ಗುಲ್ಬರ್ಗ ವಿವಿಗೆ ಪಾರ್ವತಿ ಪ್ರಥಮ
ಸಿಂಧನೂರು: ಗುಲ್ಬರ್ಗ ವಿಶ್ವವಿದ್ಯಾಲಯದ 2012-13ನೇ ಸಾಲಿನಲ್ಲಿ ಬಿಬಿಎಂ ವಿಭಾಗದಲ್ಲಿ ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿ ಪಾರ್ವತಿ ಪ್ರಥಮ ರ್ಯಾಂಕ್ ಪಡೆದಿದ್ದಾಳೆ.
3900 ಅಂಕಗಳಿಗೆ ಪಾವರ್ತಿ 3366 ಅಂಕಗಳನ್ನು ಪಡೆದಿದ್ದಾಳೆ. (ಶೇ. 86.31) ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜಿನ ಪ್ರಾಚಾರ್ಯ ಪ್ರಹ್ಲಾದ ರೆಡ್ಡಿ, ಬೋಧಕರು, ಸಿಬ್ಬಂದಿ ಅಭಿನಂದಿಸಿ ಉನ್ನತ ಸ್ಥಾನಕ್ಕೆರಲಿ ಎಂದು ಆಶಿಸಿದ್ದಾರೆ.ಈ ಬಾರಿಯ ವಿವಿ ಬಿಬಿಎಂ ವಿಭಾಗದಲ್ಲಿ 3 ರ್ಯಾಂಕ್ಗಳು ತಾಲೂಕಿಗೆ ಸಿಕ್ಕಿವೆ. ಪ್ರಥಮ ರ್ಯಾಂಕ್ ಸರ್ಕಾರಿ ಮಹಾವಿದ್ಯಾಲಯಕ್ಕೆ ಬಂದರೆ, ಎರಡನೇ ರ್ಯಾಂಕ್ ರಾಯಚೂರಿನ ಶ್ರೀಸ್ ಬಿಬಿಎಂ ಕಾಲೇಜಿನಲ್ಲಿ ಅಭ್ಯಾಸ ಮಾಡಿದ ಸಿಂಧನೂರಿನ ಅಕ್ಷತಾ ಮಲ್ಲನಗೌಡ ದ್ವಿತೀಯ ರ್ಯಾಂಕ್ ಪಡೆದಿದ್ದಾರೆ. ಇನ್ನೂ ನಗರದ ನ್ಯಾಶನಲ್ ಕಾಲೇಜಿನ ಸ್ಫೂರ್ತಿ ಕೆ.ಎಂ. ಮಹಾದೇವಪ್ಪ 9ನೇ ರ್ಯಾಂಕ್ ಪಡೆದಿದ್ದಾಳೆ.
--
ಇಂದು ವಿವಿಧ ಸ್ಪರ್ಧೆಗಳು
ರಾಯಚೂರು: ನಗರದ ಸರ್ಕಾರಿ ನೌಕರರ ಭವನದಲ್ಲಿ ನ.6 ರಂದು ಜಿಲ್ಲಾ ಬಾಲಭಾವನದಿಂದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸರ್ಕಾರಿ ನೌಕರರ ಭವನದಲ್ಲಿ ಬೆಳಗ್ಗೆ 10.30ಕ್ಕೆ ಸ್ಪರ್ಧೆಗಳು ನಡೆಯಲಿದ್ದು, ಬಾಲಭವನವು 2013ನೇ ಸಾಲಿನ ಮಕ್ಕಳ ದಿನಾಚರಣೆ ಹಾಗೂ ರಾಜ್ಯಮಟ್ಟದ ಮಕ್ಕಳ ಕಲಾ ಉತ್ಸವ, ಕಲಾಶ್ರೀ ಪ್ರಶಸ್ತಿ ಶಿಬಿರಗಳನ್ನು ನಡೆಸುವುದರೊಂದಿಗೆ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಉದ್ದೇಶಿಸಿದೆ.
ಇದರಂಗವಾಗಿ ಸೃಜನಾತ್ಮಕ ಕಲೆ, ಬರವಣಿಗೆ ಹಾಗೂ ಪ್ರದರ್ಶನ ಕಲೆ, ವಿಜ್ಞಾನ ನೂತನ ಅವಿಷ್ಕಾರಗಳಲ್ಲಿ ತಾಲೂಕು, ಜಿಲ್ಲಾಮಟ್ಟದ ಸ್ಪರ್ಧೆಗಳನ್ನು ಆಯೋಜಿಸಿದ್ದು, ಆಯ್ಕೆಯಾದ ಮಕ್ಕಳನ್ನು ರಾಜ್ಯಮಟ್ಟದ ಸ್ಪರ್ಧೆಗಳಿಗೆ ಕಳಿಸಿಕೊಡಲಾಗುತ್ತದೆ. ರಾಜ್ಯಮಟ್ಟದ ಕಲಾಶ್ರೀ ಆಯ್ಕೆ ಶಿಬಿರದಲ್ಲಿ ಭಾಗವಹಿಸಿ ಕಲಾಶ್ರೀ ಪ್ರಶಸ್ತಿ ಪಡೆದ ಮಕ್ಕಳನ್ನು ಅಂಕಗಳ ಆಧಾರದಲ್ಲಿ ಹಾಗೂ ರಾಷ್ಟ್ರೀಯ ಬಾಲ ಭವನದ ನಿಯಮಗಳನ್ವಯ ಅರ್ಹವುಳ್ಳ ಮಕ್ಕಳನ್ನು ರಾಷ್ಟ್ರೀಯ ಮಟ್ಟದ ಬಾಲಶ್ರೀ ಪ್ರಶಸ್ತಿಗೆ ಸ್ಥಳೀಯ ಸ್ಪರ್ಧೆಗಳ ವಿಜೇತರಿಗೆ ಕಳುಹಿಸಿಕೊಡಲಾಗುವುದು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ತಿಳಿಸಿದೆ.