ಮರಳು ಕಳ್ಳಸಾಗಣೆ: 8 ಟ್ರ್ಯಾಕ್ಟರ್ ಜಪ್ತಿ
ಸಿಂಧನೂರು: ನಗರದ ಹಿರೇಹಳ್ಳದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ನಗರ ಠಾಣೆಯ ಪೊಲೀಸರು ತಹಸೀಲ್ದಾರ್ ವೆಂಕನಗೌಡ ಪಾಟೀಲ್ ನೇತೃತ್ವದಲ್ಲಿ ಹಠಾತ್ ದಾಳಿ ನಡೆಸಿ ಒಟ್ಟು 8 ಟ್ರ್ಯಾಕ್ಟರ್ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಟೆಂಡರ್ ಆಗದೆ ಹಿರೇಹಳ್ಳದಲ್ಲಿ ಮರಳು ಸಾಗಿಸುವುದು ಅಪರಾಧವೆಂದು ತಿಳಿದಿದ್ದರೂ ಟ್ರ್ಯಾಕ್ಟರ್ ಮಾಲೀಕರು ಪೊಲೀಸರು, ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ನಿರಂತರವಾಗಿ ಭಾರೀ ಪ್ರಮಾಣದಲ್ಲಿ ಟ್ರಿಪ್ಗಟ್ಟಲೆ ಉಸುಕು ಸಾಗಣೆ ಮಾಡುತ್ತಿದ್ದಾರೆ. ಈವರೆಗೆ ಮೌನವಾಗಿದ್ದು ಅಧಿಕಾರಿಗಳು ಎಚ್ಚೆತ್ತುಕೊಂಡಂತೆ ಕಂಡುಬಂದಿದೆ.
ಎಲ್ಲ ಟ್ರ್ಯಾಕ್ಟರ್ಗಳನ್ನು ಪೊಲೀಸ್ ಠಾಣೆ ಆವರಣದಲ್ಲಿ ನಿಲ್ಲಿಸಿಕೊಂಡಿದ್ದು, ಸಂಬಂಧಪಟ್ಟ ಟ್ರ್ಯಾಕ್ಟರ್ ಮಾಲೀಕರನ್ನು ಠಾಣೆಗೆ ಕರೆಯಿಸಿ ತಹಸೀಲ್ದಾರ್ ಆದೇಶದ ಮೇರೆಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದರು. ದಾಳಿಯಲ್ಲಿ ಪೊಲೀಸ್ ಸಿಬ್ಬಂದಿ ಜಗದೀಶ, ಸಂಗಮೇಶ, ಬಸವರಾಜ, ಎಎಸ್ಐ ಹುಸೇನಪ್ಪ ಇದ್ದರು.
ಕೋಡಿಹಳ್ಳಿ ಚಂದ್ರಶೇಖರ್ಗೆ ತಕ್ಕಶಾಸ್ತಿ: ಚಾಮರಸ ಎಚ್ಚರಿಕೆ
ರಾಯಚೂರು: ಮೇಲುಕೋಟೆ ಶಾಸಕ ಪುಟ್ಟಣ್ಣಯ್ಯ ಅವರನ್ನು ಟೀಕಿಸುವ ನೈತಿಕ ಹಕ್ಕು ಕೋಡಿಹಳ್ಳಿ ಚಂದ್ರಶೇಖರ್ ಅವರಿಗಿಲ್ಲ. ಅಕ್ರಮವಾಗಿ ಆಸ್ತಿ ಗಳಿಸಿರುವ ಕೋಡಿಹಳ್ಳಿ, ಪ್ರಾಮಾಣಿಕರಾಗಿರುವ ಶಾಸಕ ಪುಟ್ಟಣ್ಣಯ್ಯ ಅವರ ಬಗ್ಗೆ ಹಗುರವಾಗಿ ಮಾತನಾಡಿದಲ್ಲಿ ತಕ್ಕ ಶಾಸ್ತಿ ಮಾಡಲಾಗುತ್ತದೆ.
ಹೀಗೆಂದು ಎಚ್ಚರಿಕೆ ನೀಡಿದ್ದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಲುಕೋಟೆ ಕ್ಷೇತ್ರದಲ್ಲಿ ಪುಟ್ಟಣ್ಣಯ್ಯ ಅವರ ಗೆಲುವಿಗೆ ರೈತ ಸಂಘದ ಕಾರ್ಯಕರ್ತರ ಪರಿಶ್ರಮ ಕಾರಣವೇ ಹೊರತು ಬೇರೊಂದಲ್ಲ. ಕಾಂಗ್ರೆಸ್ ಬಳಿ ಪುಟ್ಟಣ್ಣಯ್ಯ ಎಂದಿಗೂ ಕೈಯೊಡ್ಡಿಲ್ಲ. ಈ ಕುರಿತು ಆರೋಪ ಮಾಡುವ ಹಕ್ಕು ಕೋಡಿಹಳ್ಳಿ ಚಂದ್ರಶೇಖರ್ ಅವರಿಗಿಲ್ಲ ಎಂದು ತಾಕೀತು ಮಾಡಿದರು.
ಚಂದ್ರಶೇಖರ್ ಅವರಿಗೆ ಅರಸೀಕೆರೆಯಲ್ಲಿ ಕೇವಲ 2 ಎಕರೆ ಜಮೀನಿದ್ದು ಅದೂ ಕೂಡಾ ನೀರಾವರಿಯಲ್ಲ. ಆದರೆ ಬೆಂಗಳೂರಿನಲ್ಲಿ ಅಪಾರ ಆಸ್ತಿ, ರು. 18ಲಕ್ಷ ವಾಹನ ಹೊಂದಿರುವ ಕೋಡಿಹಳ್ಳಿಗೆ ಹಣ ಬಂದಿದ್ದಾರೂ ಎಲ್ಲಿಂದ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.
ಅನಕ್ಷರತೆ ನಿವಾರಣೆಗೆ ಯುವಕರ ಸಹಕಾರ ಅವಶ್ಯಕ: ಶರಣಪ್ಪ
ದೇವದುರ್ಗ: ಗ್ರಾಮೀಣ ಭಾಗದಲ್ಲಿ ಅನಕ್ಷರತೆ ಹೋಗಲಾಡಿಸಲು ವಿದ್ಯಾವಂತ ಯುವಶಕ್ತಿಯ ಸಹಕಾರ ಅವಶ್ಯವಾಗಿದೆಂದು ನಾಗಡದಿನ್ನಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ಕೆ. ಶರಣಪ್ಪ ಹೇಳಿದರು.
ಈಚೆಗೆ ತಾಲೂಕಿನ ಮಾದರಿ ಲೋಕ ಶಿಕ್ಷಣ ಕೇಂದ್ರ ನಾಗಡದಿನ್ನಿಯಲ್ಲಿ ಲೋಕ ಶಿಕ್ಷಣ ನಿರ್ದೇಶನಾಲಯ, ರಾಜ್ಯ ಸಂಪನ್ಮೂಲ ಕೇಂದ್ರ ಮೈಸೂರು ರವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಸ್ವಯಂ ಸೇವಕರಿಗೆ ಪ್ರಬಂಧ ಸ್ಪರ್ಧೆ ಹಾಗೂ ಆರೋಗ್ಯವಂತ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಜಿಲ್ಲಾ ಸಾಕ್ಷರತಾ ಕಾರ್ಯಕ್ರಮದ ಸಹಾಯಕ ಯಲ್ಲಪ್ಪ ಜಾಲಿಬೆಂಚಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಬೂದೆಮ್ಮ ಹೆಗ್ಗಡದಿನ್ನಿ, ಗ್ರಾಪಂ ಪಿಡಿಒ ವಿಜಯಕುಮಾರ, ತಾಲೂಕು ಸಂಯೋಜಕ ಮುರಿಗೆಪ್ಪ ಬಳೆ, ಶಿಕ್ಷಕ ಶ್ರೀನಿವಾಸ ಹೆಳವರ, ಶಿವಕುಮಾರ ಹೆಗ್ಗಡದಿನ್ನಿ, ಪ್ರೇರಕ ಕೆ. ಬಂದೇನವಾಜ್ ನಾಗಡದಿನ್ನಿ, ಸವಿತಾ ನಾಯಕ ಸೇರಿ ಅಂಗನವಾಡಿ ಕಾರ್ಯಕರ್ತೆಯರು, ಸಾಕ್ಷರ ಸ್ವಯಂ ಸೇವಕರಿದ್ದರು.
ನಮೋ ಬ್ರಿಗೇಡ್ನಿಂದ ನಾಳೆ ಬೈಕ್ ರ್ಯಾಲಿ
ರಾಯಚೂರು: ನರೇಂದ್ರ ಮೋದಿ ಅವರು ಕೈಗೊಂಡಿರುವ ಅಭಿವೃದ್ಧಿಯ ಬಗ್ಗೆ ಜನತೆಗೆ ತಿಳಿಸಲು ನ.10ರಂದು ನಗರದಲ್ಲಿ ಬೈಕ್ ರ್ಯಾಲಿ ಮತ್ತು ಸಮಾವೇಶ ಆಯೋಜಿಸಲಾಗಿದೆ ಎಂದು ನಮೋ ಬ್ರಿಗೇಡ್ ಸಂಘಟನೆ ಅಧ್ಯಕ್ಷ ರಾಜೇಂದ್ರಕುಮಾರ್ ರವಿ ತಿಳಿಸಿದರು. ಅವರು ನಗರದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆಯೋಜಿಸಿರುವ ನರೇಂದ್ರ ಮೋದಿ ಸಾಧನೆ ಕುರಿತ ಸಮಾವೇಶದಲ್ಲಿ ಕಾರ್ಕಳದ ಆದರ್ಶ ಗೋಖಲೆ ಉಪನ್ಯಾಸ ನೀಡಲಿದ್ದಾರೆ. ಗುಜರಾತ್ನಲ್ಲಿ ನರೇಂದ್ರ ಮೋದಿ ಅವಧಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿಶೇಷ ಉಪನ್ಯಾಸ ಅವರು ನೀಡುವರೆಂದರು. ಇದಕ್ಕೂ ಮೊದಲು ನ.10ರಂದು ಬೆಳಗ್ಗೆ ನಗರದ ಯಾದವ ಸಂಘದ ಮೈದಾನದಿಂದ 500ಕ್ಕೂ ಹೆಚ್ಚಿನ ಬೈಕ್ಗಳಲ್ಲಿ ನರೇಂದ್ರ ಮೋದಿ ಅಭಿಮಾನಿಗಳು ಹಾಗೂ ಬ್ರಿಗೇಡ್ನ ಕಾರ್ಯಕರ್ತರು ನಗರದ ಪ್ರಮುಖ ರಸ್ತೆಗಳ ಮೂಲಕ ಬೈಕ್ ರ್ಯಾಲಿಯಲ್ಲಿ ರಂಗಮಂದಿರದ ಸಮಾವೇಶ ಸ್ಥಳಕ್ಕೆ ಆಗಮಿಸಲಿದ್ದಾರೆಂದರು. ಸಂಘಟನೆ ಕೇವಲ ನಗರ ಪ್ರದೇಶವಷ್ಟೇ ಅಲ್ಲ ಗ್ರಾಮೀಣಪ್ರದೇಶದಲ್ಲಿಯೂ ಮೋದಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಚುನಾವಣೆಯಲ್ಲಿ ಮೋದಿ ಪರ ಬೆಂಬಲ ಯಾಚಿಸುವುದಾಗಿ ತಿಳಿಸಿದರು. ಪ್ರಮುಖರಿದ್ದರು.
ರಾಜಶೇಖರ್ಗೆ ಪಿಎಚ್ಡಿ ಪದವಿ
ರಾಯಚೂರು: ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರಾಜಶೇಖರ್ ಅವರಿಗೆ ಗುಲ್ಬರ್ಗಾ ವಿವಿ ಯಿಂದ ಪಿಎಚ್ಡಿ ಪದವಿ ಲಭಿಸಿದೆ. ರಾಜಶೇಖರ್ 'ಅನಾಲಿಟಿಕಲ್ ಸ್ಟಡಿ ಆಫ್ ದಿ ಅಪ್ಲೈಡ್ ಟ್ರಾನ್ಸವರ್ಸ್ ಮ್ಯಾಗ್ನೆಟಿಕ್ ಆನ್ ದಿ ಕ್ಯಾರಿಕ್ಟರಿಸ್ಟಿಕ್ ಆಫ್ ಸ್ಕ್ವೀಜ್ ಫಿಲ್ಮ್ ಬಿಯರಿಂಗ್ಸ್' ವಿಷಯದ ಕುರಿತು ಪ್ರಬಂಧ ಮಂಡಿಸಿದ್ದರು. ವಿವಿ ಪ್ರಾಧ್ಯಾಪಕ ಡಾ. ಎನ್.ಬಿ.ನಡುವಿನಮನಿ ಮಾರ್ಗದರ್ಶನ ಪಡೆದಿದ್ದರು.
ಬೀಡಾಡಿ ದನ ಹಾವಳಿ: ಎಚ್ಚರಿಕೆ
ರಾಯಚೂರು: ನಗರದ ಸಾರ್ವಜನಿಕ ರಸ್ತೆಯಲ್ಲಿ ತಿರುಗುವ ಬಿಡಾಡಿ ದನಗಳಿಂದಾಗಿ ರಸ್ತೆ ಸಂಚಾರಕ್ಕೆ ತೊಂದರೆಯಾಗಿದ್ದು, ಕೂಡಲೇ ಬಿಡಾಡಿ ದನಗಳ ಮಾಲಿಕರು ದನಗಳನ್ನು ಅಲ್ಲಿಂದ ತೆರವುಗೊಳಿಸುವಂತೆ ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ದನಗಳನ್ನು ಮಾಲಿಕರು ತೆರವುಗೊಳಿಸಿ ಕಟ್ಟಿ ಹಾಕದಿದ್ದಲ್ಲಿ ಅಂಥ ದನಗಳು ರಸ್ತೆಯಲ್ಲಿ ಕಂಡುಬಂದರೆ ಅವುಗಳನ್ನು ಗೋಶಾಲೆಗೆ ಸಾಗಿಸಲಾಗುತ್ತದೆ. ಅಂಥ ದನಗಳ ಮಾಲೀಕರ ವಿರುದ್ಧ ಮೋಟಾರು ವಾಹನ ಕಾಯ್ದೆ ಅಡಿ ಕ್ರಮ ಕೈಕೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಕರ ಕಚೇರಿ ತಿಳಿಸಿದೆ.
ಸಭೆ ಮುಂದೂಡಿಕೆ
ರಾಯಚೂರು: ಇಲ್ಲಿನ ಜಿಲ್ಲಾ ಪಂಚಾಯಿತಿ ಮಾಸಿಕ ಕೆಡಿಪಿ ಸಭೆಯನ್ನು ಮುಂದೂಡಲಾಗಿದೆ ಎಂದು ಜಿಪಂ ಪ್ರಕಟಣೆ ತಿಳಿಸಿದೆ. ನ.11ರಂದು ನಡೆಯಬೇಕಿದ್ದ ಮಾಸಿಕ ಕೆಡಿಪಿ ಸಭೆ ಮುಂದೂಡಲಾಗಿದೆ ಎಂದು ಜಿಪಂ ಸಿಇಒ ಕಚೇರಿ ತಿಳಿಸಿದೆ.
ನಾಗರಿಕ ಬಂದೂಕು
ತರಬೇತಿಗೆ ಅರ್ಜಿ
ರಾಯಚೂರು: ನಗರದ ನಾಗರಿಕರಿಗೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ನಾಗರಿಕ ಬಂದೂಕು ತರಬೇತಿ ಶಿಬಿರ ಆಯೋಜಿಸಿದ್ದು ಆಸಕ್ತರು ಅರ್ಜಿ ಸಲ್ಲಿಸಲು ಕೋರಲಾಗಿದೆ.
ತರಬೇತಿ ಪಡೆಯಲು ಆಸಕ್ತರು ಅರ್ಜಿಗಳನ್ನು ಉಪಾಧೀಕ್ಷಕರು, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ರಾಯಚೂರು ಇವರಿಂದ ನ.11ರಿಂದ 20ರವರೆಗೆ ಪಡೆಯಬೇಕು. ನಿಗದಿತ ಅರ್ಜಿಗಳನ್ನು ಭರ್ತಿ ಮಾಡಿ ನ.23ರೊಳಗೆ ಅದೇ ಕಾರ್ಯಾಲಯಕ್ಕೆ ಸಲ್ಲಿಸ ಬೇಕು. ಮೊದಲು ಬಂದವರಿಗೆ ತರಬೇತಿಗೆ ಮೊದಲಾದ್ಯತೆ ನೀಡಲಾಗುತ್ತದೆ. ಅರ್ಜಿಗಳನ್ನು ಮನ್ನಿಸುವ ಅಥವಾ ತಿರಸ್ಕರಿಸುವ ಅಧಿಕಾರ ಜಿಲ್ಲಾ ಪೊಲೀಸ್ ಅಧೀಕ್ಷಕರಿಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಬೀದರ್ ಡಿಸಿ ವಿರುದ್ಧ ಕ್ರಮಕ್ಕೆ ಒತ್ತಾಯ
ಸಿಂಧನೂರು: ದೀಪಾವಳಿಯಂದು ಬೀದರ ಜಿಲ್ಲಾಧಿಕಾರಿ ಡಾ. ಪಿ.ಸಿ. ಜಾಫರ್ ಹಿಂದೂಗಳ ಆರಾಧ್ಯ ದೈವ ರಾಮಚಂದ್ರನನ್ನು ಕೆಟ್ಟ ಶಬ್ದಗಳಲ್ಲಿ ಫೇಸ್ಬುಕ್ ಮೂಲಕ ಅಪಮಾನಿಸಿದ್ದಾರೆ. ಇದು ಖಂಡನೀಯ.
ಇಂತಹ ಹೇಳಿಕೆಯನ್ನು ನೀಡಿರುವ ಜಿಲ್ಲಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಜನಜಾಗೃತಿ ಸಮಿತಿಯು ಸಮನ್ವಯಕ ಮಧ್ವರಾಜ್ ಆಚಾರ್ಯ ಒತ್ತಾಯಿಸಿದರು.
ಭಾರತದ ದಂಡಸಂಹಿತೆ ಪ್ರಕಾರ ಧಾರ್ಮಿಕ ಭಾವನೆಯನ್ನು ನೋಯಿಸುವುದು ಅಪರಾಧವಾಗಿದೆ. ಸರ್ಕಾರದ ಉನ್ನತ ಹುದ್ದೆಯಲ್ಲಿರುವ ಡಾ.ಜಾಫರ್ ಗಂಭೀರ ಅಪರಾಧವನನ್ನು ಎಸಗಿದ್ದಾರೆ. ಸರ್ಕಾರ ತಕ್ಷಣ ಜನರ ಧಾರ್ಮಿಕ ಭಾವನೆಯನ್ನು ನೋಯಿಸಿದ್ದಾಗಿ ಡಾ.ಪಿ.ಸಿ. ಜಾಫರ್ ಇವರನ್ನು ಅಮಾನತುಗೋಳಿಸಿಬೇಕೆಂದು ಸಮಿತಿಯ ಅವಿನಾಶ ದೇಶಪಾಂಡೆ, ಕೆ.ಬಾಳಪ್ಪ, ವೆಂಕಟೇಶ, ಜಿ.ಬಿ. ಅಮರೇಗೌಡ ಸಿಂಗಾಪೂರ, ವೆಂಕಟೇಶ ಕಟ್ಟಿಮನಿ ಒತ್ತಾಯಿಸಿದ್ದಾರೆ.
ಪಾಶ್ಚಾತ್ಯ ಸಂಸ್ಕೃತಿ ಪ್ರೀತಿ ಬೇಡ: ಗುರಮ್ಮ
ಲಿಂಗಸ್ಗೂರು: ವಿಶ್ವದಲ್ಲಿ ಶ್ರೇಷ್ಠತೆ ಮೆರೆದ ಭಾರತದ ಸಂಸ್ಕೃತಿ, ವೇಷ ಭೂಷಣ ಮರೆತು ಇಂದಿನ ಜನತೆ ಪಾಶ್ಚಿಮಾತ್ಯ ರಾಷ್ಟ್ರಗಳ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆಂದು ಎಂದು ಜನಪದ ಕಲಾವಿದೆ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತೆ ಗುರಮ್ಮ ಸಂಕಿನಮಠ ವಿಷಾಧ ವ್ಯಕ್ತಪಡಿಸಿದರು. ಪಟ್ಟಣದ ವಿಜಯ ಮಹಾಂತೇಶ್ವರ ಶಾಖಾನುಭವ ಮಂಟಪದಲ್ಲಿ ಲಿಂ. ಚಿತ್ತರಗಿ ವಿಜಯ ಮಹಾಂತ ಶಿವಯೋಗಿಗಳ 102 ನೇ ಪುಣ್ಯ ಸಂಸ್ಮರಣೋತ್ಸವ, ಶರಣ ಸಂಸ್ಕೃತಿ ಮಹೋತ್ಸವ, ವಿಶ್ವ ಬಸವ ಧರ್ಮ ಸಮಾವೇಶದ ಅಂಗವಾಗಿ ನಡೆದ ಮಹಿಳಾ ಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ಸ್ತ್ರೀಗೆ ಗೌರವ ಸ್ಥಾನ ನೀಡಲಾಗಿದ್ದು, ಕಳೆದ ಹತ್ತು ವರ್ಷಗಳಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯಾಗುತ್ತಿದ್ದು, ಇದಕ್ಕೆ ಹೆಣ್ಣು ಭ್ರೂಣ ಹತ್ಯೆಯಂತಹ ಕೃತ್ಯ ಕಾರಣವಾಗಿದೆ. ಅಲ್ಲದೆ ಮಹಿಳೆಯರ ಆತ್ಮಹತ್ಯೆ ಪಿಡುಗು ಜೀವಂತವಾಗಿದೆ. ಇದನ್ನು ಹೋಗಲಾಡಿಸಲು ಮಹಿಳೆಯರು ತಮ್ಮ ಸ್ವಂತ ಕಾಲ ಮೇಲೆ ನಿಂತು ಸ್ತ್ರೀ ಶಕ್ತಿ ಪ್ರಬಲವಾಗಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಇಲಕಲ್ ಚತ್ತರಗಿ ಸಂಸ್ಥಾನ ಮಠದ ಡಾ. ವಿಜಯಮಹಾಂತ ಶ್ರೀ, ವಿರಕ್ತ ಪಾಂಡೋಮಟ್ಟಿ ಗುರುಬಸವ ಶ್ರೀ, ಅಭಿನವ ಗುರುಗಜದಂಡ ಶ್ರೀ, ಶಿರೂರ ಬಸವಲಿಂಗ ಶ್ರೀ, ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ, ಮುಖಂಡ ನಾಗಪ್ಪ ವಜ್ಜಲ್, ಅಕ್ಕನ ಬಳಗದ ಅಧ್ಯಕ್ಷೆ ಚೆನ್ನಮ್ಮ ಸಕ್ರಿ ಇದ್ದರು.
ಮೊಹರಂ: ಶಾಂತಿ ಸಭೆ
ದೇವದುರ್ಗ: ತಾಲೂಕಿನ ನಾಗಡದಿನ್ನಿ ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಮೊಹರಂ ಹಬ್ಬದ ಅಂಗವಾಗಿ ಈಚೆಗೆ ಶಾಂತಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಗಬ್ಬೂರು ಠಾಣೆಯ ಪಿಎಸ್ಐ ಅಮರೇಶ ಹುಬ್ಬಳ್ಳಿ ಮಾತನಾಡಿ, ಗ್ರಾಮದ ಸರ್ವ ಸಮುದಾಯದ ಮುಖಂಡರು ಮೊಹರಂ ಆಚರಣೆಯಲ್ಲಿ ಪಾಲ್ಗೊಂಡು ಶಾಂತರೀತಿಯಿಂದ ಆಚರಿಸುವಂತೆ ಮನವಿ ಮಾಡಿದರು. ಗಬ್ಬೂರು ಠಾಣೆಯ ಎಎಸ್ಐ ಹಮೀದ್, ಪೊಲೀಸ್ ಸಿಬ್ಬಂದಿ ರಾಜಶೇಖರ್ ಸೇರಿ ಸರ್ವಧರ್ಮಗಳ ಪ್ರಮುಖರು ಹಾಗೂ ಗ್ರಾಮಸ್ಥರು ಇದ್ದರು.
ಇಂದು ಪುಣ್ಯಾರಾಧನೆ
ದೇವದುರ್ಗ: ತಾಲೂಕಿನ ಗಬ್ಬೂರು ಗ್ರಾಮದಲ್ಲಿ 9ರಂದು ಲಿಂ.ಗುರುವಿನ ನಾಗಯ್ಯತಾತನವರ 13ನೇ ಪುಣ್ಯಾರಾಧನೆ, ನೂತನ ಮೂರ್ತಿ ಪ್ರತಿಷ್ಠಾಪನೆ ಸಮಾರಂಭ ಆಯೋಜಿಸಲಾಗಿದೆ. ಅಂದು ಗ್ರಾಮದ ನಾಗಯ್ಯತಾತನವರ ಪ್ರೌಢಶಾಲೆ ಆವರಣದಲ್ಲಿ ಮಧ್ಯಾಹ್ನ 1.30ಕ್ಕೆ ಆಯೋಜಿಸಿರುವ ಸಮಾರಂಭವನ್ನು ಶಾಸಕ ವೆಂಕಟೇಶ ನಾಯಕ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆ ಮಾಜಿ ಶಾಸಕ ಎನ್.ಎಸ್. ಬೋಸರಾಜು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾನವಿ ಶಾಸಕ ಹಂಪಯ್ಯ ನಾಯಕ, ಲಿಂಗಸ್ಗೂರು ಶಾಸಕ ಮಾನಪ್ಪ ವಜ್ಜಲ್, ಜಿಪಂ ಉಪಾಧ್ಯಕ್ಷ ಶರಣಪ್ಪ ಕಲ್ಮಲಾ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಂ.ಈರಣ್ಣ ಸೇರಿ ಅನೇಕರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.