ರಸ್ತೆಯಲ್ಲಿ ತಗ್ಗು-ದುರಸ್ತಿಗೆ ಗ್ರಾಮಸ್ಥರ ಒತ್ತಾಯ
ದೇವದುರ್ಗ: ತಾಲೂಕಿನ ಜಾಲಹಳ್ಳಿಯಿಂದ ಮ್ಯಾಕಲ್ ದೊಡ್ಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಅಲ್ಲಲ್ಲಿ ತಗ್ಗುಗಳಾಗಿದ್ದು, ರಸ್ತೆ ದುರಸ್ತಿಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಜಾಲಹಳ್ಳಿ ಹೋಬಳಿಯ ಜಾಲಹಳ್ಳಿಯಿಂದ ಮ್ಯಾಕಲ್ ದೊಡ್ಡಿ ಗ್ರಾಮದ ಸಂಪರ್ಕದ ಮುಖ್ಯ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳಾಗಿದ್ದು,ವರ್ಷ ಕಳೆದರೂ ಆಡಳಿತ ಅವುಗಳನ್ನು ಮುಚ್ಚಲು ನಿರ್ಲಕ್ಷ್ಯ ತಾಳಿದೆ. ಅದರಿಂದಾಗಿ ರಸ್ತೆಯಲ್ಲಿ ಸಂಚರಿಸುವವರಿಗೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಗ್ರಾಮದ ಸಂಪರ್ಕ ರಸ್ತೆ ನಿರ್ಮಿಸಿದ್ದು, ರಸ್ತೆಯ ಸೇತುವೆಯಿರುವ ಸ್ಥಳದಲ್ಲಿ ಕಳಪೆ ಕಾಮಗಾರಿಯಿಂದಾಗಿ ಸೇತುವೆ ಮೇಲಿನ ರಸ್ತೆಯಲ್ಲಿ ಮಣ್ಣು ಕುಸಿದು ತಗ್ಗುಗಳಾಗಿವೆ. ಇದರಿಂದಾಗಿ ರಾತ್ರಿ ವೇಳೆ ಗ್ರಾಮಕ್ಕೆ ತೆರಳುವವರು ಸೇತುವೆ ಮೇಲಿನ ರಸ್ತೆಯಲ್ಲಿ ತಗ್ಗಿನಿಂದಾಗಿ ಅನೇಕ ಸಂದರ್ಭ ಬಿದ್ದು ಗಾಯಗೊಂಡಿರುವ ಘಟನೆ ನಡೆದಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡೂ ಬದಿಗೆ ಮುಳ್ಳಿನ ಗಿಡಕಂಟೆಗಳು ಬೆಳೆದಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ. ಕಾರಣ ಕೂಡಲೇ ರಸ್ತೆಯಲ್ಲಿನ ತಗ್ಗು ಮುಚ್ಚುವ ನಿಟ್ಟಿನಲ್ಲಿ ದುರಸ್ತಿ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.