ಸಂಗೊಳ್ಳಿ ರಾಯಣ್ಣ ವೃತ್ತ ನಾಮಕರಣ
ರಾಯಚೂರು: ಇಲ್ಲಿನ ಶ್ರೀರಾಮನಗರ ಕಾಲನಿಯಲ್ಲಿ ಸೋಮವಾರ ಹೊಸೂರು ಮತ್ತು ರಾಂಪುರ ಗ್ರಾಮಗಳ ಮಧ್ಯೆ ಸಂಪರ್ಕ ರಸ್ತೆಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದ ನಾಮಕರಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಮಾರಂಭದ ಸಾನಿಧ್ಯವನ್ನು ಮಟಮಾರಿಯ ಶಿವಾನಂದಮಠದ ಜ್ಞಾನಾನಂದ ಶ್ರೀ ವಹಿಸಿದ್ದರು. ಅಧ್ಯಕ್ಷತೆಯನ್ನು ಬಸವರಾಜಪ್ಪ ಪೂಜಾರಿ ಪಂಜಿನ ಮಸರಕಲ್ ವಹಿಸಿದ್ದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘಟನೆ ಜಿಲ್ಲಾಧ್ಯಕ್ಷ ನಂದಿ ಕಟ್ಟಿಮನಿ, ಪದಾಧಿಕಾರಿಗಳು, ಹಾಲುಮತ ಕುರುಬರ ಸಂಘದ ಕಾರ್ಯಕರ್ತರು ಸೇರಿ ಅನೇಕರು ಪಾಲ್ಗೊಂಡಿದ್ದರು.
6ರಿಂದ ಪ್ರವಚನ
ಸಿಂಧನೂರು: ತಾವರಗೇರಾ ಗ್ರಾಮದ ಶಶಿಧರೇಶ್ವರಸ್ವಾಮಿ ಪಪೂ ಕಾಲೇಜು ಆವರಣದಲ್ಲಿ ನ.6ರಿಂದ 10ರ ವರೆಗೆ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ ಅಧ್ಯಾತ್ಮ ಪ್ರವಚನ ನಡೆಸಿಕೊಡಲಿದ್ದಾರೆ ಎಂದು ಕಿಸಾನ್ ಭಾರತಿ ಟ್ರಸ್ಟ್ ಸಂಚಾಲಕ ಗವಿಸಿದ್ದಪ್ಪ ಕಾನಿಹಾಳ ತಿಳಿಸಿದರು. ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತಿದಿನ ಸಂಜೆ 6ರಿಂದ 7ರವರೆಗೆ ಪ್ರವಚನ ನಡೆಯಲಿದೆ. ಐದು ದಿನಗಳ ಕಾಲ ಸುತ್ತಮುತ್ತಲಿನ ಹಳ್ಳಿಗಳಿಗೆ ಪಾದಯಾತ್ರೆಯಲ್ಲಿ ತೆರಳಿ ಗ್ರಾಮೀಣ ಜನರಿಗೆ ಶಿಕ್ಷಣ, ಆರೋಗ್ಯ, ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವುದರ ಜತೆ ಅವುಗಳ ಮಹತ್ವದ ಬಗ್ಗೆ ಶ್ರೀಗಳು ಹಿತವಚನ ಹೇಳುವರು. ಗ್ರಾಮೀಣ ಜನರಲ್ಲಿ ಎಲ್ಲ ಸಮುದಾಯಗಳು ಒಂದಾಗಿ ಬದುಕಬೇಕೆಂಬ ಆಶಯದಿಂದ ಪ್ರವಚನ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು. ಪಿ.ಬಸವರಾಜ ಕುರುಕುಂದ ಮಾತನಾಡಿದರು. ಕಟ್ಟೆಪ್ಪ ಗುಂಜಳ್ಳಿ, ಕವಿ ಪಂಪಯ್ಯಸ್ವಾಮಿ ಸಾಲಿಮಠ, ಮಾನಯ್ಯಬಡಿಗೇರ, ವಿರುಪಣ್ಣ ಇದ್ದರು.
ಇಬ್ಬರಿಗೆ ಹಲ್ಲೆ
ಗುಲ್ಬರ್ಗ: ಕ್ಷುಲ್ಲಕ ಕಾರಣಕ್ಕೆ ಗಂಡ ಹೆಂಡತಿಯ ಮೇಲೆ ಇಬ್ಬರು ಹಲ್ಲೆ ನಡೆಸಿದ ಘಟನೆ ಆಳಂದ ತಾಲೂಕಿನ ಕಿಣ್ಣಿ ಅಬ್ಬಾಸ ಗ್ರಾಮದಲ್ಲಿ ನಡೆದಿದೆ. ಕೂಲಿ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ರೇಷ್ಮಾ ಗಂಡ ಚಂದಪ್ಪ ಕೊಡತೆ ಮತ್ತು ಚಂದಪ್ಪ ಕೊಡತೆ ಅವರ ಮೇಲೆ ಸುಧಾಕರ ತಂದೆ ಲಕ್ಷ್ಮಣ ಕೊಡತೆ ಹಾಗೂ ಆತನ ಹೆಂಡತಿ ಶರಣಮ್ಮ ಎಂಬುವರು ಹಲ್ಲೆ ನಡೆಸಿದ್ದಾರೆ. ಸುಧಾಕರ ಎಂಬಾತ ಚಂದಪ್ಪನಿಗೆ ಕಲ್ಲಿನಿಂದ ಹೊಡೆದಿದ್ದು, ಸುಧಾಕರನ ಹೆಂಡತಿ ಶರಣಮ್ಮ ಚಂದಪ್ಪನ ಹೆಂಡತಿ ರೇಷ್ಮಾಳಿಗೆ ಕೂದಲು ಹಿಡಿದು ಎಳೆದಿದ್ದಾಳೆ. ಈ ಕುರಿತು ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.