ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ತೆಲುಗು ಸದ್ದು; ಕನ್ನಡಕ್ಕೆ ಗುದ್ದು!

Mainashree
Updated On : 2 Nov 2013, 1:01 am

ರಾಯಚೂರು: ನಿಜಾಮರ ಆಡಳಿತದಲ್ಲಿ ಉರ್ದು ಮತ್ತು ಹಿಂದಿ ಭಾಷೆ, ನಂತರ ಜಿಲ್ಲೆಗೆ ವಲಸಿಗರಿಂದ ತೆಲುಗು ಕೊಡುಗೆ. ಅನ್ಯಭಾಷೆಗಳ ಅಬ್ಬರಕ್ಕೆ ಕನ್ನಡವಿಲ್ಲಿ ಸೊರಗುತ್ತಿದೆ. ಸರ್ಕಾರಿ ಕಚೇರಿಗಳೂ ಸೇರಿ ಎಲ್ಲೆಡೆ ಈಗಲೂ ಹಿಂದಿ, ತೆಲುಗು ಕಲರವ. ಕನ್ನಡಕ್ಕೆ ಆಡಳಿತ ಭಾಷೆಯ ಸ್ಥಾನಮಾನವಿದ್ದರೂ ಆಡುಭಾಷೆಯಾಗಿ ಬಳಕೆಯಾಗೋದು ಅಲ್ಲಲ್ಲಿ ಮಾತ್ರಆಂಧ್ರದೊಂದಿಗೆ ಗಡಿ ಹಂಚಿಕೊಂಡಿರುವ ರಾಯಚೂರು ಜಿಲ್ಲೆಯಲ್ಲಿ ಕಂಡು ಬರುವ ಕನ್ನಡ ಭಾಷೆ ಎದುರಿಸುತ್ತಿರುವ ಸವಾಲಿದು. ಬೆಂಗಳೂರು ದೂರ, ಪಕ್ಕದಲ್ಲೇ ಆಂಧ್ರ. ಜಿಲ್ಲೆಯವರಿಗೆ ಆಂಧ್ರದ ಜತೆ ವಹಿವಾಟು ಹೆಚ್ಚು. ಪರಿಣಾಮ ಹಿಂದಿ, ಉರ್ದು, ತೆಲುಗು ಪ್ರಭಾವ ಹೆಚ್ಚು.
ತುಂಗಭದ್ರಾ ಮತ್ತು ಕೃಷ್ಣಾ ನದಿಗಳಿಂದ ಜಿಲ್ಲೆ ನೀರಾವರಿಯಾದ ಮೇಲೆ ಆಂಧ್ರದಿಂದ ಸಾವಿರಾರು ಸಂಖ್ಯೆಯ ಕೃಷಿಕರು ಹಾಗೂ ಕೃಷಿ ಕೂಲಿಕಾರರ ವಲಸೆಯಾಗಿದೆ. ಜತೆಗೆ ತೆಲುಗು ಭಾಷೆಯೂ ವಲಸೆ ಬಂದಿದೆ. ವ್ಯಾಪಾರ ವಹಿವಾಟಿಗಾಗಿ ಸ್ಥಳೀಯ ಕನ್ನಡಿಗರಿಗೂ ಈ ಮೂರು ಭಾಷೆ ಕಲಿಯುವ ಅನಿವಾರ್ಯತೆ. ಅದರ ಭರದಲ್ಲಿ ಕನ್ನಡ ಮರೆವೂ ಸಹಜ. ರಾಯಚೂರು ನಗರದಲ್ಲಿ ಹಿಂದಿ, ಉರ್ದು, ತೆಲುಗು ಭಾಷೆಯದ್ದೇ ಸದ್ದು. ಜಿಲ್ಲೆಯ ನಗರ ಪ್ರದೇಶಗಳಲ್ಲಿ ಬಹುತೇಕ ಕಡೆ ತೆಲುಗಿಗೆ ಹೆಚ್ಚು ಆದ್ಯತೆ. ನಂತರದ ಸ್ಥಾನ ಕನ್ನಡದ್ದು. ಕನ್ನಡ ಭಾಷೆ ಹೆಚ್ಚಾಗಿ ಬಳಕೆಯಾಗುವುದು ಹಳ್ಳಿಗಳಲ್ಲಿ ಮಾತ್ರ.
ಆಂಧ್ರದೊಂದಿಗೆ ಗಡಿ ಹಂಚಿಕೊಂಡಿರುವ ಸುಮಾರು 50ಕ್ಕೂ ಹೆಚ್ಚಿನ ಗ್ರಾಮಗಳಲ್ಲಿನ ಶಾಲೆಗಳು ಕನ್ನಡ ಮಾಧ್ಯಮದಲ್ಲಿಯೇ ಬೋಧಿಸುತ್ತಿವೆ. ಅಲ್ಲಿನ ಮಕ್ಕಳಿಗೆ ಕನ್ನಡ ಕಲಿಕೆ ಕಬ್ಬಿಣದ ಕಡಲೆ. ಗಡಿ ಭಾಗದ ಶಾಲೆಯಲ್ಲಿ ಕಲಿಯುವ ಮಕ್ಕಳ ಪಾಲಕರು ಆಂಧ್ರದ ಕೃಷಿ ಕಾರ್ಮಿಕರು. ಆಗಾಗ ಪಾಲಕರು ಹಾಗೂ ಮಕ್ಕಳು ಆಂಧ್ರಕ್ಕೆ ಹೋಗಿ ಮರಳುವುದು ರೂಢಿ. ಪರಿಣಾಮ ಕನ್ನಡ ಕಲಿತದ್ದನ್ನು ಮರೆತು ಮತ್ತೆ ಮತ್ತೆ ಅಕ್ಷರಗಳನ್ನು ಕಲಿಯುವ ಅನಿವಾರ್ಯತೆ. ಗಡಿ ಗ್ರಾಮದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಬೋಧನೆಗೆ ಶಿಕ್ಷಕರೇ ತೆಲುಗು ಕಲಿತಿದ್ದಾರೆ. ಮಕ್ಕಳಿಗೆ ತೆಲುಗಿನಲ್ಲಿಯೇ ಕನ್ನಡ ಪದದ ಅರ್ಥ ಬೋಧಿಸಿದರೆ ಅರ್ಥವಾಗುತ್ತದೆ ಎಂಬುದು ಶಿಕ್ಷಕರ ಅಳಲು. ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಚಲನಚಿತ್ರಗಳು ಪ್ರಮುಖ ಪಾತ್ರವಹಿಸುತ್ತವೆ ಎಂಬುದು ಬಹುತೇಕರ ಅನಿಸಿಕೆ. ನಗರ ಸೇರಿ ಜಿಲ್ಲಾದ್ಯಂತ ಕನ್ನಡ ಚಿತ್ರಗಳ ಪ್ರದರ್ಶನ ತೀರಾ ಕಡಿಮೆ. ಯಾವಾಗಲೂ ತೆಲುಗು, ಹಿಂದಿ ಸಿನಿಮಾಗಳದ್ದೇ ಅಬ್ಬರ. ಕನ್ನಡಿಗರೂ ಕನ್ನಡ ಸಿನಿಮಾಗಳಲ್ಲಿನ ಮನರಂಜನೆ ಕೊರತೆ ಪರಿಣಾಮ ತೆಲುಗು ಸಿನಿಮಾಗಳ ಆರಾಧಕರಾಗಿದ್ದಾರೆ.

ಜಗನ್ನಾಥ ಆರ್. ದೇಸಾಯಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement