ಕಾರಾಗೃಹಕ್ಕೆ ವಿದ್ಯುತ್ ಬೇಲಿ
ಕನ್ನಡಪ್ರಭ ವಾರ್ತೆ, ರಾಯಚೂರು, ನ.6
ರಾಜ್ಯದ ವಿವಿಧ ಕಾರಾಗೃಹಗಳಿಂದ ಕೈದಿಗಳು ಪರಾರಿಯಾದ ನಂತರ ಬಂಧೀಖಾನೆ ಇಲಾಖೆ ಎಚ್ಚೆತ್ತಿದೆ. ಕೈದಿಗಳು ಕಾರಾಗೃಹದಿಂದ ತಪ್ಪಿಸಿಕೊಳ್ಳುವುದಕ್ಕೆ ಕಡಿವಾಣ ಹಾಕಲು ರಾಯಚೂರು ಜಿಲ್ಲಾ ಕಾರಾಗೃಹಕ್ಕೆ ವಿದ್ಯುತ್ ತಂತಿಬೇಲಿ ಅಳವಡಿಕೆ ಸೇರಿ ವಿವಿಧ ಭದ್ರತಾ ಕ್ರಮ ಕೈಗೊಳ್ಳಲು ಮುಂದಾಗಿದೆ.
ಸುಮಾರು 100 ವರ್ಷಗಳಿಗೂ ಹಳೆಯದಾದ ನಗರದ ಜಿಲ್ಲಾ ಕಾರಾಗೃಹಕ್ಕೆ ಕಾಯಕಲ್ಪ ನೀಡುವ ಕಾರ್ಯಕ್ಕೆ ಕೊನೆಗೂ ಬಂಧೀಖಾನೆ ಇಲಾಖೆ ಸಜ್ಜಾಗಿದೆ. ಕಾರಾಗೃಹದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಜತೆ ಜತೆಗೆ ಭದ್ರತೆಗೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಪೂರಕ ಕ್ರಮ ಕೈಗೊಳ್ಳಲು ಅವಶ್ಯಕತೆಗಳ ಮಾಹಿತಿ ಇಲಾಖೆ ಪಡೆದಿದೆ.
ಹಾಲಿ ಜಿಲ್ಲಾ ಕಾರಾಗೃಹದಲ್ಲಿಯೇ: ನಗರದ ಜಿಲ್ಲಾ ಕಾರಾಗೃಹವನ್ನು ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಗರದ ಹೊರವಲಯದ ಪೋತಗಲ್ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲು ಆಲೋಚಿಸಲಾಗಿತ್ತು. ಆದರೆ ವಿಚಾರಣಾಧೀನ ಕೈದಿಗಳನ್ನು ನ್ಯಾಯಾಲಯಕ್ಕೆ ಕರೆದೊಯ್ಯುವುದು, ತುರ್ತು ಸಂದರ್ಭ ವೈದ್ಯಕೀಯ ಸೌಲಭ್ಯ ನೀಡಲು ವಿಳಂಬವಾಗುವುದೆಂಬ ಲೆಕ್ಕಾಚಾರದಿಂದ ನೂತನ ಕಾರಾಗೃಹ ನಿರ್ಮಾಣಕ್ಕೆ ಸದ್ಯಕ್ಕೆ ಕೈಬಿಟ್ಟ ಸರ್ಕಾರ, ಹಾಲಿ ಜಿಲ್ಲಾ ಕಾರಾಗೃಹದಲ್ಲಿಯೇ ಕೆಲ ಸುಧಾರಣೆ ಕ್ರಮ ಕೈಗೊಳ್ಳಲು ಯೋಜಿಸಿದೆ.
ಅದರಲ್ಲೂ ಈಚೆಗೆ ಬಳ್ಳಾರಿ ಮತ್ತು ಬೆಂಗಳೂರು ಕಾರಾಗೃಹಗಳಿಂದ ಕೈದಿಗಳು ತಪ್ಪಿಸಿಕೊಂಡು ಪರಾರಿಯಾಗಿದ್ದು, ಬಂಧೀಖಾನೆ ಮತ್ತು ಪೊಲೀಸ್ ಇಲಾಖೆಯ ನಿದ್ದೆಗೆಡಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಜಿಲ್ಲಾ ಕಾರಾಗೃಹಗಳಿಗೆ ವಿದ್ಯುತ್ ತಂತಿ ಬೇಲಿ ಅಳವಡಿಕೆಗೆ ಸಂಬಂಧಿಸಿ ಮಾಹಿತಿ ಕೇಳಲಾಗಿದೆ.
ಎಡಿಜಿಪಿ ಕಚೇರಿಯಿಂದ ಮಾಹಿತಿ: ಅಂತೆಯೇ ರಾಯಚೂರು ಜಿಲ್ಲಾ ಕಾರಾಗೃಹದಿಂದಲೂ ವಿದ್ಯುತ್ ತಂತಿ ಬೇಲಿ ಅಳವಡಿಕೆಗೆ ಸಂಬಂಧಿಸಿ ಬಂಧೀಖಾನೆ ಇಲಾಖೆಯ ಎಡಿಜಿಪಿ ಕಚೇರಿಯಿಂದ ಮಾಹಿತಿ ಕೇಳಿದ್ದು, ನೂರು ವರ್ಷಗಳಿಗೂ ಹೆಚ್ಚು ಹಳೆಯದಾದ ಜಿಲ್ಲಾ ಕಾರಾಗೃಹ ಗೋಡೆಗಳು ಸುಮಾರು 20 ರಿಂದ 21 ಅಡಿ ಎತ್ತರವಿದ್ದು, ಅವುಗಳಿಗೆ ವಿದ್ಯುತ್ ತಂತಿ ಬೇಲಿ ಅಳವಡಿಕೆಗೆ ಸುಮಾರು 366 ಮೀಟರ್ ತಂತಿ ಬೇಲಿಯ ಅವಶ್ಯಕತೆಯ ಬಗ್ಗೆ ಇಲಾಖೆಯ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಕಾರಾಗೃಹದ ಜೈಲರ್ ಅಬ್ದುಲ್ ಶಕೂರ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಗಸ್ತು ತೀವ್ರ: ಈಚೆಗೆ ರಾಜ್ಯದ ವಿವಿಧ ಕಾರಾಗೃಹಗಳಿಂದ ಕೈದಿಗಳು ಪರಾರಿಯಾದ ಘಟನೆಯ ನಂತರದಲ್ಲಿ ಜಿಲ್ಲಾ ಕಾರಾಗೃಹದ ಗಸ್ತು ತೀವ್ರಗೊಳಿಸಲಾಗಿದೆ. ಈ ಮೊದಲು ಎರಡು ಬಾರಿ ಕಾರಾಗೃಹದ ಗಸ್ತು ನಡೆಸಲಾಗುತ್ತಿತ್ತು. ಹಾಗೆಯೇ ಕಾರಾಗೃಹದ ಅಧೀಕ್ಷಕರು ಆಗಾಗ್ಗೆ ದಿಢೀರ್ ಭೇಟಿ ನೀಡುತ್ತಿದ್ದರು. ಈಗ ಹಗಲು ಮತ್ತು ರಾತ್ರಿ ವೇಳೆ ಮೂರು ಬಾರಿ ಕಾರಾಗೃಹದ ಸುತ್ತ ಗಸ್ತು ಕೈಗೊಳ್ಳಲು ಕ್ರಮ ಜರುಗಿಸಲಾಗಿದೆ.
ಹೊಸ ಕಾರಾಗೃಹಕ್ಕೆ ಜಾಗೆ: ನಗರದ ಬಿಜನಗೇರಾ ರಸ್ತೆಯಲ್ಲಿ ಜಿಲ್ಲಾ ಕಾರಾಗೃಹ ನಿರ್ಮಾಣಕ್ಕೆ ಜಾಗೆ ವೀಕ್ಷಿಸಿದ್ದು, ಆ ಪ್ರದೇಶವು ಕೈದಿಗಳ ವಾಸಕ್ಕೆ ಸುರಕ್ಷತಾ ದೃಷ್ಟಿಯಿಂದ ಯೋಗ್ಯವಲ್ಲ ಎಂಬ ತೀರ್ಮಾನಕ್ಕೆ ಬಂದಿರುವ ಕಾರಾಗೃಹದ ಅಧಿಕಾರಿಗಳು ಪರ್ಯಾಯವಾಗಿ ಲಿಂಗಸ್ಗೂರು ಇಲ್ಲವೇ ಹೈದರಾಬಾದ್ ಮುಖ್ಯ ರಸ್ತೆಯ ಸಮೀಪ 10ಎಕರೆ ಪ್ರದೇಶವನ್ನು ಜಿಲ್ಲಾ ಕಾರಾಗೃಹ ನಿರ್ಮಾಣಕ್ಕೆ ಒದಗಿಸಲು ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಮನವಿ ಮಾಡಲಾಗಿದೆ ಎಂದು ಗೊತ್ತಾಗಿದೆ.
ರಾಜ್ಯ ಸರ್ಕಾರದ ಬಂಧೀಖಾನೆ ಇಲಾಖೆಯು ಆಳಂದ ಮತ್ತು ಭದ್ರಾವತಿಯಲ್ಲಿ ಅತ್ಯಾಧುನಿಕ ಸುರಕ್ಷತಾ ಕ್ರಮಗಳಿಂದ ಕೂಡಿದ ನೂತನ ವಿನ್ಯಾಸದ ಕಾರಾಗೃಹ ನಿರ್ಮಿಸಲು ಮುಂದಾಗಿದ್ದು, ಅದೇ ವಿನ್ಯಾಸವನ್ನು ಇನ್ನುಳಿದೆಡೆಯೂ ಜಾರಿಗೆ ತರುವ ಸಾಧ್ಯತೆಯಿದೆ. ಈ ಹಿನ್ನೆಲೆ ರಾಯಚೂರು ಜಿಲ್ಲಾ ನೂತನ ಕಾರಾಗೃಹ ನಿರ್ಮಾಣಕ್ಕೆ ಈಗಿನಿಂದಲೇ ಪೂರ್ವ ಸಿದ್ಧತೆಗೆ ಇಲಾಖೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.