ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ರಾಜ್ಯೋತ್ಸವ ವೈವಿಧ್ಯ...

Mainashree
Updated On : 2 Nov 2013, 1:02 am

ಸ್ವಸಂತ್ರ, ಫುಲ್ ಹ್ಯಾಪಿ, ಕುಯೆಂಪು...!
ರಾಯಚೂರು: ಸ್ವಸಂತ್ರ ನಾಡು... ಕುಯೆಂಪು ಅವರ ಕನ್ನಡ, ಕ್ಲಾಪ್ಸ್ ಹಾಕಿ, ನೋ ಬಿ.ಪಿ. ಫುಲ್ ಹ್ಯಾಪಿ... ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ನಿರೂಪಣೆ ಮಾಡುತ್ತಿದ್ದವರು ಕನ್ನಡದ ಸಮಾರಂಭದಲ್ಲಿಯೇ ಕನ್ನಡಕ್ಕೆ ಒದಗಿಸಿದ ದುರ್ಗತಿಯ ಉದಾಹರಣೆಗಳಿವು. ವೈದ್ಯಕೀಯ ಶಿಕ್ಷಣ, ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳ ಆರಂಭಿಸಲು ಸೂಚಿಸಿದ ವೇಳೆ ನಿರೂಪಕರಾಗಿದ್ದವರು ನಮ್ಮದು ಸ್ವಸಂತ್ರ(ಸ್ವತಂತ್ರ ಆಗಬೇಕಿತ್ತು)ನಾಡು, ಕುಯೆಂಪು(ಕುವೆಂಪು) ಅವರ ನಾಡಿದು ಎಂದು ಹೊಗಳುತ್ತಲೇ ಚಪ್ಪಾಳೆ ತಟ್ಟಿ ಮಕ್ಕಳನ್ನು ಪ್ರೋತ್ಸಾಹಿಸಿ ಎನ್ನುವ ಬದಲಿಗೆ ಕ್ಲಾಪ್ಸ್ ಹಾಕಿ ನೋ ಬಿ.ಪಿ. ಫುಲ್ ಹ್ಯಾಪಿ ಎಂದು ಹೇಳಿ ಕನ್ನಡ ಕಾರ್ಯಕ್ರಮದಲ್ಲಿ ಎಲ್ಲರ ಅಸಮಾಧಾನಕ್ಕೆ ಕಾರಣರಾದರು.

ಡಿವೈಎಸ್ಪಿ ಪಾಷಾ ಕನ್ನಡ ಕಲರವ..
ರಾಯಚೂರು: ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ... ನಾವಾಡುವ ನುಡಿಯೇ ಕನ್ನಡ ನುಡಿ... ಎಂಬ ಹಾಡುಗಳಿಗೆ ಕುದುರೆಯೇರಿ ಜಿಲ್ಲಾ ಪೊಲೀಸ್ ಇಲಾಖೆಯ ಡಿವೈಎಸ್ಪಿ ಎಂ.ಪಾಷಾ ಬರುತ್ತಿದ್ದಂತೆಯೇ ಡಾ. ರಾಜ್‌ಕುಮಾರ್ ನೆನಪು ಕಾಡಿತ್ತು. ಹಾಗಾಗಿ ನೆರೆದಿದ್ದವರು ಕೆಲಕಾಲ ಎದ್ದು ನಿಂತು ಸಂಭ್ರಮಿಸಿದರು.ಕನ್ನಡ ನಾಡಿನ ಭಾಷೆ, ಕಲೆ ಮತ್ತು ಸಂಸ್ಕೃತಿಯ ಸೊಬಗು ಬಣ್ಣಿಸುವ ಕನ್ನಡ ಚಲನಚಿತ್ರ ಗೀತೆಗಳ ಹಾಡಿಗೆ ಜೀವತುಂಬಿ ಅಭಿನಯಿಸಿ ನೆರೆದಿದ್ದವರನ್ನು ಆಕರ್ಷಿಸಿದ್ದು ನಗರದ ಜಿಲ್ಲಾ ಪೊಲೀಸ್ ಇಲಾಖೆಯ ಡಿಎಸ್ಪಿ ಎಂ.ಪಾಷಾ.ಕಳೆದ ಬಾರಿಯಂತೆ ಈ ಬಾರಿಯೂ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಾರ್ವಜನಿಕರ ವಿಶೇಷ ಗಮನ ಸೆಳೆಯಿತು. ಸಮಾರಂಭದಲ್ಲಿ ಸಚಿವರ ಭಾಷಣ ಮುಗಿಯುತ್ತಿದ್ದಂತೆಯೇ ಕ್ರೀಡಾಂಗಣದ ಮೂಲೆಯಿಂದ ಕನ್ನಡ ಧ್ವಜ ಹಿಡಿದು ಕುದುರೆಯೇರಿ ಬಂದ ಡಿಎಸ್ಪಿ ಎಂ.ಪಾಷಾ ಅವರು ಡಾ. ರಾಜ್ ಅಭಿನಯದ ಸೂಪರ್ ಹಿಟ್ ಹಾಡುಗಳಿಗೆ ಅಭಿನಯಿಸಿ ಜೀವ ತುಂಬಿ ನೆರೆದಿದ್ದವರ ಮನಸೂರೆಗೊಂಡು ಸಚಿವರಿಂದಲೂ ಶಹಭಾಷ್ ಗಿರಿ ಪಡೆದರು.
ಮನ ಸೂರೆಗೊಂಡ ರಾಯ ರಥ
ರಾಯಚೂರು: ಈಶಾನ್ಯ ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿಯವರು ಕನ್ನಡ ಉಳಿಸಿ ಬೆಳೆಸುವಲ್ಲಿ ಯಾವತ್ತೂ ವಿಶೇಷತೆ ಮೆರೆಯುತ್ತಾರೆ. ಈ ಬಾರಿಯೂ ಕನ್ನಡ ರಾಜ್ಯೋತ್ಸವದಲ್ಲಿ ಸಂಸ್ಥೆಯು ನಗರದಲ್ಲಿ ಈಚೆಗೆ ಆರಂಭಿಸಿದ ನಗರ ಸಾರಿಗೆ ರಾಯರಥದ ಸ್ತಬ್ಧಚಿತ್ರ ಪ್ರದರ್ಶಿಸುವ ಮೂಲಕ ಗಮನ ಸೆಳೆದರು.ನಗರದ ಕರ್ನಾಟಕ ಸಂಘದಿಂದ ಆರಂಭಗೊಂಡ ಕನ್ನಡ ತಾಯೆ ಭುವನೇಶ್ವರಿ ಮೆರವಣಿಗೆಯಲ್ಲಿ ಈಶಾನ್ಯ ಸಾರಿಗೆ ಸಂಸ್ಥೆಯ ರಾಯಚೂರು ವಿಭಾಗೀಯ ಘಟಕದ ಕನ್ನಡ ಕ್ರಿಯಾ ಸಮಿತಿಯವರು ತಯಾರಿಸಿದ ರಾಯರಥ ನಗರ ಸಾರಿಗೆ ಬಸ್ ಹೋಲುವ ಸ್ತಬ್ಧಚಿತ್ರ ಪಾಲ್ಗೊಂಡಿತ್ತು. ಈಗಾಗಲೇ ನಗರದಲ್ಲಿ ರಾಯರಥ ಬಸ್ ಗಳು ಪ್ರಯಾಣಿಕರಿಗೆ ಉತ್ತಮ ರೀತಿಯ ಸೌಲಭ್ಯ ಒದಗಿಸುವ ಮೂಲಕ ಹೆಸರು ಗಳಿಸಿವೆ.ಸದ್ಯ ರಾಜ್ಯೋತ್ಸವ ಮೆರವಣಿಗೆಯಲ್ಲಿಯೂ ರಾಯರಥ ಪಾಲ್ಗೊಳ್ಳುವ ಮೂಲಕ ನಾಗರಿಕರ ಗಮನ ಸೆಳೆದು ಮೆಚ್ಚುಗೆಗೆ ಪಾತ್ರವಾಯಿತು. ಜತೆಗೆ ಸ್ತಬ್ಧಚಿತ್ರದ ಸುತ್ತಲೂ ಕನ್ನಡಕ್ಕೆ ಜ್ಞಾನಪೀಠ ಸಾಹಿತಿಗಳ ಭಾವಚಿತ್ರ ಮೆರುಗು ತಂದಿದ್ದು ಕಂಡುಬಂದಿತು.
ಕರವೇ ಹಾಲು-ಬ್ರೆಡ್ ವಿತರಣೆ
ಮುದಗಲ್: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸ್ಥಳೀಯ ಕರವೇ ಕಾರ್ಯಕರ್ತರು ಸಮುದಾಯ ಆರೋಗ್ಯ ಕೇಂದ್ರದ ಒಳರೋಗಿಗಳಿಗೆ ಹಾಲು- ಬ್ರೆಡ್ ವಿತರಿಸಿದರು.ಕರವೇ ಮುದಗಲ್ ಘಟಕದ ಅಧ್ಯಕ್ಷ ಎಸ್.ಎ. ನಹಿಂ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಡಾ. ರಾಜೇಂದ್ರಕುಮಾರ ಮನಗೂಳಿ, ಡಾ. ಈಶ್ವರ ಸವಡಿ, ಡಾ. ರುದ್ರಗೌಡ, ಕರವೇ ಕಾರ್ಯಕರ್ತರಾದ ಮೈಬೂಬ್, ಎಸ್.ಎನ್. ಖಾದ್ರಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement