ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಳ್ಳರ ಬಂಧನ: ದಸರಾಕ್ಕೆ ಹೋದ ನೆಮ್ಮದಿ ದೀಪಾವಳಿಗೆ ಬಂತು

Vishwanath S
Updated On : 4 Nov 2013, 12:06 pm

ಕನ್ನಡಪ್ರಭ ವಾರ್ತೆ , ರಾಯಚೂರು , ನ.3
ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಕಂಡುಬಂದಿದ್ದ ದರೋಡೆಕೋರರ ಹಾವಳಿಗೆ ಕೊನೆಗೂ ಕಡಿವಾಣ ಬಿದ್ದಿದೆ. ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವ ಮೂಲಕ ತಾಲೂಕಿನ ವಿವಿಧ ಗ್ರಾಮಸ್ಥರಿಗೆ ದಸರಾ ಹಬ್ಬಕ್ಕೆ ಕಳೆದುಹೋಗಿದ್ದ ನೆಮ್ಮದಿಯು ಗ್ರಾಮಸ್ಥರು, ಪೊಲೀಸರ ಕಾರ್ಯಾಚರಣೆಯಿಂದ ದೀಪಾವಳಿ ಹೊತ್ತಿಗೆ ಮರಳಿದೆ.
  ರಾಯಚೂರು ತಾಲೂಕಿನ ಮನ್ಸಲಾಪುರ, ಹೊಸೆಪೇಟೆ, ಹುಣಸಿಹಾಳ ಹುಡಾ ಮತ್ತಿತರೆಡೆ ಕಳೆದೊಂದು ತಿಂಗಳಿಗೂ ದರೋಡೆಕೋರರ ಹಾವಳಿ ಕಂಡುಬಂದಿತ್ತು. ಅದರಿಂದ ಗ್ರಾಮಸ್ಥರ ನೆಮ್ಮದಿಯ ಬದುಕಿಗೆ ಕಲ್ಲು ಬಿದ್ದಿತ್ತು. ಹಗಲು ರಾತ್ರಿಯೆನ್ನದೇ ಊರು ಕಾಯುವ ಪರಿಸ್ಥಿತಿಯಿತ್ತು.
ಕಳವಿಗೆ ಯತ್ನ ಘಟನೆಗಳೂ: ಕಳೆದೊಂದುವರೆ ತಿಂಗಳಿನಲ್ಲಿ ಒಟ್ಟು ಕಳವಿನ ಐದು ಪ್ರಕರಣಗಳು ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಡೆದಿದ್ದವು. ಅಷ್ಟೇ ಅಲ್ಲ ರಾತ್ರಿಯಾಗುತ್ತಿದ್ದಂತೆಯೇ ಕಳವಿಗೆ ಯತ್ನ ಅನೇಕ ಘಟನೆಗಳೂ ನಡೆದಿದ್ದವು. ಕೆಲ ಸಂದರ್ಭದಲ್ಲಿ ಕಿಡಿಗೇಡಿಗಳ ಕೃತ್ಯದಿಂದಲೂ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ರಾತ್ರಿ ವೇಳೆ ಮನೆಗಳ ಬಾಗಿಲು ಬಡಿದು ಓಡಿ ಹೋಗುತ್ತಿದ್ದವರಿಂದಾಗಿ ಗ್ರಾಮಸ್ಥರ ನೆಮ್ಮದಿಗೆ ಭಂಗ ಬಂದಿತ್ತು.
ಪೊಲೀಸರ ಕಾರ್ಯಾಚರಣೆ: ಗ್ರಾಮಗಳಲ್ಲಿ ರಾತ್ರಿ ವೇಳೆ ಮನೆಗಳ ಬಾಗಿಲು ಬಡಿಯುತ್ತಿರುವ ಪ್ರಕರಣಗಳ ಬಗ್ಗೆ ಗ್ರಾಮಸ್ಥರು ದೂರು ಸಲ್ಲಿಸುತ್ತಿದ್ದಂತೆಯೇ ಪೊಲೀಸರು ಆರಂಭದಲ್ಲಿ ಇದು ಕಿಡಿಗೇಡಿಗಳ ಕೃತ್ಯ ಎಂದೇ ಭಾವಿಸಿದ್ದರು. ಆದರೆ ಮನ್ಸಲಾಪುರ ಗ್ರಾಮದಲ್ಲಿ ಅಜ್ಜಪ್ಪ ಎಂಬುವವರು ಮೇಲೆ ಹಲ್ಲೆ ಮಾಡಿ ಮನೆ ಕಳವಿಗೆ ಯತ್ನಿಸಿದ ನಂತರ ಹಾಗೂ ಮೂರು ಮನೆಗಳಿಗೆ ಒಂದೇ ರಾತ್ರಿ ದರೋಡೆಕೋರರ ಗುಂಪು ನುಗ್ಗಿ ಆಸ್ತಿ ದೋಚಿದ ನಂತರದಲ್ಲಿ ಪೊಲೀಸರು ಕಾರ್ಯಾಚರಣೆಗಿಳಿದರು.
ಜತೆಗೆ ಗ್ರಾಮಸ್ಥರಲ್ಲಿ ವಿಶ್ವಾಸ ತುಂಬುವ ಕಾರ್ಯವಾಗಿ ಗ್ರಾಮಸ್ಥರನ್ನೊಳಗೊಂಡಂತೆ ಗಸ್ತು ತಂಡಗಳನ್ನು ರಚಿಸಿ ಗ್ರಾಮ ಕಾವಲು ಕಾಯುವ ಬಹುದೊಡ್ಡ ತಂಡಗಳನ್ನು ಸಜ್ಜುಗೊಳಿಸುವ ಮೂಲಕ ಕಳ್ಳರ ಹಾವಳಿ ತಡೆಗೆ ಮುಂದಾಗಿದ್ದರು. ಅದರಂತೆ ಪ್ರತಿ ಗ್ರಾಮದಲ್ಲೂ ರಾತ್ರಿಯಾಗುತ್ತಿದ್ದಂತೆಯೇ ಪೊಲೀಸರು ಹಾಗೂ ಯುವಕರ ಪಡೆ ಗಸ್ತು ತಿರುಗತೊಡಗಿತು.
ಅಪರಿಚಿತರಿಂದ ಬೆಚ್ಚಿ ಬೀಳುತ್ತಿದ್ದರು: ದಸರಾ ಹಬ್ಬದ ಸಂಭ್ರಮ ಗ್ರಾಮಗಳಲ್ಲಿ ಮಾಯವಾಗಿ ಕಳ್ಳರ ಹಾವಳಿಯದ್ದೇ ಗದ್ದಲ ಕೇಳಿ ಬಂದಿತ್ತು. ಗ್ರಾಮಸ್ಥರಲ್ಲಿ ನೆಮ್ಮದಿ ಮಾತ್ರ ಮರಳಿರಲಿಲ್ಲ. ಆಗಾಗ್ಗೆ ಗ್ರಾಮಗಳಲ್ಲಿ ಅಪರಿಚಿತರು ಕಂಡುಬರುತ್ತಿದ್ದಂತೆಯೇ ಗ್ರಾಮಸ್ಥರು ಬೆಚ್ಚಿ ಬೀಳುತ್ತಿದ್ದರು. ಅದರಿಂದ ಅನೇಕ ಸಂದರ್ಭದಲ್ಲಿ ಪೊಲೀಸ್ ಮೇಲಧಿಕಾರಿಗಳಿಗೆ ದೂರವಾಣಿ ಕರೆಗಳೂ ಬಂದು ಗ್ರಾಮಕ್ಕೆ ತೆರಳಿ ತಪಾಸಣೆ ನಡೆಸಲಾಗಿತ್ತು.
  ಈಚೆಗೆ ಗಸ್ತಿನಲ್ಲಿದ್ದ ಪೊಲೀಸರಿಗೆ ತಾಲೂಕಿನ ಯರಮರಸ್ ರೈಲು ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಇಬ್ಬರು ಸಿಕ್ಕು ಬಿದ್ದಿದ್ದು, ಹೆಚ್ಚಿನ ವಿಚಾರಣೆ ವೇಳೆ ಅವರು ಗ್ರಾಮೀಣ ಭಾಗದಲ್ಲಿ ನಡೆದ ದರೋಡೆ ಮತ್ತು ಗ್ರಾಮಸ್ಥನ ಮೇಲೆ ಹಲ್ಲೆಯ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂಬುದು ಬಯಲಾಗಿದೆ. ಇದರಿಂದಾಗಿ ತಾಲೂಕಿನ ವಿವಿಧ ಗ್ರಾಮಗಳ ಜನತೆ ನೆಮ್ಮದಿಯ ನಿಟ್ಟುಸಿರಿಟ್ಟಿದ್ದಾರೆ. ಅಷ್ಟೇ ಅಲ್ಲ ಪೊಲೀಸ್ ಇಲಾಖೆಯು ಬಾಕಿ ಆರೋಪಿಗಳ ಪತ್ತೆಗೆ ಜಾಲ ಹರಡಿದೆ.
  ಈ ಕುರಿತು ಎಸ್ಪಿ ಎಂ.ಎನ್. ನಾಗರಾಜ್ ಪ್ರತಿಕ್ರಿಯಿಸಿ, ಗ್ರಾಮಸ್ಥರ ಸಹಕಾರದಿಂದ ಹಾಗೂ ದರೋಡೆಕೋರರ ಬಗ್ಗೆ ನೀಡಿದ ಸುಳಿವಿನಿಂದ ಇಬ್ಬರ ಬಂಧನ ಸಾಧ್ಯವಾಗಿದೆ ಎಂದಿದ್ದಾರೆ. ಇನ್ನುಳಿದ ಆರೋಪಿಗಳ ಪತ್ತೆಗೆ ಶೋಧ ನಡೆದಿದೆ ಎಂದಿದ್ದಾರೆ.
  ಒಟ್ಟಿನಲ್ಲಿ ದಸರಾ ಹಬ್ಬದ ವೇಳೆಗೆ ಗ್ರಾಮಸ್ಥರಿಗೆ ಕಳೆದಿದ್ದ ನೆಮ್ಮದಿ ಬೆಳಕಿನ ಹಬ್ಬ ದೀಪಾವಳಿ ಹೊತ್ತಿಗೆ ಮರಳಿ ತಂದುಕೊಡುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ.
ದರೋಡೆ ಪ್ರಕರಣ: ಇಬ್ಬರ ಬಂಧನ, ಆಸ್ತಿ ಜಪ್ತಿ
ರಾಯಚೂರು: ತಾಲೂಕಿನ ವಿವಿಧೆಡೆ ಗ್ರಾಮೀಣ ಪ್ರದೇಶದಲ್ಲಿ ನಡೆದಿದ್ದ ದರೋಡೆ ಪ್ರಕರಣಗಳಿಗೆ ಸಂಬಂಧಿಸಿ ಇಬ್ಬರು ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆಂದು ಜಿಲ್ಲಾ ಎಸ್ಪಿ ನಾಗರಾಜ್ ತಿಳಿಸಿದರು.
  ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ, ಬಂಧಿತರನ್ನು ಯಾದಗಿರಿ ಜಿಲ್ಲೆಯ ಗೋಡಿಹಾಳ ಗ್ರಾಮದ ಹಿರಣಶಿಖಾರಿ ವರ್ಗಕ್ಕೆ ಸೇರಿದ ಶಿವಪ್ಪ ಅಲಿಯಾಸ್ ಬಿಸ್ಲಾ ಅಲಿಯಾಸ್ ಶಿವು (45) ಹಾಗೂ ಸಚಿನ್ ಅಲಿಯಾಸ್ ಸಚ್ಚಾ ಅಲಿಯಾಸ್ ವಿನೋದ್ (20) ಎಂದು ಗುರುತಿಸಲಾಗಿದೆ.
  ಈ ಆರೋಪಿಗಳು ತಾಲೂಕಿನ ಯರಮರಸ್ ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವೇಳೆ ಪೊಲೀಸರು ಅವರನ್ನು ಹಿಡಿದು ವಿಚಾರಣೆ ನಡೆಸಿದಾಗ ತಾಲೂಕಿನ ಹೊಸಪೇಟೆಯ ಅಮರೇಶ್ ಮನೆಯಲ್ಲಿ ನಡೆದಿದ್ದ ಕಳವಿನ ಪ್ರಕರಣಕ್ಕೆ ಸಂಬಂಧಿಸಿ 30 ಸಾವಿರ ನಗದು, ಚಿನ್ನಾಭರಣ ಸೇರಿ ಒಟ್ಟು 63 ಸಾವಿರ ಆಸ್ತಿ ವಶಪಡಿಸಿಕೊಂಡಿದೆ ಎಂದರು.
  ಅದೇ ರೀತಿ ತಾಲೂಕಿನ ಮನ್ಸಲಾಪುರ ಗ್ರಾಮದಲ್ಲಿ ನಡೆದಿದ್ದ ದರೋಡೆಗೆ ಸಂಬಂಧಿಸಿ 50 ಸಾವಿರ ನಗದು, ಚಿನ್ನಾಭರಣ ಸೇರಿ 88 ಸಾವಿರ ಮೌಲ್ಯದ ಆಸ್ತಿ ಈ ಇಬ್ಬರು ಆರೋಪಿಗಳಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ. ಕಳೆದ ತಿಂಗಳು ತಾಲೂಕಿನ ಸುತ್ತಲಿನ ಗ್ರಾಮಗಳಲ್ಲಿ ದರೋಡೆಕೋರರ ಹಾವಳಿ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಡಿಎಸ್ಪಿ ಪಾಷಾ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ತಂಡವು ಈ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದರು.
  ಇನ್ನುಳಿದ ಆರೋಪಿಗಳಾದ ಮಲ್ಲೇಶಿ, ಶಾಸ್ತ್ರಿ, ಟೋಪಿಯಾ ಎಂಬುವರ ಪತ್ತೆ ಕಾರ್ಯ ಮುಂದುವರಿದಿದೆ. ಇಬ್ಬರು ಆರೋಪಿಗಳ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳ ತಂಡಕ್ಕೆ 10 ಸಾವಿರ ಬಹುಮಾನ ಪ್ರಕಟಿಸಲಾಗಿದೆ. ಅದೇ ರೀತಿ ಹೆಚ್ಚಿನ ಬಹುಮಾನ ನೀಡುವಂತೆ ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗುತ್ತದೆ ಎಂದ ಅವರು, ಆರೋಪಿಗಳ ಪತ್ತೆಗೆ ಗ್ರಾಮಸ್ಥರ ಸಹಕಾರವೂ ಕಾರಣ ಎಂದು ಹೇಳಿದರು.
  ಈ ಇಬ್ಬರು ಆರೋಪಿಗಳಿಂದ ನಗದು, ಚಿನ್ನಾಭರಣ, ಬೆಳ್ಳಿ ಸೇರಿ ಒಟ್ಟು 2 ಲಕ್ಷ ಮೊತ್ತದ ಆಸ್ತಿ ವಶಪಡಿಸಿಕೊ ಳ್ಳಲಾಗಿದೆ. ಕಳೆದೊಂದು ತಿಂಗಳಿನಿಂದ ತಾಲೂಕಿನ ಸುತ್ತಲಿನ ಗ್ರಾಮಗಳಲ್ಲಿ ರಾತ್ರಿ ಗಸ್ತು ಬಿಗಿಗೊಳಿಸಲಾಗಿತ್ತು. ಅಷ್ಟೇ ಅಲ್ಲ ಗ್ರಾಮದ ಅನೇಕರು ಪೊಲೀಸ್ ಸಿಬ್ಬಂದಿ ಜತೆ ಗಸ್ತು ತಿರುಗುವ ಕಾರ್ಯ ಮಾಡಿದ್ದರು ಎಂದರು.
  ಸದ್ಯ ನಗರ ಸೇರಿದಂತೆ ಜಿಲ್ಲಾದ್ಯಂತ ವಿವಿಧೆಡೆ ನಡೆದ ಕಳವಿನ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಜಾರಿಯಲ್ಲಿದೆ. ಜನತೆ ಸಹ ಜಾಗೃತರಾಗಿದ್ದು, ಪೊಲೀಸರಿಗೆ ದೂರವಾಣಿ ಮೂಲಕ ಮಾಹಿತಿ ನೀಡುತ್ತಿದ್ದಾರೆ. ಅದರಿಂದ ಇಲಾಖೆಗೆ ನೆರವಾಗಿದೆ. ಜನ ಸಂಪರ್ಕ ಸಭೆಗಳನ್ನು ಅಲ್ಲಲ್ಲಿ ನಡೆಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಅಪರಾಧ ಪ್ರಕರಣಗಳು, ಶಂಕಿತರ ಪ್ರವೇಶದ ಬಗ್ಗೆ ಪರಿಶೀಲಿಸಲು ಜಿಲ್ಲಾ ಪೊಲೀಸ್ ಇಲಾಖೆಯ ತಂಡವೊಂದನ್ನು ಸಿದ್ಧತೆಯಲ್ಲಿರಿಸಿದ್ದು, ಇಲಾಖೆಗೆ ಕರೆ ಬರುತ್ತಿದ್ದಂತೆಯೇ ವಿಚಾರಣೆ ನಡೆಸುವ ಕಾರ್ಯ ಈ ತಂಡ ಮಾಡುತ್ತಿದೆ ಎಂದರು.  ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್ಪಿ ಅಶೋಕ ಸದಲಗಿ, ವಿವಿಧ ಠಾಣೆಗಳ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
-ವಿಶೇಷ ವರದಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement