ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ದೇಸಿ ಮೂಲ ಆಹಾರ ಸಂಸ್ಕೃತಿ ಅವಶ್ಯ: ಬಾಳೆ

Lingaraj Badiger
Updated On : 7 Nov 2013, 11:26 am

ರಾಯಚೂರು: ದೇಶದ ಮೂಲ ಆಹಾರ ಸಂಸ್ಕೃತಿಯ ಪ್ರತಿಪಾದನೆ ಅವಶ್ಯಕತೆ ಹೆಚ್ಚಿದೆ. ಸುಸ್ಥಿರ ಕೃಷಿ ಮತ್ತು ಆರೋಗ್ಯ ಭದ್ರತೆಗೆ ಸಿರಿಧಾನ್ಯಗಳಿಗೆ ಹೆಚ್ಚು ಒತ್ತು ನೀಡಬೇಕಿದ್ದು, ಈ ನಿಟ್ಟಿನಲ್ಲಿ ಜನಜಾಗೃತಿ ಕಾರ್ಯ ಸಂಸ್ಥೆ ಮಾಡಲು ಉದ್ದೇಶಿಸಿದೆ ಎಂದು ಕೃಷಿ- ಭಾರತ ರೈತರ ನೆಲೆ(ರೈತಸಂಘ) ಸಂಸ್ಥೆಯ ಪ್ರಮುಖ ಚಂದ್ರಶೇಖರ್ ಬಾಳೆ ಹೇಳಿದರು.
  ನಗರದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಚಿನ ವರ್ಷಗಳಲ್ಲಿ ದೇಶದಲ್ಲಿ ಆಹಾರ ಪದ್ಧತಿಯ ಬದಲಿನಿಂದಾಗಿ ಆರೋಗ್ಯ ಸಂಬಂಧಿ ಸಮಸ್ಯೆಗಳೂ ಹೆಚ್ಚುತ್ತಿವೆ. ಅದರಲ್ಲೂ ಗೋಧಿ ಮತ್ತು ಅಕ್ಕಿಯನ್ನೇ ಹೆಚ್ಚಾಗಿ ಆಹಾರದ ಭಾಗವಾಗಿ ಸೇವಿಸುತ್ತಿರುವುದು ಸಮಸ್ಯೆಯ ತೀವ್ರತೆ ಹೆಚ್ಚಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಆರೋಗ್ಯಕ್ಕೆ ಮಾರಕ ಪರಿಸ್ಥಿತಿ: ದೇಶದಲ್ಲಿ ರೈತರು ಸಂಪ್ರದಾಯಿಕವಾಗಿ ಬೆಳೆಯುತ್ತಿದ್ದ ಜೋಳ, ನವಣೆ, ಸಜ್ಜೆ ಮತ್ತಿತರೆ ಸಿರಿಧಾನ್ಯಗಳನ್ನು ಬೆಳೆಯುವತ್ತ ಈಗ ಆಸಕ್ತಿ ಕುಂದಿದೆ. ಬತ್ತ, ಹತ್ತಿ, ಗೋಧಿ ಬೆಳೆಯುವ ಪ್ರಮಾಣ ಹೆಚ್ಚಳವಾಗಿದೆ. ಹಾಗೆಯೇ ಬಳಕೆಯ ಪ್ರಮಾಣವೂ ಹೆಚ್ಚಿದೆ. ಅದರಿಂದಾಗಿ ಆರೋಗ್ಯಕ್ಕೆ ಮಾರಕ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
  ದೇಶದ ಜನತೆ ತಮ್ಮ ಆದಾಯದ ಶೇ.40 ರಿಂದ 50ರಷ್ಟು ಹಣವನ್ನು ಆರೋಗ್ಯ ಸುಧಾರಣೆಗೆ ವೆಚ್ಚ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಮತ್ತು ಪಟ್ಟಣ, ನಗರ ಪ್ರದೇಶದ ನಿವಾಸಿಗಳಿಗೆ ಆಹಾರ ಪದ್ಧತಿಯಲ್ಲಿ ಬದಲಾವಣೆ ತರಲು ಪೂರಕ ಮಾರ್ಗದರ್ಶನದ ಅವಶ್ಯಕತೆಯಿದೆ ಎಂದು ಹೇಳಿದರು.
ಪೂರಕ ಜಾಗೃತಿಗೆ ಮನವಿ: ಕೃಷಿ ಭಾರತ ರೈತರ ನೆಲೆ(ರೈತಸಂಘ) ಸಂಸ್ಥೆಯ ಮೂಲಕ ಈಗಾಗಲೇ ದೇಶೀ ಕೃಷಿ ಸಂಸ್ಕೃತಿಯ ಮುಂದುವರಿಕೆ ನಿಟ್ಟಿನಲ್ಲಿ ವಿವಿಧ ಮಠಗಳ ಮಠಾಧೀಶರೊಂದಿಗೆ ಚರ್ಚಿಸಲಾಗಿದೆ. ಸುತ್ತೂರು ಮಠದ ಶ್ರೀಗಳನ್ನು ಭೇಟಿ ಮಾಡಿ ಚರ್ಚಿಸಲಾಗಿದೆ. ಇನ್ನುಳಿದ ಮಠಗಳ ಮಠಾಧೀಶರನ್ನೂ ಸಂಪರ್ಕಿಸಿ ದೇಶದಲ್ಲಿ ಸಂಪ್ರದಾಯಿಕವಾಗಿ ಬೆಳೆಯಲಾಗುತ್ತಿದ್ದ ಸಿರಿಧಾನ್ಯಗಳನ್ನು ಬೆಳೆಯಲು ಪೂರಕ ಜಾಗೃತಿಗೆ ಮನವಿ ಮಾಡಲಾಗಿದೆ ಎಂದರು.
ತಜ್ಞರ ಸಮಾವೇಶ: ಈ ನಿಟ್ಟಿನಲ್ಲಿ ಕೃಷಿ ಭಾರತ ರೈತರ ನೆಲೆ(ರೈತಸಂಘ) ಸಂಸ್ಥೆ ಮುಂದಿನ ವರ್ಷದ ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ರಾಜ್ಯದ ಗುಲ್ಬರ್ಗ, ಮೈಸೂರು, ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಸಿರಿಧಾನ್ಯಗಳ ಕುರಿತ ಕೃಷಿಕರ ಹಾಗೂ ತಜ್ಞರ ಸಮಾವೇಶ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
  ಅದೇ ರೀತಿ ರಾಯಚೂರಿನಲ್ಲಿ ಡಿಸೆಂಬರ್ 22 ರಿಂದ 24 ರವರೆಗೆ ಸಿರಿಧಾನ್ಯಗಳಿಂದ ಅಡುಗೆ ತಯಾರಿಕೆಯ ಬಗೆ, ಸಾವಯವ ರೈತರ ಸಂತೆ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಸಿರಿಧಾನ್ಯಗಳ ಪ್ರದರ್ಶನ, ಮಾರಾಟ ಜತೆಗೆ ಅವುಗಳನ್ನು ಬಳಸಿ ಅಡುಗೆ ತಯಾರಿಸುವ ಪದ್ಧತಿ ಮತ್ತು ಪ್ರಯೋಜನಗಳ ಬಗ್ಗೆ ಜನತೆಗೆ ತಿಳಿಹೇಳುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
  ಈ ಸಂದರ್ಭದಲ್ಲಿ ಪ್ರಮುಖರಾದ ರಾಘವೇಂದ್ರ ಕುಷ್ಟಗಿ, ರಾಮನಗೌಡ ಜಾಲಿಬೆಂಚಿ, ಖಾಜಾ ಅಸ್ಲಂ ಪಾಷಾ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement