5ರಂದು ಉಚಿತ ಆರೋಗ್ಯ ಶಿಬಿರ
ರಾಯಚೂರು: ನಗರದ ಪ್ರಾಣ ಸ್ಪರ್ಶ ಸಮಗ್ರ ಆರೋಗ್ಯ ಕೇಂದ್ರದಲ್ಲಿ ನ.5 ರಂದು ಪ್ರಕೃತಿ ಚಿಕಿತ್ಸೆ, ಫಿಜಿಯೋಥೆರಪಿ, ಯೋಗ ಚಿಕಿತ್ಸೆ ಮತ್ತು ಅಕ್ಯುಪ್ರೆಶರ್ ಚಿಕಿತ್ಸೆಯ ಉಚಿತ ಶಿಬಿರ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಶಿಬಿರ ಆಯೋಜಿಸಲಾಗಿದೆ. ಸೊಂಟನೋವು, ಅರೆತಲೆನೋವು, ಸ್ಥೂಲಕಾಯ, ಪಾರ್ಶ್ವವಾಯು ಸೇರಿ ವಿವಿಧ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ನಗರದ ರೋಗಿಗಳು ಶಿಬಿರದ ಪ್ರಯೋಜನ ಪಡೆಯಲು ನಗರದ ಗಾಜಗಾರಪೇಟೆಯ ಕನ್ನಿಕಾ ಪರಮೇಶ್ವರಿ ಹತ್ತಿರ, ಚೌಡಮ್ಮ ಕಟ್ಟೆ ಬಳಿ ರಾಯಚೂರು ಇಲ್ಲಿಗೆ ದೂರವಾಣಿ ಸಂಖ್ಯೆ 9482170837, 9916126401 ಸಂಪರ್ಕಿಸಿ.
ಕಾಂಗ್ರೆಸ್ ಹೊಸ ಸಾರಥಿಗಳಿಗೆ ಸನ್ಮಾನ
ಆಳಂದ: ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಆಳಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಗ್ದುಮ ಅನ್ಸಾರಿ, ಮಾದನಹಿಪ್ಪರ್ಗಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವಂತರಾವ ಪಾಟೀಲ್, ಕೆಪಿಸಿಸಿ ಸದಸ್ಯ ಜಗನ್ನಾಥ ಶೇಗಜಿ ಅವರುಗಳು ಹೊಸದಾಗಿ ನೇಮಕಗೊಂಡಿರುವುದರಿಂದ ಅಭಿಮಾನಿಗಳು ಸನ್ಮಾನಿಸಿದರು. ತಾಲೂಕಿನಲ್ಲಿ ಪಕ್ಷವನ್ನು ಸಂಘಟನೆ ಮಾಡುವ ಮೂಲಕ ಕೇಂದ್ರ, ರಾಜ್ಯ ಸರ್ಕಾರದ ಸಾಧನೆಗಳನ್ನು ಮನೆ ಮನೆಗಳಿಗೆ ತಿಳಿಸಿ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಪಣ ತೊಡುವುದಾಗಿ ತಿಳಿಸಿದರು. ಪಕ್ಷದಲ್ಲಿ ಯಾವುದೇ ಭಿನ್ನಮತ ಇರುವುದಿಲ್ಲ ಎಲ್ಲರೂ ಒಗ್ಗೂಡಿ ಕೆಲಸ ಮಾಡುತ್ತೇವೆ ಎಂದು ಹೊಸ ಸಾರಥಿಗಳು ತಿಳಿಸಿದರು. ಪಕ್ಷದ ಪ್ರಮುಖರಾದ ಬಸವರಾಜ ಬಿರಾದಾರ, ತಾನಾಜಿ ಸೂರ್ಯವಂಶಿ, ಮಹ್ಮದ್ ಅನ್ಸಾರಿ, ಲಕ್ಷ್ಮಣ ಸೇರಿದಂತೆ ಇತರರು ಪಾಲ್ಗೊಂಡಿದರು.
ಈ.ಸಾರಿಗೆ ಸಿಬ್ಬಂದಿ ಮಕ್ಕಳಿಗೆ ಪುರಸ್ಕಾರ
ಗುಲ್ಬರ್ಗ: ಇಲ್ಲಿನ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ತನ್ನ ವಿಭಾಗ 1 ಮತ್ತು 2ರ ಸಿಬ್ಬಂದಿಗಳ ಪ್ರತಿಭಾವಂತ ಮಕ್ಕಳಿಗೆ ನಗದು ಪುರಸ್ಕಾರ- ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಿತು. ಇಲ್ಲಿನ ವಿಭಾಗೀಯ ಕಚೇರಿ ಬಯಲು ರಂಗ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ 40ಕ್ಕೂ ಹೆಚ್ಚು ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿಯಲ್ಲಿ ಹೆಚ್ಚಿನ ಅಂಕ ಪಡೆದ ಸಿಬ್ಬಂದಿ ಮಕ್ಕಳನ್ನು ಸತ್ಕರಿಸಲಾಯಿತು. ವಿಭಾಗಾಧಿಕಾರಿ ಇಲಿಯಾಸ್ ಭಾಗವಾನ್ ಪುರಸ್ಕಾರ ನೆರವೇರಿಸಿದರು. ಸಾರಿಗೆ ಸಂಸ್ಥೆಯ ಈ ಪುರಸ್ಕಾರ ಯೋಜನೆ ಜಾಣ ಮಕ್ಕಳನ್ನು ಇನ್ನಷ್ಟು ಹೆಚ್ಚಿನ ಅಧ್ಯಯನಕ್ಕೆ ಪ್ರೋತ್ಹಾಸ ನೀಡಲಿದೆ. ಮಕ್ಕಳು ಓದು ಮುಂದೆ ಬರಬೇಕು ಎಂದು ಭಾಗವಾನ್ ಹೇಳಿದರು.
ಜನಮನ ಸೆಳೆದ ಸಾಂಸ್ಕೃತಿಕ ವೈಭವ
ಗುಲ್ಬರ್ಗ: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯೋತ್ಸವ ಸಂದರ್ಭದಲ್ಲಿ ಕರ್ನಾಟಕದ ವೈಭವ ಸಾರುವ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಿಸಿಲೂರು ಗುಲ್ಬರ್ಗದ ಶರಣಬಸವೇಶ್ವರ ವಸತಿ ಶಾಲೆಯ 466 ಮಕ್ಕಳು ಪ್ರದರ್ಶಿಸಿದ “Éd¾Úß ಕಲ್ಯಾಣ «ÛsÚß’ ಎಂಬ ಶೀರ್ಷಿಕೆಯ ಗೀತಗಾಯನ ಜನಮನ ಸೂರೆಗೊಂಡಿತು. ಸಾರ್ವಜನಿಕ ಶಿಕ್ಷಣ ಇಲಾಖೆ ಮಕ್ಕಳೊಂದಿಗೆ ಗತ ವೈಭವ ಸಾರುವ ಗೀತಗಾಯನ ಕಾರ್ಯಕ್ರಮ ನೀಡಬೇಕು ಎಂದು ಎಸ್ಬಿಆರ್ ಶಾಲೆಗೆ ಈ ಜವಾಬ್ದಾರಿ ಒಪ್ಪಿಸಿತ್ತು. 1985ರಲ್ಲಿ ಕರ್ನಾಟಕ ವೈಭವದಂತಹ ಸುಂದರ ಕಾರ್ಯಕ್ರಮ ನೀಡಿದ್ದ ಕೀರ್ತಿಯ ಎಸ್ಬಿಆರ್ ಶಾಲೆಯ ಮಕ್ಕಳು, ಆಡಳಿತ ಸಿಬ್ಬಂದಿವರ್ಗ, ಸಂಗೀತ ಶಿಕ್ಷಕರೆಲ್ಲರೂ ಸೇರಿಕೊಂಡು ಸುಂದರ ಸಾಂಸ್ಕೃತ ವೈಭವವನ್ನು ತಮ್ಮ ಹಾಡಿನಲ್ಲಿ, ಕುಣಿತದಲ್ಲಿ ಮರಳು ಕಟ್ಟುವಲ್ಲಿ ಯಶಸ್ವಿಯಾದರು. ರಾಜ್ಯದ ಎಲ್ಲಾ ವಿಭಾಗಗಳಿಂದ ಮಕ್ಕಳ ಕಾರ್ಯಕ್ರಮ ಪ್ರದರ್ಶನಕ್ಕೆ ಅಲ್ಲಿ ಅವಕಾಶ ನೀಡಲಾಗಿತ್ತು. ಗುಲ್ಬರ್ಗದಿಂದ ಹೈ-ಕ ಪ್ರದೇಶವನ್ನು ಪ್ರತಿನಿಧಿಸುವ ಕಲ್ಯಾಣ ನಾಡಿನ ಗತವೈಭವ, ಅನುಭವ ಮಂಟಪ, ಶರಣರಾದಿಯಾಗಿ ಈ ನೆಲದ ಇತಿಹಾಸ ಸಾರುವ ಗೀತೆಯಲ್ಲಿ ಹೆಜ್ಜೆ ಹಾಕಿದ ಮಕ್ಕಳ ಪ್ರದರ್ಶನ ಕೌಶಲ್ಯ ಸೇರಿದ್ದವರೆಲ್ಲರೂ ಕೊಂಡಾಡಿದರು. ಖುದ್ದು ಸಿಎಂ ಸಿದ್ಧರಾಮಯ್ಯ ಅವರೂ ಗುಲ್ಬರ್ಗದ ಮಕ್ಕಳ ಗೀತ ಗಾಯನಕ್ಕೆ ತಲೆದೂಗಿದರು. ಡಾ.ನೀಲಾಂಬಿಕಾ ಪೊಲೀಸ್ ಪಾಟೀಲ್ ಸಾಹಿತ್ಯವಿರುವ ವಿಜಯಕಲ್ಯಾಣ ನಾಡು ಗೀತೆಯನ್ನು ಶರಣಬಸವೇಶ್ವರ ಕಾಲೇ ಕಾಲೇಜಿನ ಡಾ. ಎಂ.ಎಸ್. ಪಾಟೀಲ್, ಡಾ.ರೇವಯ್ಯ ವಸ್ತ್ರದಮಠ, ಡಾ. ಸೀಮಾ ಪಾಟೀಲ್, ಛಾಯಾ ಭರತನೂರ್ ಅವರಿರುವ ತಂಡದವರು ಸಂಗೀತಕ್ಕೆ ಅಳವಡಿಸಿದ್ದರು.
ಕಾರ್ತಿಕ ಮಾಸ ಕಾರ್ಯಕ್ರಮಗಳು
ರಾಯಚೂರು: ನಗರದ ಗಾಜಗಾರಪೇಟೆಯ ಶಂಕರಮಠದಲ್ಲಿ ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ನ.4 ರಿಂದ ಡಿ.2 ರವರೆಗೆ ವಿಶೇಷ ಪೂಜೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಪ್ರತಿದಿನ ಸಂಜೆ 6 ರಿಂದ 7ವರೆಗೆ ದೀಪಾರಾಧನೆ, ಪ್ರತಿ ಸೋಮವಾರ ಬೆಳಗ್ಗೆ 7ರಿಂದ 8ರವರೆಗೆ ರುದ್ರಾಭಿಷೇಕ, ಪ್ರತಿ ಶುಕ್ರವಾರ ಸಂಜೆ 6ರಿಂದ 7ರವರೆಗೆ ಲಲಿತಾ ಸಹಸ್ರನಾಮ ಪಠಣ, ಪ್ರತಿ ಶನಿವಾರ 6 ರಿಂದ 7ರವರೆಗೆ ಹನುಮಾನ್ ಚಾಲೀಸಾ ಪಠಣ, ನ.17 ರಂದು ಹುಣ್ಣಿಮೆ ಅಂಗವಾಗಿ ಬೆಳಗ್ಗೆ 10ರಿಂದ 12ರವರೆಗೆ ಸತ್ಯನಾರಾಯಣ ಪೂಜೆ ಆಯೋಜಿಸಲಾಗಿದೆ.
ನ.21 ರಂದು ಸಂಕರ್ಷ ಚತುರ್ಥಿ ಅಂಗವಾಗಿ ಗಣಪತಿ ಪೂಜೆ ಸಂಜೆ 6 ರಿಂದ 7ರವರೆಗೆ ನಡೆಯಲಿದೆ. ಡಿ.2 ರಂದು ಅಮಾವಾಸ್ಯೆ ಸಂಜೆ 4ಕ್ಕೆ ರುದ್ರಾಭಿಷೇಕ ನಂತರ ಕಾರ್ತಿಕ ದೀಪೋತ್ಸವ ಆಯೋಜಿಸಲಾಗಿದೆ ಎಂದು ಮಠ ತಿಳಿಸಿದೆ.
ಡಿಸ್ಟಿಲರಿ ಘಟಕದಿಂದ ತೊಂದರೆ: ದೂರು
ರಾಯಚೂರು: ಸಿಂಧನೂರು ತಾಲೂಕಿನ ಸಿಂಗಾಪುರ ಗ್ರಾಮದ ಬಳಿಯ ಡಿಸ್ಟಿಲರಿ ಕಾರ್ಖಾನೆಯಿಂದ ಪರಿಸರಕ್ಕೆ ಹಾನಿಯಾಗುತ್ತಿದೆ ಎಂದು ಗ್ರಾಮದ ಚೇಜಿಂಗ್ ಟೈಗರ್ಸ್ ಯುವಕ ಸಂಘ ಆರೋಪಿಸಿದೆ. ಈ ಕುರಿತು ಈಚೆಗೆ ಜಿಲ್ಲಾಧಿಕಾರಿಗೆ ದೂರಿರುವ ಸಂಘದ ಅಧ್ಯಕ್ಷ ಬಸವರಾಜ ಅಬಕಾರಿ ಮತ್ತಿತರರು, ಸಿಂಗಾಪುರ ಗ್ರಾಮದ ಡಿಸ್ಟಿಲರಿ ಕಾರ್ಖಾನೆಯಿಂದ ಬೂದಿ ಹೊರಹಾಕಲಾಗಿದ್ದು, ಅದರಿಂದ ಕಾರ್ಖಾನೆಯ ಸುತ್ತಲಿನ ಬತ್ತದ ಬೆಳೆಗೆ ಹಾನಿಯಾಗಿದೆ. ಕಳೆದ ಕೆಲ ದಿನಗಳಿಂದ ಮಳೆಯ ನೀರಿಗೆ ಹಾರುಬೂದಿ ಸೇರಿ ಬೆಳೆ ಹಾನಿಯ ಭೀತಿಯಿದೆ ಎಂದು ದೂರಿದರು. ಈ ಹಿನ್ನೆಲೆಯಲ್ಲಿ ಕೂಡಲೇ ಜಿಲ್ಲಾಡಳಿತ ಗ್ರಾಮಸ್ಥರು ಎದುರಿಸುತ್ತಿರುವ ಸಮಸ್ಯೆ ಪರಿಹರಿಸಲು ಕಾರ್ಖಾನೆಗೆ ಸೂಚಿಸುವಂತೆ ಯುವಕ ಸಂಘದ ಶ್ರೀಕಾಂತ ಕುಲಕರ್ಣಿ, ಭೀಮರಾಯ ನಾಯಕ, ಮಾರೆಪ್ಪ ಬೋವಿ, ಖಾದರಪಾಷಾ, ಶಂಬನಗೌಡ, ಲಿಂಗರಾಜ್, ದ್ಯಾವಣ್ಣ ನಾಯಕ, ಕೃಷ್ಣಪ್ಪ ಮಡಿವಾಳ ಸೇರಿದಂತೆ ಅನೇಕರಿದ್ದರು.
ದ್ವಾರಪಾಲಕ ಆನಂದರಾವ್ ನಿಧನ
ರಾಯಚೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ದ್ವಾರಪಾಲಕರಾಗಿದ್ದ ಆನಂದರಾವ್ (67) ಶನಿವಾರ ಸಂಜೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರು ಪತ್ನಿ, ಒಬ್ಬ ಪುತ್ರ ಹಾಗೂ ಮೂವರು ಪುತ್ರಿಯರೂ ಸೇರಿದಂತೆ ಅನೇಕ ಬಂಧುಗಳನ್ನಗಲಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ಕಳೆದ 45 ವರ್ಷಗಳಿಂದ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಮೃತರ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ ಮಂತ್ರಾಲಯದಲ್ಲಿ ನೆರವೇರಿಸಲಾಯಿತು. ಮಠದ ಪ್ರಮುಖರು ಹಾಗೂ ಸಿಬ್ಬಂದಿ, ಆಪ್ತರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.