ಲಕ್ಷ್ಮೀಕ್ಯಾಂಪ್ ನ್ಯಾಯಬೆಲೆ ಅಂಗಡಿಸಂಚಾಲಕರ ಲೈಸನ್ಸ್ ರದ್ದತಿಗೆ ಒತ್ತಾಯ
ಸಿಂಧನೂರು: ನಗರದ ಲಕ್ಷ್ಮೀಕ್ಯಾಂಪ್ನಲ್ಲಿರುವ ನ್ಯಾಯಬೆಲೆ ಅಂಗಡಿ ಸಂಚಾಲಕರು ಅಸಮರ್ಪಕ ಆಹಾರಧಾನ್ಯ ವಿತರಿಸುವ ಮೂಲಕ ಪಡಿತರದಾರರಿಗೆ ಮೋಸವೆಸಗುತ್ತಿದ್ದು, ಸಂಚಾಲಕರ ಲೈಸನ್ಸ್ ರದ್ದುಗೊಳಿಸುವಂತೆ ಲಕ್ಷ್ಮೀಕ್ಯಾಂಪ್, ಪಿಡಬ್ಲ್ಯೂಡಿ ಕ್ಯಾಂಪ್ ವ್ಯಾಪ್ತಿಗೊಳಪಡುವ ನೌಕರ ವರ್ಗದವರು ಒತ್ತಾಯಿಸಿದ್ದಾರೆ.
ವಾರ್ಡ್ ನಂ.29, 30 ಮತ್ತು 31ನೇ ವಾರ್ಡ್ಗಳ ಪಡಿತರದಾರರು ಹಲವು ದಿನಗಳಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸಂಚಾಲಕರು ಪಡಿತರದಾರರಿಗೆ ಆಹಾರ ಧಾನ್ಯಗಳನ್ನು ವಿತರಿಸದೇ ಕಾಳಸಂತೆಯಲ್ಲಿ ಮಾರಿ ಕೊಳ್ಳುತ್ತಿದ್ದಾರೆಂದು ಆಪಾದಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ 29ನೇ ವಾರ್ಡ್ನ ಡಿ. ಮಹೇಶ, 30ನೇ ವಾರ್ಡ್ನ ಹಸೇನ್ ನಡುವಿನಮನಿ ದೋಟಿಹಾಳ, 31ನೇ ವಾರ್ಡ್ನ ಈಶಪ್ಪ, ಮಹ್ಮದ್ ಯೂಸೂಫ್, ರೇಣುಕಮ್ಮ, ತಾಜುದ್ದೀನ್ ಮತ್ತಿತರರು ತಿಂಗಳಲ್ಲಿ ಎರಡು ದಿನ ಮಾತ್ರ ನ್ಯಾಯಬೆಲೆ ಅಂಗಡಿಯ ಆಹಾರ ಧಾನ್ಯಗಳನ್ನು ವಿತರಿಸುವ ಸಂಚಾಲಕರು ತಿಂಗಳಪೂರ್ತಿ ಅಂಗಡಿಯನ್ನು ಮುಚ್ಚಿರುತ್ತಾರೆ. ಕೇವಲ ಎರಡು ದಿನ ಆಹಾರ ಧಾನ್ಯ ವಿತರಿಸುವುದರಿಂದ ನೂರಾರು ಪಡಿತರದಾರರು ಆಹಾರ ಧಾನ್ಯಗಳಿಂದ ವಂಚಿತರಾಗುತ್ತಿದ್ದೇವೆ ಎಂದವರು ದೂರಿದ್ದಾರೆ.
ಆಹಾರ ಧಾನ್ಯಗಳನ್ನು ಪಡೆಯದ ಕಾರ್ಡ್ದಾರರಿಗೆ ನಂತರ ಬಂದ ಸಮಯದಲ್ಲಿ ಕಾರ್ಡ್ನಲ್ಲಿ ಆಹಾರ ಧಾನ್ಯ ವಿತರಿಸಿದಂತೆ ನಮೂದಿಸಿ ಸರ್ಕಾರದ ಎಲ್ಲ ಪಡಿತರವನ್ನು ನ್ಯಾಯಬೆಲೆ ಅಂಗಡಿ ಸಂಚಾಲಕರೇ ನುಂಗಿಹಾಕುತ್ತಾರೆಂದು ಅವರು ಆರೋಪಿಸಿದ್ದಾರೆ. ಆಹಾರ ಇಲಾಖೆ ಅಧಿಕಾರಿಗಳು ಮತ್ತು ಸಚಿವರು ತಕ್ಷಣ ನ್ಯಾಯಬೆಲೆ ಅಂಗಡಿ ಸಂಚಾಲಕರ ಮೇಲೆ ಕಠಿಣಕ್ರಮ ಕೈಗೊಳ್ಳಬೇಕು, ಇನ್ನುಮುಂದೆ ಎಲ್ಲಾ ಪಡಿತರದಾರರಿಗೆ ಅನುಕೂಲವಾಗುವಂತೆ ತಿಂಗಳಾದ್ಯಂತ ನ್ಯಾಯಬೆಲೆ ಅಂಗಡಿಯನ್ನು ತೆರೆಯುವಂತೆ ಆದೇಶಿಸಬೇಕು, ಇಲ್ಲದಿದ್ದರೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ.