ರಿಮ್ಸ್ಗೆ ಶಾಶ್ವತ ಮಾನ್ಯತೆ
ಕನ್ನಡಪ್ರಭ ವಾರ್ತೆ, ರಾಯಚೂರು, ನ.1
ನಗರದ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಎಂಸಿಐ ಮತ್ತು ಕೇಂದ್ರ ಸರ್ಕಾರಗಳು ಶಾಶ್ವತ ಮಾನ್ಯತೆ ನೀಡಿದ್ದು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.
ನಗರದಲ್ಲಿ ಶುಕ್ರವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ಈ ವಿಷಯ ತಿಳಿಸಿ, ಶೀಘ್ರದಲ್ಲಿಯೇ ಬೀದರಿನ ಸರ್ಕಾರಿ ವೈದ್ಯಕೀಯ ಕಾಲೇಜಿಗೂ ಎಂಸಿಐ ಶಾಶ್ವತ ಮಾನ್ಯತೆ ನೀಡಲಿದೆ. ಈಗಾಗಲೇ ಪ್ರಕ್ರಿಯೆ ಕೊನೆಯ ಹಂತದಲ್ಲಿದೆ. ಈ ಮೂಲಕ ಎರಡೂ ವೈದ್ಯಕೀಯ ಕಾಲೇಜುಗಳು ಗುಣಮಟ್ಟದ ಶಿಕ್ಷಣ ನೀಡಿಕೆಗೆ ಪೂರಕ ಸೌಲಭ್ಯ ಒದಗಿಸಿದಂತಾಗಿದೆ ಎಂದರು.
ಬೆಳೆ ಹಾನಿ ಪರಿಹಾರಕ್ಕೆ ಪ್ರಸ್ತಾವನೆ: ರಾಜ್ಯದ ವೈದ್ಯಕೀಯ ಶಿಕ್ಷಣ ಇಲಾಖೆಯ ಬಲವರ್ಧನೆ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲು ನಿರ್ಧರಿಸಿದ್ದು ಅದಕ್ಕೆ ಪೂರಕವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಸೆಪ್ಟೆಂಬರ್ನಲ್ಲಿ ಸುರಿದ ಧಾರಾಕಾರ ಮಳೆಯಿಂದಾದ ಬೆಳೆ ಹಾನಿಗೆ ಸಂಬಂಧಿಸಿ 96 ಲಕ್ಷ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಹೇಳಿದರು.
ರಾಯಚೂರಿನ ಒಪೆಕ್ ಆಸ್ಪತ್ರೆಯನ್ನು ನ.1ರಿಂದಲೇ ಆರಂಭಿಸಲಾಗುತ್ತಿದ್ದು, ಇದಕ್ಕಾಗಿ ಅಗತ್ಯ ಸಿದ್ಧತೆಗಳು ಮುಗಿದಿವೆ. ಸದ್ಯ ಕಾರ್ಡಿಯಾಲಜಿ, ನ್ಯೂರಾಲಜಿ ಸೇರಿ ಒಟ್ಟು 8 ಸೂಪರ್ ಸ್ಪೆಷಾಲಿಟಿ ಸೌಲಭ್ಯಗಳ ಹೊರರೋಗಿಗಳ ಚಿಕಿತ್ಸಾ ವಿಭಾಗಗಳನ್ನು ತೆರೆಯಲಾಗುತ್ತದೆ. ಮುಂದಿನ ಮೂರು ತಿಂಗಳಿನಲ್ಲಿ ಸೂಪರ್ ಸ್ಪೆಷಾಲಿಟಿ ಸೌಲಭ್ಯಗಳಿರುವ ಸಂಪೂರ್ಣ ಆಸ್ಪತ್ರೆ ಕಾರ್ಯನಿರ್ವಹಿಸಲು ಪೂರಕ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ತಾತ್ಕಾಲಿಕ ಸ್ಥಳಾಂತರ: ಸದ್ಯ ರಿಮ್ಸ್ ಆಸ್ಪತ್ರೆಯಲ್ಲಿರುವ ಶಸ್ತ್ರಚಿಕಿತ್ಸೆ ಮತ್ತು ಮಕ್ಕಳ ಚಿಕಿತ್ಸಾ ಘಟಕಗಳನ್ನು ತಾತ್ಕಾಲಿಕವಾಗಿ ಒಪೆಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ. ಆರಂಭದಲ್ಲಿಯೇ ಪೂರ್ಣ ಪ್ರಮಾಣದ ಸೌಲಭ್ಯ ದೊರಕಿಸಲು ಸಾಧ್ಯವಿಲ್ಲ. ಹಂತಹಂತವಾಗಿ ಒಪೆಕ್ ಆಸ್ಪತ್ರೆಯಲ್ಲಿ ಈ ಮೊದಲು ದೊರೆಯುತ್ತಿದ್ದ ಎಲ್ಲ ಆರೋಗ್ಯ ಸಂಬಂಧಿ ಚಿಕಿತ್ಸೆಗಳನ್ನು ದೊರಕಿಸಲಾಗುತ್ತದೆ ಎಂದು ಭರವಸೆ ನೀಡಿದರು.
ರಾಜ್ಯ ಸರ್ಕಾರವು ಒಪೆಕ್ ಆಸ್ಪತ್ರೆಗೆ ಕ್ಯಾತ್ಲ್ಯಾಬ್ ಸ್ಥಾಪನೆಗೆ 5.70 ಕೋಟಿಯನ್ನು ಹಣಕಾಸು ಇಲಾಖೆಯಿಂದ ಮಂಜೂರು ಮಾಡಿದೆ. ಅದೇ ರೀತಿ 5.17 ಕೋಟಿಯನ್ನು ಆಸ್ಪತ್ರೆಗೆ ಅವಶ್ಯವಿರುವ ವೈದ್ಯಕೀಯ ಸಲಕರಣೆಗಳ ಖರೀದಿಗೆ ಮಂಜೂರು ಮಾಡಿದ್ದು ಖರೀದಿಗೆ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಡಿಸಿ ನೇತೃತ್ವ ಸಮಿತಿ ರಚನೆ: ಒಪೆಕ್ ಆಸ್ಪತ್ರೆಯ ಪುನಾರಂಭ ಮತ್ತು ಕಾರ್ಯನಿರ್ವಹಣೆಗೆ ಸಂಬಂಧಿಸಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದು ಆಸ್ಪತ್ರೆಯ ಆಗುಹೋಗುಗಳು ಮತ್ತು ಅವಶ್ಯಕತೆಗಳ ಮೇಲೆ ನಿಗಾಯಿರಿಸಲಿದೆ. ಆಸ್ಪತ್ರೆಯಲ್ಲಿ ಸದ್ಯ ವಿಶೇಷಾಧಿಕಾರಿಯು ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಐಎಎಸ್, ಕೆಎಎಸ್ ಶ್ರೇಣಿಯ ಅಧಿಕಾರಿಯೊಬ್ಬರನ್ನು ಒಪೆಕ್ ಉಸ್ತುವಾರಿ ವಹಿಸುವ ಬಗ್ಗೆ ನಂತರದಲ್ಲಿ ನಿರ್ಧರಿಸಲಾಗುತ್ತದೆ ಎಂದು ತಿಳಿಸಿದರು.
647ರಲ್ಲಿ 200 ಹುದ್ದೆ ಭರ್ತಿಗೆ ಒಪ್ಪಿಗೆ: ಪ್ರಸಕ್ತ ವರ್ಷ ಒಪೆಕ್ ಆಸ್ಪತ್ರೆಯ ವಿವಿಧ ಅವಶ್ಯಕತೆಗಳಿಗೆ 10 ಕೋಟಿ ಒದಗಿಸಲು ಈಗಾಗಲೇ ಅನುಮೋದನೆ ದೊರೆತಿದೆ. ಆಸ್ಪತ್ರೆಗೆ ಒಟ್ಟು 647 ಹುದ್ದೆಗಳ ಅವಶ್ಯಕತೆಯಿದೆ. ಆದರೆ ಹಣಕಾಸು ಇಲಾಖೆಯು ಸದ್ಯ 200 ಹುದ್ದೆಗಳ ಭರ್ತಿಗೆ ಒಪ್ಪಿಗೆ ಸೂಚಿಸಿದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಇನ್ನುಳಿದ ಹುದ್ದೆಗಳ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಈ ಹಿಂದೆ ಅಪೋಲೋ ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿದ್ದ ಸಿ ಮತ್ತು ಡಿ ಗ್ರೂಪ್ ನೌಕರರ ಪುನಾ ನೇಮಕಾತಿಗೆ ಸೂಚಿಸಿದ್ದು, ಹೊರಗುತ್ತಿಗೆ ಆಧಾರದಲ್ಲಿಯೇ ಅವರು ಕಾರ್ಯನಿರ್ವಹಿಸಲಿದ್ದಾರೆ. ಹಾಗೆಯೇ 69 ಜನ ನರ್ಸ್ಗಳನ್ನೂ ನೇಮಿಸಲಾಗಿದೆ ಎಂದು ಹೇಳಿದರು.
ಉಪಕರಣ ವಂಚನೆ- ವರದಿ ಕೋರಿಕೆ: ಅಪೋಲೋ ಸಂಸ್ಥೆಯು ಆಸ್ಪತ್ರೆಯ ನಿರ್ವಹಣೆಯಿಂದ ಮರಳಿ ಪಡೆಯುವ ಸಂದರ್ಭ ಜಿಲ್ಲಾಧಿಕಾರಿ ಮತ್ತು ಎಸ್ಪಿ ಉಪಸ್ಥಿತರಿದ್ದರು. ಆಗ ಆಸ್ಪತ್ರೆಯಲ್ಲಿ ಲಭ್ಯವಿದ್ದ ಆಸ್ತಿಯನ್ನು ಮಾತ್ರ ಸ್ವಾಧೀನಕ್ಕೆ ತೆಗೆದುಕೊಂಡಿದ್ದು, ಆಸ್ಪತ್ರೆಯಿಂದ ವೈದ್ಯಕೀಯ ಉಪಕರಣಗಳನ್ನು ಅಕ್ರಮವಾಗಿ ಅಪೋಲೋ ಸಂಸ್ಥೆಯು ಹೈದರಾಬಾದ್ಗೆ ಸಾಗಿಸಿದೆ ಎಂಬ ದೂರಿನ ಬಗ್ಗೆ ವರದಿ ಕೇಳಿರುವುದಾಗಿ ತಿಳಿಸಿದರು.
ಜಿಲ್ಲಾ ಕ್ರೀಡಾಂಗಣ ಪುನಾ ನಿರ್ಮಾಣಕ್ಕೆ ಸಂಬಂಧಿಸಿ ಕ್ರೀಡಾ ಸಚಿವರೊಂದಿಗೆ ಚರ್ಚಿಸಿದ್ದು ಇಲಾಖೆಗೆ ಅನುದಾನದ ಕೊರತೆಯ ಹಿನ್ನೆಲೆಯಲ್ಲಿ ಸದ್ಯಕ್ಕೆ ಅವಕಾಶವಿಲ್ಲ ಎಂದಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುತ್ತದೆ ಎಂದ ಅವರು, ನಗರದ ಬಸವೇಶ್ವರ ವೃತ್ತದ ಬಳಿ ನಿರ್ಮಾಣ ಹಂತದಲ್ಲಿರುವ ರೇಲ್ವೆ ಮೇಲ್ಸೇತುವೆಯನ್ನು ಸದ್ಯದ 40 ಅಡಿಯಿಂದ 80 ಅಡಿಗೆ ಅಗಲ ನಿರ್ಮಿಸಲು ರೇಲ್ವೆ ಸಚಿವರೊಂದಿಗೆ ಮನವಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತಕುಮಾರ್, ಶಾಸಕ ಡಾ. ಶಿವರಾಜ್ ಪಾಟೀಲ್, ನಗರಸಭೆ ಮಾಜಿ ಸದಸ್ಯ ಕೆ.ಶಾಂತಪ್ಪ ಸೇರಿ ಅನೇಕರಿದ್ದರು.