ಸಂಕ್ಷಿಪ್ತ ಸುದ್ದಿ
ರಸ್ತೆ ದುರಸ್ತಿಗೆ ಟಿಯುಸಿಐ ಆಗ್ರಹ
ಸಿಂಧನೂರು: ನಗರ ಹಾಗೂ ಗ್ರಾಮೀಣ ಪ್ರದೇಶಗಳ ರಸ್ತೆ ದುರಸ್ತಿಗೊಳಿಸುವಂತೆ ಆಗ್ರಹಿಸಿ ಭಗತಸಿಂಗ್ ಆಟೋ ಚಾಲಕರ ಸಂಘ(ಟಿಯುಸಿಐ) ಹಾಗೂ ಭಾರತ ಕ್ರಾಂತಿಕಾರಿ ಯುವಜನ ಒಕ್ಕೂಟ(ಆರ್ವೈಎಫ್ಐ) ಜಂಟಿ ಸಂಘಟನೆಗಳು ತಹಸೀಲ್ದಾರರ ಮೂಲಕ ಲೋಕೋಪಯೋಗಿ ಸಚಿವರಿಗೆ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿವೆ.ಸಿಂಧನೂರು ನಗರ ಹಾಗೂ ಗ್ರಾಮೀಣ ಭಾಗದ ರಸ್ತೆಗಳು ತಿಪ್ಪೆ ಗುಂಡಿಗಳಾಗಿವೆ. ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಮಳೆಯ ನೀರು ರಸ್ತೆಯ ಮೇಲೆ ಹರಿದು ಕೆಸರು ಗದ್ದೆಗಳಾಗಿ ಮಾರ್ಪಟಾಗುತ್ತಿವೆ. ಜನರು ಹಾಗೂ ವಾಹನ ಸವಾರರು ಕಚ್ಚಾ ರಸ್ತೆಯಲ್ಲಿ ಬಿದ್ದು ಗಾಯಗಳಾಗುತ್ತಿವೆ. ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿದ್ದಾರೆ. ಕೊರಕಲು ರಸ್ತೆಗಳಲ್ಲಿ ಓಡಾಡುವ ಆಟೋಗಳು ಮತ್ತು ಇತರೆ ವಾಹನಗಳು ಜಖಂಗೊಳ್ಳುತ್ತಿವೆ. ಮಾತ್ರವಲ್ಲ, ಕಳೆದ 15 ದಿನಗಳ ಹಿಂದೆ ನಗರದ ಕೆಲವು ರಸ್ತೆಗಳ ತಗ್ಗು ಗುಂಡಿಗಳನ್ನು ಮುಚ್ಚಲು ಕೆಂಪು ಸವಳು ಮಣ್ಣು ಹಾಕಿರುವುದರಿಂದ ವಾಹನಗಳು ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ರಾಯಚೂರು- ಗಂಗಾವತಿ ರಾಜ್ಯ ಹೆದ್ದಾರಿ 140 ಫೀಟ್ ನಿರ್ಮಾಣ ಮಾಡಬೇಕು, ಸರ್ಕಾರದ ಯೋಜನೆಯನ್ನು ದಿಕ್ಕರಿಸಿ ಸ್ಥಳೀಯ ರಾಜಕೀಯ ಒತ್ತಡಕ್ಕೆ ಮಣಿದ ಅಧಿಕಾರಿಗಳು ರಸ್ತೆಯ ಮಧ್ಯದಿಂದ 50 ಫೀಟ್ ಅಂತರದಲ್ಲಿ ಮುಖ್ಯ ಚರಂಡಿ ನಿರ್ಮಾಣ ಮಾಡುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲಿ ದುರಸ್ತಿ ಕಾಮಗಾರಿಯನ್ನು ಪ್ರಾರಂಭಿಸಬೇಕು. ಒಂದು ವೇಳೆ ಮನವಿ ಪತ್ರಕ್ಕೆ ಸ್ಪಂದಿಸಲು ವಿಫಲರಾದಲ್ಲಿ ಅನಿರ್ದಿಷ್ಟ ಪ್ರತಿಭಟನೆ, ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಜಂಟಿ ಸಂಘಟನೆಗಳು ಈ ಸಂದರ್ಭದಲ್ಲಿ ಎಚ್ಚರಿಸಿವೆ.
ಹೊರಗುಳಿದ ಶಾಲಾ
ಮಕ್ಕಳ ಸಮೀಕ್ಷೆ
ಲಿಂಗಸ್ಗೂರು: ತಾಲೂಕಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಕಾರ್ಯ ಕಟ್ಟುನಿಟ್ಟಿನಿಂದ ನಿರ್ವಹಿಸುವಂತೆ ತಹಸೀಲ್ದಾರ್ ಜಿ..ಎಸ್. ಮಹಾಜನ್ ಅಧಿಕಾರಿಗಳಿಗೆ ಸೂಚಿಸಿದರು.ಶುಕ್ರವಾರ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಕರೆದಿದ್ದ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಕುರಿತ ತಾಲೂಕು ಸಮನ್ವಯ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನ.6 ಮತ್ತು ನ.7ರಂದು ಶಾಲಾ ಸಮೀಕ್ಷೆ ಹಾಗೂ 13ರಿಂದ 17ರವರೆಗೆ ಕುಟುಂಬ ಸಮೀಕ್ಷೆ ನಡೆಸಬೇಕಿದೆ ಎಂದು ತಿಳಿಸಿದರು.ಸಮೀಕ್ಷೆ ಕಾರ್ಯಕ್ಕೆ ಇಬ್ಬರು ಶಿಕ್ಷಕ, ಒಬ್ಬ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಂಘ ಸಂಸ್ಥೆಯ ಪ್ರತಿನಿಧಿಯನ್ನು ಒಳಗೊಂಡ ತಂಡ ರಚಿಸಲಾಗಿದೆ. ಒಟ್ಟು ತಾಲೂಕಿನಲ್ಲಿ 394 ತಂಡಗಳನ್ನು ರಚಿಸಲಾಗಿದೆ. ಶಿಕ್ಷಣ ಇಲಾಖೆಗೆ ಎಲ್ಲ ಇಲಾಖೆಯ ಅಧಿಕಾರಿಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಸಭೆಯಲ್ಲಿ ಉಪತಹಸೀಲ್ದಾರ್ ಖಾಜಾ ಹುಸೇನ್, ಪ್ರಭಾರಿ ಬಿಇಒ ಈಶ್ವರಪ್ಪ ನೀರಲಗಿ, ತಾಲೂಕು ಆರೋಗ್ಯಾಧಿಕಾರಿ ನಂದಕುಮಾರ, ಸಿಡಿಪಿಒ ಪ್ರಭಾಕರ, ನೋಡಲ್ ಅಧಿಕಾರಿ ಶರಣಬಸವ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.