ನಾಡು-ನುಡಿ, ಸಂಸ್ಕೃತಿ ರಕ್ಷಣೆಗೆ ಬದ್ಧ
ಕನ್ನಡಪ್ರಭ ವಾರ್ತೆ ರಾಯಚೂರು ನ.1
ಕನ್ನಡ ಭಾಷೆ, ಸಂಸ್ಕೃತಿಯನ್ನು ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಶ್ರಮಿಸುತ್ತಿದೆ. ಕಲೆ, ಸಂಸ್ಕೃತಿ ಭಾಷೆಯ ಬೆಳವಣಿಗೆಯೊಂದಿಗೆ ನಾಡಿನ ಜನರ ಬದುಕಿನ ಸುಧಾರಣೆಗೆ ಪೂರಕ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಕನ್ನಡ ರಾಜ್ಯೋತ್ಸವ ಸಂದರ್ಭ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸಮೃದ್ಧ ಕರ್ನಾಟಕ ನಿರ್ಮಾಣ ಸರ್ಕಾರದ ಗುರಿಯಾಗಿದೆ. ಕನ್ನಡ ನಾಡಿನಲ್ಲಿ ನೆಲೆಸಿರುವ ಎಲ್ಲರೂ ಕನ್ನಡ ಭಾಷೆಯನ್ನು ಕಲಿತು ಕನ್ನಡಿಗರೊಂದಿಗೆ ಜತೆಗೂಡಿ ನಾಡಿನ ಅಭಿವೃದ್ಧಿಗೆ ಕೈಜೋಡಿಸುವಂತೆ ಮನವಿ ಮಾಡಿದರು.
ಸಾಹಿತ್ಯ ದಿಗ್ಗಜರ ನೆನಹು ಎಲ್ಲರ ಕರ್ತವ್ಯ: ಕನ್ನಡ ರಾಜ್ಯೋತ್ಸವವು ಭಾಷೆ, ಸಂಸ್ಕೃತಿ, ಚಾರಿತ್ರಿಕ ಘಟನೆಗಳನ್ನು ಸ್ಮರಿಸುತ್ತಾ ನಾಡು- ನುಡಿಗಾಗಿ ಶ್ರಮಿಸಿದವರನ್ನು ನೆನಪಿಸಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ ಎಂದ ಅವರು, ಕನ್ನಡ ಭಾಷೆಯ ಸಾಹಿತ್ಯ ಲೋಕದಲ್ಲಿನ ಸಾಧನೆಗೆ 8 ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಈ ಮೂಲಕ ಭಾಷೆಗೆ ರಾಷ್ಟ್ರಮಟ್ಟದಲ್ಲಿ ಗೌರವ ಸಂದಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕನ್ನಡದ ಕೆಲಸಕ್ಕೆ ಮಾನವಿ ನರಸಿಂಗರಾಯರು, ತವಗ ಭೀಮಸೇನರಾಯರು, ಪಿ.ಬಿ. ದೇಸಾಯಿ ಅವರಂಥ ಹೋರಾಟಗಾರರು ನಿರಂತರ ಶ್ರಮಿಸಿ ಕನ್ನಡಕ್ಕಾಗಿ ಹೋರಾಡಿದ್ದಾರೆಂದು ಸ್ಮರಿಸಿದರು.
ಗೌರವವಂದನೆ ಸ್ವೀಕಾರ: ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್, ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ವಿವಿಧ ಶಾಲೆಗಳ ಮಕ್ಕಳು ಆಕರ್ಷಕ ಕವಾಯತಿನಲ್ಲಿ ಪಾಲ್ಗೊಂಡಿದ್ದರು. ಸಚಿವ ಡಾ. ಶರಣಪ್ರಕಾಶ ಪಾಟೀಲ್ ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿದರು.ಈ ಸಂದರ್ಭ ಶಾಸಕ ಡಾ. ಶಿವರಾಜ್ ಪಾಟೀಲ್, ಪ್ರತಾಪಗೌಡ ಪಾಟೀಲ್, ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು, ಜಿಲ್ಲಾ ಎಸ್ಪಿ ಎಂ.ಎನ್. ನಾಗರಾಜ್, ಎಡಿಸಿ ತಿಮ್ಮಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತಕುಮಾರ್ ಸೇರಿ ಅನೇಕ ಗಣ್ಯರಿದ್ದರು. ನಂತರ ಸೇಂಟ್ ಮೇರೀಸ್ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಮೆರವಣಿಗೆ: ಇದಕ್ಕೂ ಪೂರ್ವದಲ್ಲಿ ಬೆಳಗ್ಗೆ 7ಕ್ಕೆ ಕರ್ನಾಟಕ ಸಂಘದಿಂದ ಕನ್ನಡತಾಯೆ ಶ್ರೀಭುವನೇಶ್ವರಿಯ ಮೂರ್ತಿಯ ಭವ್ಯ ಮೆರವಣಿಗೆಗೆ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಚಾಲನೆ ನೀಡಿದರು. ಜಿಪಂ ಸಿಇಒ ಡಾ. ಮುದ್ದುಮೋಹನ್, ನಗರಸಭೆ ಅಧ್ಯಕ್ಷೆ ಮಹಾದೇವಮ್ಮ ಸೇರಿ ಪ್ರಮುಖರು ಉಪಸ್ಥಿತರಿದ್ದರು.
ನಂತರ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಜಿಲ್ಲಾ ಕ್ರೀಡಾಂಗಣಕ್ಕೆ ತಲುಪಿತು. ಮೆರವಣಿಗೆಯಲ್ಲಿ ಈಶಾನ್ಯ ಸಾರಿಗೆ ಸಂಸ್ಥೆಯ ರಾಯರಥ ಸ್ತಬ್ಧಚಿತ್ರ ಸೇರಿ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು ಪಾಲ್ಗೊಂಡು ನೋಡುಗರ ಗಮನ ಸೆಳೆದವು.