ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಶಾಸಕ ಬಾದರ್ಲಿ ಪುತ್ರನ ಮದುವೆಗೆ ಭಾರಿ ಸಿದ್ಧತೆ

Lingaraj Badiger
Updated On : 1 Jun 2013, 11:09 am

ಕನ್ನಡಪ್ರಭ ವಾರ್ತೆ, ಸಿಂಧನೂರು, ಮೇ 31
ನಗರದಲ್ಲಿ ಶನಿವಾರ ನಡೆಯಲಿರುವ ಶಾಸಕ ಹಂಪನಗೌಡ ಬಾದರ್ಲಿಯವರ ಪುತ್ರನ ಮದುವೆಗೆ ಪಿಡಬ್ಲ್ಯೂಡಿ ಕ್ಯಾಂಪಿನ ಸರ್ಕಾರಿ ಪಪೂ ಕಾಲೇಜು ಆವರಣದಲ್ಲಿ ಅದ್ಧೂರಿ ತಯಾರಿ ನಡೆದಿದ್ದು, ಮಳೆರಾಯನ ಆರ್ಭಟಕ್ಕೆ ಬಾದರ್ಲಿ ಬಳಗ ಕಂಗೆಟ್ಟಿದೆ.
ಶಾಸಕರಾಗಿ ಆಯ್ಕೆಯಾದ ಬೆನ್ನಲ್ಲೇ ಹಂಪನಗೌಡರ ಏಕೈಕ ಪುತ್ರ ಚನ್ನಬಸನಗೌಡನ ವಿವಾಹ ಮಹೋತ್ಸವಕ್ಕೆ ಭಾರಿ ತಯಾರಿ ನಡೆದಿದೆ. ಮೂಲಗಳ ಪ್ರಕಾರ- ವಿಶಾಲವಾದ ಕಾಲೇಜಿನ ಆವರಣದಲ್ಲಿ 25 ಲಕ್ಷ ವೆಚ್ಚದಲ್ಲಿ ಟೆಂಟ್ ನಿರ್ಮಾಣಗೊಳ್ಳುತ್ತಿದೆ ಎಂದು ಹೇಳಲಾಗಿದೆ. 25 ಸಾವಿರ ಆಮಂತ್ರಣ ಪತ್ರಿಕೆ ಮುದ್ರಿಸಲಾಗಿದ್ದು, ಅದರಲ್ಲಿ ಮೂರು ವಿವಿಧ ನಮೂನೆಯಲ್ಲಿದ್ದು, ಈಗಾಗಲೇ ವಿತರಣೆಯಾಗಿವೆ.
ಸುಮಾರು 35 ಸಾವಿರ ಜನರ ಆಗಮನ ನಿರೀಕ್ಷೆಯನ್ನು ಹೊಂದಿದ್ದು ಆ ಹಿನ್ನೆಲೆಯಲ್ಲಿ ಅಡುಗೆ ತಯಾರಿಸಲು ಬಾಣಸಿಗರನ್ನು ಈಗಾಗಲೇ ಕರೆಯಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಒಂದು ಹಂತದಲ್ಲಿ ಇದು ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನದಂತೆ ಕಾಣಿಸುತ್ತಿದೆ.
ರಸ್ತೆಯೂ ಝಗಮಗ: ಬಾದರ್ಲಿ ಪುತ್ರ ಸೇರಿದಂತೆ ಅವರ ಬಂಧುಗಳ ಮೂರು ಮದುವೆಗಳಿಗೆ ಕರ್ನಾಟಕದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸುಮಾರು 7ರಿಂದ 8 ಸಚಿವರು, ಕೇಂದ್ರದ ಸಚಿವರು ಹಾಗೂ ಮಾಜಿ ಸಚಿವರು ಆಗಮಿಸುತ್ತಿದ್ದಾರೆ. ಕಿತ್ತೂರು ಚನ್ನಮ್ಮ ವೃತ್ತದಿಂದ ಬಾದರ್ಲಿಯವರ ಮನೆಗೆ ಹೋಗುವ ರಸ್ತೆ ಈಗ ಸಂಪೂರ್ಣ ಬದಲಾಗಿದೆ. ಅಲ್ಲಿ ಮೊದಲು ಕೈಯಲ್ಲಿ ಜೀವ ಹಿಡಿದುಕೊಂಡು ಪಾದಚಾರಿಗಳು ಸಂಚರಿಸುವಂತಿತ್ತು.
ಅನೇಕ ಬೈಕ್ ಸವಾರರು ಅಂಚೆ ಇಲಾಖೆ ಬಳಿ ಬಾಯಿ ತೆಗೆದು ನಿಂತಿರುವ ಚರಂಡಿಗೆ ಬಿದ್ದಿದ್ದಾರೆ. ಈಗಲೂ ಅಲ್ಲಿ ದೊಡ್ಡದಾದ ಕಬ್ಬಿಣದ ರಾಡ್ ಕಟ್ಟಲಾಗಿದೆ. ಈಗ ಅವರ ಮನೆಗೆ ತಲುಪುವ ರಸ್ತೆಗೆ ನಗರಸಭೆಯವರು ಕೇವಲ 2 ದಿನಗಳಲ್ಲಿ ಸಿಮೆಂಟ್ ರಸ್ತೆಯನ್ನಾಗಿ ಪರಿವರ್ತಿಸಿದ್ದಾರೆ. ಇದಕ್ಕೆ ಕಾರಣ ಕೇಳಿದರೆ ಸಿಎಂ ಆಗಮಿಸುವ ಹಿನ್ನೆಲೆಯಲ್ಲಿ ರಸ್ತೆ ನಿರ್ಮಿಸಲಾಗಿದೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.
ಜನರ ಸಮಸ್ಯೆಗೂ ಸ್ಪಂದಿಸಿ: ನಗರದಲ್ಲಿ ಕುಡಿಯುವ ನೀರು 5 ದಿನಗಳಿಗೊಮ್ಮೆ ಬರುತ್ತಿದೆ. ನೀರಿಗಾಗಿ ಕೆಲ ವಾರ್ಡ್ಗಳಲ್ಲಿ ಜನ ಪರಿತಪಿಸುತ್ತಿದ್ದಾರೆ. ಕೆಲವರು ಮಲ- ಮೂತ್ರ ವಿಸರ್ಜನೆಗೂ ಪರದಾಡಬೇಕಾದ ಸ್ಥಿತಿ ಬಂದೊದಗಿದೆ. ಹೀಗಾಗಿ ಅನೇಕ ಕಾಲೋನಿಗಳ ಮಹಿಳೆಯರು ಬಸ್ ನಿಲ್ದಾಣದ ಶೌಚಾಲಯಗಳಿಗೆ ಹೋಗಿ ದೇಹಬಾಧೆ ತೀರಿಸಿಕೊಂಡು ಬರುತ್ತಿದ್ದಾರೆ.
ಬಾದರ್ಲಿ ಗೌಡರ ಮನೆಯ ಮುಂದಿನ ರಸ್ತೆಗೆ ನಗರಸಭೆಯವರು ರಾತ್ರೋರಾತ್ರಿ ನಿರ್ಣಯ ತೆಗೆದುಕೊಂಡಂತೆ ಕುಡಿಯುವ ನೀರಿಗೂ ಮುಂದಾಲೋಚನೆ ವಹಿಸಿ ನಿರ್ಣಯ ಕೈಗೊಂಡಿದ್ದರೆ ನಗರದಲ್ಲಿ ಕುಡಿಯುವ ನೀರಿಗಾಗಿ ಜನತೆ ಇಷ್ಟೊಂದು ಪರಿತಪಿಸುತ್ತಿದ್ದಿಲ್ಲ ಎಂಬುದು ಪ್ರಜ್ಞಾವಂತರ ಅಭಿಪ್ರಾಯ.

ಮದುವೆಗೆ ಸಿಎಂ ಸಿದ್ದು, ಕೇಂದ್ರ- ರಾಜ್ಯ ಸಚಿವರ ದಂಡು
ಕನ್ನಡಪ್ರಭ ವಾರ್ತೆ, ಸಿಂಧನೂರು, ಮೇ 31
ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರ ಪುತ್ರ ಚನ್ನಬಸನಗೌಡನ ವಿವಾಹವು ಜೂ. 2ರಂದು ನಡೆಯಲಿದ್ದು, ವಿವಾಹಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸಚಿವರ ದಂಡು ಆಗಮಿಸುತ್ತಿದೆ ಎಂದು ತಿಳಿದು ಬಂದಿದೆ.
ವಿವಾಹವು ಸ್ಥಳೀಯ ಸರ್ಕಾರಿ ಪಪೂ ಕಾಲೇಜಿನಲ್ಲಿ ನಡೆಯಲಿದ್ದು ಈಗಾಗಲೇ ಬೃಹತ್ ವೇದಿಕೆಯನ್ನು ಸಿದ್ಧಪಡಿಸಲಾಗಿದೆ. ಮಳೆ ಬಂದರೂ ನೀರು ಬರದಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಸುಮಾರು 30 ಸಾವಿರಕ್ಕೂ ಹೆಚ್ಚು ಜನ ಆಗಮಿಸುವ ನಿರೀಕ್ಷೆ ಇದೆ. ಸುಮಾರು 300 ಜನ ವೇದಿಕೆಯ ಮೇಲೆ ಏಕಕಾಲಕ್ಕೆ ತೆರಳಿ ಅಕ್ಷತೆ ಹಾಕುವಂತೆ ವ್ಯವಸ್ಥೆ ಮಾಡಲಾಗಿದೆ. 8 ಸಾವಿರ ಜನ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
15ಕ್ಕೂ ಹೆಚ್ಚು ಸಮಿತಿ ರಚನೆ: ವಿವಾಹದ ಯಶಸ್ವಿಗೆ ಸುಮಾರು 15ಕ್ಕೂ ಹೆಚ್ಚು ಸಮಿತಿಗಳನ್ನು ರಚಿಸಿಕೊಂಡು ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ, ಸುಮಾರು 15ಕ್ಕೂ ಹೆಚ್ಚು ಸಚಿವರು, ಶಾಸಕರು, ಎಂಎಲ್ಸಿಗಳು, ಮಾಜಿ ಶಾಸಕರು, ಮಾಜಿ ಎಂಎಲ್ಸಿಗಳು, ವಿವಿಧ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಮುಖಂಡರು, ಮಠಾಧೀಶರು, ಸಂಘ-ಸಂಸ್ಥೆಗಳ ಮುಖಂಡರು, ಅಧಿಕಾರಿ ವರ್ಗದವರು ಆಗಮಿಸಲಿದ್ದಾರೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎನ್.ಶಿವನಾಗಪ್ಪ, ಎಂ.ಕಾಳಿಂಗಪ್ಪ, ಹನುಮನಗೌಡ ಬೆಳಗುರ್ಕಿ, ವಿರೂಪಾಕ್ಷಪ್ಪ ನಾಯಕ, ಎಪಿಎಂಸಿ ಅಧ್ಯಕ್ಷ ಕರಿಯಪ್ಪ, ಮಾಜಿ ಉಪಾಧ್ಯಕ್ಷ ಆರ್.ತಿಮ್ಮಯ್ಯ ನಾಯಕ, ಅಮರೇಶ ಪಾಟೀಲ್, ಯಮನಪ್ಪ ಮಲ್ಲಾಪೂರ, ಎಸ್.ಶರಣೇಗೌಡ, ಪ್ರಭುರಾಜ, ಎಸ್.ದೇವೇಂದ್ರಗೌಡ, ಜಾಫರ್ಅಲಿ ಜಾಗೀರದಾರ, ಎನ್.ಶರಣೆಗೌಡ, ಸಿದ್ರಾಮಪ್ಪ ಮಾಡಸಿರವಾರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement