ಪ್ರತಿಭಾಕುಮಾರಿ ನಿಧನ: ಸಂತಾಪ
ರಾಯಚೂರು: ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ರಾಜ್ಯಾಧ್ಯಕ್ಷೆ ಬಿ.ಎಸ್. ಪ್ರತಿಭಾಕುಮಾರಿ ಅವರ ಅಕಾಲಿಕ ನಿಧನಕ್ಕೆ ಸಂಘಟನೆ ಜಿಲ್ಲಾಧ್ಯಕ್ಷೆ ಚೇತನಾ ಬನಾರೆ ಶೋಕ ವ್ಯಕ್ತಪಡಿಸಿದ್ದಾರೆ. ರಾಜ್ಯಾದ್ಯಂತ ಮಹಿಳೆಯರ ಹಲವಾರು ಜ್ವಲಂತ ಸಮಸ್ಯೆಗಳ ವಿರುದ್ಧ ಹೋರಾಟದಲ್ಲಿ ಭಾಗಿಯಾಗಿದ್ದರು. ಸಂಘಟನೆಯು ಹೊರತರುತ್ತಿರುವ ಮುಖಪತ್ರಿಕೆ ಸ್ತ್ರೀಮುಕ್ತಿಯನ್ನು ಪ್ರಕಟಿಸುವುದರಲ್ಲಿ ಅವರ ಕೊಡುಗೆ ಅಪಾರ. ರಾಜ್ಯಾದ್ಯಂತ ಸಂಚರಿಸಿ ಮಹಿಳಾ ಪರ ಹೋರಾಟ ಆಯೋಜಿಸುವುದು, ಸಂಘಟನೆ ಬಲಪಡಿಸಿದ್ದರು. ಅವರ ಅಗಲಿಕೆಯಿಂದ ಸಂಘಟನೆಗೆ ತುಂಬಲಾರದ ನಷ್ಟವಾಗಿದೆ ಎಂದು ಶೋಕಿಸಿದ್ದಾರೆ.
ಐವರ ಬಂಧನ
ಗುಲ್ಬರ್ಗ: ಇಲ್ಲಿನ ಆದರ್ಶ ನಗರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಜೂಜಾಡುತ್ತಿದ್ದ ಐವರನ್ನು ಬಂಧಿಸಿರುವ ಪೊಲೀಸರು ಅವರಿಂದ 5,475 ನಗದು ಜಪ್ತಿ ಮಾಡಿದ್ದಾರೆ. ಮಲ್ಲಣ್ಣಗೌಡ ತಂದೆ ತೇಜರಾವ ಪಾಟೀಲ್, ಶಿವಶಂಕರ ತಂದೆ ಹಣಮಂತರಾವ ಪಾಟೀಲ್, ಗುಂಡಪ್ಪ ತಂದೆ ತಿಪ್ಪಣ್ಣ ಹರಳಯ್ಯ, ವೀರೇಶ ತಂದೆ ಪರಮಾನಂದ ವಾಲಶೆಟ್ಟಿ, ಕುಮಾರ ಶಂಕರ ಕಟ್ಟಿಮನಿ ಎಂಬುವರನ್ನು ಬಂಧಿಸಲಾಗಿದೆ. ಈ ಕುರಿತು ಎಂ.ಬಿ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.