ನಿರ್ಲಕ್ಷ್ಯ; ಕನ್ನಡಪರ ಸಂಘಟನೆಗಳ ಪ್ರತಿಭಟನೆ
ಸಿಂಧನೂರು: ನಗರದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಶುಕ್ರವಾರ ತಾಲೂಕಾಡಳಿತದಿಂದ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಕನ್ನಡಪರ ಸಂಘಟನೆಗಳ ಮುಖಂಡರು ವೇದಿಕೆಗೆ ಆಹ್ವಾನಿಸದಿರುವುದನ್ನು ಪ್ರತಿಭಟಿಸಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.
ಕನ್ನಡಕ್ಕಾಗಿ ಹೋರಾಡುವ ಕನ್ನಡಪರ ಸಂಘಟನೆಗಳನ್ನು ನಿರ್ಲಕ್ಷಿಸಿ ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯೆಯರ ಗಂಡಂದಿರನ್ನು ವೇದಿಕೆ ಆಹ್ವಾನಿಸಿದ್ದಾರೆ. ಇದು ಹೋರಾಟಗಾರರಿಗೆ ಮಾಡಿದ ಅಪಮಾನ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ಅಜಿತ್ ಓಸ್ತುವಾಲ್ ಆರೋಪಿಸಿದರು.
ಪ್ರತಿವರ್ಷವೂ ತಾಲೂಕಾಡಳಿತ ಕನ್ನಡಪರ ಸಂಘಟನೆಗಳ ಮುಖಂಡರಿಗೆ ಇದೇ ರೀತಿ ಅಪಮಾನ ಮಾಡುತ್ತಿದೆ.ಪ್ರೋಟೋಕಾಲ್ ಬಗ್ಗೆ ಹೇಳುವ ತಹಸೀಲ್ದಾರ್ ನಗರಸಭೆ ಸದಸ್ಯರ ಬಗ್ಗೆ ಯಾಕೆ ಅಷ್ಟೊಂದು ಪ್ರೀತಿ ತೋರಿಸುತ್ತಿದ್ದಾರೆ. ಪ್ರೋಟೊಕಾಲ್ ಪ್ರಕಾರ ನಗರಸಭೆ ಸದಸ್ಯರಿಗೆ ಅವಕಾಶವೇ ಇಲ್ಲ ಎಂದು ಕರವೇ ನಾರಾಯಣಗೌಡ ಬಣದ ಅಧ್ಯಕ್ಷ ಗಂಗಣ್ಣ ಡಿಶ್ ಟೀಕಿಸಿದರು.ಏಕಾಏಕಿ ಪ್ರತಿಭಟನೆ ಆರಂಭವಾದಾಗ ಪೊಲೀಸರು, ನಗರಸಭಾಧ್ಯಕ್ಷ ಜಾಫರ್ ಅಲಿ ಜಾಗೀರದಾರ ಮತ್ತಿತರ ಮುಖಂಡರು ಸಂಘಟನೆಗಳ ಮುಖಂಡರನ್ನು ಸಮಾಧಾನಪಡಿಸಿದರು. ನಂತರ ಕಾರ್ಯಕ್ರಮ ನಡೆಯಿತು.