದರೆ ಉಂಟಾದ ಘಟನೆಯಿಂದ ಕೊನೆಗೂ ನಗರಸಭೆ ಎಚ್ಚೆತ್ತಿದ್ದು, ರಾಜಾ ಕಾಲುವೆಯ ಸ್ವಚ್ಛತೆಗೆ ಗಮನಹರಿಸಿದೆ. ನಗರದಲ್ಲಿ ಶುಕ್ರವಾರ ವಿವಿಧೆಡೆ ರಾಜಾ ಕಾಲುವೆಯ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
ನಗರದ ಚಂದ್ರಮೌಳೇಶ್ವರ ವೃತ್ತದ ಬಳಿ ನಗರಸಭೆಯ ಜೆಸಿಬಿ ಯಂತ್ರ ಬಳಸಿ ರಾಜಾ ಕಾಲುವೆಯಲ್ಲಿ ತುಂಬಿದ್ದ ಕಸ, ತ್ಯಾಜ್ಯವನ್ನು ಸ್ವಚ್ಛಗೊಳಿಸಲಾಯಿತು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜ್ ಅವರು ಕಾಲುವೆಯಲ್ಲಿ ತ್ಯಾಜ್ಯ, ಕಸ ಬಿಸಾಕದಂತೆ ಸುತ್ತಲಿನ ಪ್ರದೇಶದ ಅಂಗಡಿಗಳ ಮಾಲೀಕರಿಗೆ ಎಚ್ಚರಿಕೆ ನೀಡಿದರು. ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.