'ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡಿಗರ ಪಾತ್ರ ಪ್ರಮುಖ'
ಲಿಂಗಸ್ಗೂರು: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡಿಗರು ಮಹತ್ವದ ಪಾತ್ರವಹಿಸಿದ್ದರು. ಹಾಗೆಯೇ ಕನ್ನಡ ನಾಡಿನ ಒಗ್ಗೂಡುವಿಕೆ ಯಲ್ಲಿಯೂ ಅನೇಕರು ಶ್ರಮಿಸಿದ್ದಾರೆ ಎಂದು ಸಹಾಯಕ ಆಯುಕ್ತ ಟಿ.ಯೋಗೇಶ ಅವರು ಅಭಿಪ್ರಾಯಪಟ್ಟಿದ್ದಾರೆ.
ಪಟ್ಟಣದ ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಬ್ರಿಟಿಷರ ದೌರ್ಜನ್ಯದ ವಿರುದ್ಧ ಅನೇಕ ಕನ್ನಡಿಗರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು ಎಂದರು.
ಕಾವೇರಿಯಿಂದ ಗೋದಾವರಿವರೆಗೂ ಕನ್ನಡದ ಸೊಬಗು ಹಬ್ಬಿದೆ. ನಾಡಿನ ಜಲ ನೆಲ ಭಾಷೆ ರಕ್ಷಣೆಯ ಹೊಣೆ ಪ್ರತಿಯೊಬ್ಬರದ್ದಾಗಿದೆ. ನಾಡಿನ ಸಂಪನ್ಮೂಲಗಳನ್ನು ಸಮರ್ಪಕ ಬಳಕೆ ಮಾಡಿ ಅಭಿವೃದ್ಧಿಯತ್ತ ಮುನ್ನಡೆಯುವುದು ಅವಶ್ಯ. ಗ್ರಾಮ ಹಾಗೂ ಪಟ್ಟಣ ಪ್ರದೇಶದಲ್ಲಿ ಪ್ರತಿಯೊಂದೂ ಮನೆಯಲ್ಲಿ ಶೌಚ ಗೃಹವನ್ನು ನಿರ್ಮಾಣ ಮಾಡಿ ಉತ್ತಮ ಪರಿಸರಕ್ಕಾಗಿ ಜನತೆ ಸಂಕಲ್ಪ ಮಾಡಬೇಕಿದೆ ಎಂದರು.
ಉಪನ್ಯಾಸಕ ಮಹಾಂತಗೌಡ ಪಾಟೀಲ ಕನ್ನಡ ನಾಡು- ನುಡಿ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಪುರಸಭೆ ಅಧ್ಯಕ್ಷ ಕುಮಾರಸ್ವಾಮಿ ಸಾಲ್ಮನಿ, ಡಿವೈಎಸ್ಪಿ ಅನಿತಾ ಹದ್ದಣ್ಣನವರ, ತಹಸೀಲ್ದಾರ್ ಜಿ.ಎಸ್. ಮಹಾಜನ್, ತಾಪಂ ಇಒ ವೀರಭದ್ರಪ್ಪ, ಟಿಎಪಿಎಂಎಸ್ ಅಧ್ಯಕ್ಷ ಸೋಮಶೇಖರ ಐದನಾಳ, ಉಪ ತಹಸೀಲ್ದಾರ್ ಖಾಜಾಹುಸೇನ್, ಸಿಡಿಪಿಒ ಪ್ರಭಾಕರ, ಜಂಗಮಮೂರ್ತಿ ಹಾಗೂ ಇನ್ನಿತರಿದ್ದರು. ಶಾಲಾ ಕಾಲೇಜುಗಳ ಮಕ್ಕಳು ಸಮಾರಂಭದಲ್ಲಿದ್ದರು.