ನಾಳೆಯಿಂದ ಅಹೋರಾತ್ರಿ ಧರಣಿ
ರಾಯಚೂರು: ಕಂಪನಿ ಕೃಷಿ ವಿರೋಧಿಸಿ ಮತ್ತು ರೈತ ಕೂಲಿಕಾರರ ಕೃಷಿ ರಕ್ಷಣೆಗೆ ಆಗ್ರಹಿಸಿ ನ.7 ಮತ್ತು 8ರಂದು ಕರ್ನಾಟಕ ಪ್ರಾಂತ ರೈತಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ಆಯೋಜಿಸಲಾಗಿದೆ. ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆಯು ಮನೆ- ನಿವೇಶನ ರೈತರಿಗೆ ಶೀಘ್ರ ಮನೆ ನಿವೇಶನ ಒದಗಿಸಬೇಕು. ಬಾಗರಹುಕುಂ ಮತ್ತು ಅರಣ್ಯಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಿಕೆಗೆ ಆಗ್ರಹಿಸಿ, ಖಾತ್ರಿ ಯೋಜನೆಯ ಕೂಲಿ ಮೊತ್ತ 300 ಗೆ ಏರಿಕೆ ಮಾಡುವಂತೆ ಒತ್ತಾಯಿಸಲಾಗುತ್ತದೆ. ಡಾ. ಸ್ವಾಮಿನಾಥನ್ ವರದಿ ಸಲಹೆಯಂತೆ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ನಂದವಾಡಗಿ, ಎನ್ ಆರ್ಬಿಸಿ ಕಾಲುವೆಯ ವಿಸ್ತರಣೆಗೆ ಹಾಗೂ ಕೇರಳದ ಮಾದರಿಯಲ್ಲಿ ಋಣಮುಕ್ತ ಕಾಯಿದೆ ಜಾರಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನ.7, 8ರಂದು ಒಟ್ಟು 48 ಗಂಟೆಗಳ ಅಹೋರಾತ್ರಿ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದು ತಿಳಿಸಿದೆ.
ಜೂಜು: 11 ಮಂದಿ ಬಂಧನ
ರಾಯಚೂರು: ಲಿಂಗಸ್ಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ಇಸ್ಪೀಟ್ ಆಡುತ್ತಿದ್ದ ನಾಗಲಿಂಗಯ್ಯ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಪಟ್ಟಣದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಡುತ್ತಿದ್ದ ವೇಳೆ ದಾಳಿ ಮಾಡಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಅವರಿಂದ ನಗದು 14025 ಜಪ್ತಿ ಮಾಡಿದ್ದಾರೆ. ಈ ಕುರಿತು ಮುದಗಲ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಮಸ್ಕಿಯಲ್ಲಿ 6 ಬಂಧನ: ಲಿಂಗಸ್ಗೂರು ತಾಲೂಕಿನ ಮಸ್ಕಿ ಪಟ್ಟಣದಲ್ಲಿ ಇಸ್ಪೀಟ್ ಆಡುತ್ತಿದ್ದ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಾಳಪ್ಪ, ಶಿವಪ್ರಕಾಶ, ಶರಣಪ್ಪ, ಮಾಳಿಂಗರಾಯ, ಸುನೀಲ್ ಮತ್ತು ಮಲ್ಲಿಕಾರ್ಜುನ ಎಂದು ಗುರುತಿಸಲಾಗಿದೆ. ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಡುತ್ತಿದ್ದ ವೇಳೆ ದಾಳಿ ಮಾಡಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಅವರಿಂದ 15345 ಜಪ್ತಿ ಮಾಡಿದ್ದಾರೆ. ಮಸ್ಕಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಶಂಕರಗೌಡ ನೇಮಕ
ಸಿಂಧನೂರು: ಬಿಜೆಪಿಯ ಯುವ ಮುಖಂಡ ಶಂಕರಗೌಡ ಜೋಳದರಾಶಿ ಅವರನ್ನು ಜಿಲ್ಲಾ ಕಾರ್ಯಕಾರಣಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಈ ಕುರಿತು ನೇಮಕಾತಿ ಪತ್ರ ನೀಡಿರುವ ಬಿಜೆಪಿ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ ಜೋಳದರಾಶಿ ಅನೇಕ ವರ್ಷಗಳಿಂದ ಭಾರತೀಯ ಜನತಾ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತರಾಗಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.