ನಾಳೆಯಿಂದ ರಾಷ್ಟ್ರೀಯ ಮಹಿಳಾ ವಿಜ್ಞಾನ ಸಮ್ಮೇಳನ
ರಾಯಚೂರು: ನಗರದ ತಾರಾನಾಥ ಶಿಕ್ಷಣ ಸಂಸ್ಥೆಯ ಲಕ್ಷ್ಮಿವೆಂಕಟೇಶ ದೇಸಾಯಿ ಮಹಾವಿದ್ಯಾಲಯದಲ್ಲಿ ನ.7 ರಿಂದ 9ರವರೆಗೆ ಆರನೇಯ ರಾಷ್ಟ್ರೀಯ ಮಹಿಳಾ ವಿಜ್ಞಾನ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ತಾರಾನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಾರಸ ಮಲ್ ಸುಖಾಣಿ ತಿಳಿಸಿದರು.
ನಗರದಲ್ಲಿ ಎಲ್ವಿಡಿ ಕಾಲೇಜಿನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ವದೇಶಿ ವಿಜ್ಞಾನ ಆಂದೋಲನ- ಕರ್ನಾಟಕ ಸಂಸ್ಥೆಯ ಸಹಯೋಗದಲ್ಲಿ ನಡೆಯುವ ಸಮ್ಮೇಳನವನ್ನು ನ.7ರಂದು ಬೆಳಗ್ಗೆ 10.30ಕ್ಕೆ ಕಾಲೇಜಿನ ಸಭಾಂಗಣದಲ್ಲಿ ಬಿಜಾಪುರದ ರಾಜ್ಯ ಮಹಿಳಾ ವಿವಿಯ ಕುಲಪತಿ ಡಾ. ಮೀನಾ ಚಂದಾವರ್ಕರ್ ಉದ್ಘಾಟಿಸಲಿದ್ದಾರೆಂದು ಹೇಳಿದರು.
ಬೆಂಗಳೂರಿನ ಇಂಡಿಯನ್ ಇನ್ಸಿಟಿಟ್ಯೂಟ್ನ ಪ್ರಾಧ್ಯಾಪಕಿ ಪ್ರೊ. ಎಚ್.ಎಸ್. ಸಾವಿತ್ರಿ ಅವರಿಗೆ ಈ ವೇಳೆ ಮೇರಿ ಕ್ಯೂರಿ ಮಹಿಳಾ ವಿಜ್ಞಾನ ಪುರಸ್ಕಾರ, ಬೆಂಗಳೂರಿನ ರಿಸ್ಯಾಟ್- ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಕಾರ್ಯಕ್ರಮ ನಿರ್ದೇಶಕಿ ಡಾ. ಎನ್. ವಲರ್ಮತಿ ಅವರಿಗೆ ಸಿ.ವಿ. ರಾಮನ್ ಮಹಿಳಾ ವಿಜ್ಞಾನಿ ಪುರಸ್ಕಾರ ಪ್ರದಾನ ಮಾಡಲಾಗುತ್ತದೆ ಎಂದರು.
ಉದ್ಘಾಟನಾ ಸಮಾರಂಭದಲ್ಲಿ ಸತ್ಯಭಾಮಾ ವಿವಿಯ ಪ್ರೊ. ವೈದೇಹಿ ಗಣೇಶನ್ ಮತ್ತು ಬೆಂಗಳೂರಿನ ಜಿಟಿಆರ್ ಇ-ಡಿಆರ್ ಡಿಒ ಸಂಸ್ಥೆಯ ನಿವೃತ್ತ ವಿಜ್ಞಾನಿ ಡಾ. ಮೀರಾ ಕೌಶಿಕ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಜಿಪಂ ಅಧ್ಯಕ್ಷೆ ಹಾಗೂ ಸಮ್ಮೇಳನದ ಸಂಘಟನಾ ಸಮಿತಿಯ ಅಧ್ಯಕ್ಷೆಯೂ ಆಗಿರುವ ಲಲಿತಮ್ಮ ಪಾಟೀಲ್ ಭಾಗವಹಿಸಲಿದ್ದಾರೆಂದು ತಿಳಿಸಿದರು.
ಸಮ್ಮೇಳನದ ಸಮಾರೋಪವು ನ.9 ರಂದು ಮಧ್ಯಾಹ್ನ 3ಕ್ಕೆ ನಡೆಯಲಿದ್ದು, ಸಮಾರೋಪ ಭಾಷಣವನ್ನು ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಸಂಸ್ಥೆಯ ನಿಕಟಪೂರ್ವ ನಿರ್ದೇಶಕಿ ಡಾ. ವಿಜಯಲಕ್ಷ್ಮಿ ದೇಶಮಾನೆ ಮಾಡಲಿದ್ದಾರೆ. ವಿಜ್ಞಾನ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮೆರೆದ ದೇಶದ ವಿವಿಧ ಮಹಾನಗರಗಳಿಂದ ಮಹಿಳಾ ವಿಜ್ಞಾನಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದು, ಅದಕ್ಕಾಗಿ ಶಿಕ್ಷಣ ಸಂಸ್ಥೆಯು ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿಸಿದರು.
ಸಮ್ಮೇಳನದಲ್ಲಿ ಸುಮಾರು 250ಕ್ಕೂ ಹೆಚ್ಚಿನ ಸಂಖ್ಯೆಯ ಮಹಿಳಾ ವಿಜ್ಞಾನಿಗಳು ಪಾಲ್ಗೊಂಡು ವಿಜ್ಞಾನ ವಿಷಯಗಳ ಪ್ರಬಂಧ ಮಂಡಿಸಲಿದ್ದಾರೆ. ಸಮ್ಮೇಳನದಲ್ಲಿ ಏಕಕಾಲಕ್ಕೆ ನಾಲ್ಕು ಗೋಷ್ಠಿಗಳು ನಡೆಯಲಿದ್ದು, ಗೋಷ್ಠಿಗಳಿಗೆ ಪುರಾತನ ವೇದವಿದ್ವಾಂಸರ ಹೆಸರುಗಳಾದ ಭಾಸ್ಕರೀಯಂ, ಧನ್ವಂತರೀಯಂ, ಭಾರದ್ವಾಜೀಯಂ, ಪರಾಶರೀಯಂ, ಕೌಟಲ್ಯೀಯಂ, ಪತಂಜಲೀಯಂ, ಪಾಣನೀಯಂ, ಬೋಸೀಯಂ, ಭಾರತೀಯಂ ಮುಂತಾದ ಹೆಸರಿಟ್ಟಿರುವುದು ಸಮ್ಮೇಳನದ ವಿಶೇಷ ಎಂದರು.
ಆಯುರ್ವೇದ, ಗಣಿತ, ವಿಜ್ಞಾನ, ಕೃಷಿ, ಭೌತ ವಿಜ್ಞಾನ, ಖಗೋಳ ವಿಜ್ಞಾನ, ತಂತ್ರಜ್ಞಾನ, ರಸಾಯನ ಸೇರಿದಂತೆ ಕಲೆ, ಸಂಸ್ಕೃತಿ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಸಮ್ಮೇಳನದಲ್ಲಿ ಪ್ರಬಂಧಗಳು ಮಂಡನೆಯಾಗಲಿವೆ ಎಂದ ಅವರು, ಸ್ವದೇಶಿ ವಿಜ್ಞಾನ ಆಂದೋಲನ- ಕರ್ನಾಟಕವು ಮಹಿಳಾ ವಿಜ್ಞಾನಿಗಳ ಸಮ್ಮೇಳನವನ್ನು ಕಳೆದ ಕೆಲ ವರ್ಷಗಳಿಂದ ಆಯೋಜಿಸುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಸ್ಕಿ ನಾಗರಾಜ್ ವಕೀಲರು, ಎಲ್ವಿಡಿ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಎಂ. ಖೇಣೇದ್ ಮತ್ತಿತರರಿದ್ದರು.