ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವಾರ್ಡುಗಳ ಮೂಲಸೌಕರ್ಯ ಅಭಿವೃದ್ಧಿಗೆ ನಿರ್ಧಾರ

Vishwanath S
Updated On : 9 Nov 2013, 12:11 pm

ಕನ್ನಡಪ್ರಭ ವಾರ್ತೆ , ಲಿಂಗಸ್ಗೂರು , ನ.8
ಪಟ್ಟಣದ ಪುರಸಭೆ ವ್ಯಾಪ್ತಿಯ ವಿವಿಧ ವಾರ್ಡುಗಳಲ್ಲಿ ಕುಡಿವ ನೀರು, ರಸ್ತೆ, ಚರಂಡಿ, ಶೌಚಾಲಯ ಸೇರಿದಂತೆ ಮೂಲಸೌಕರ್ಯ ಕಲ್ಪಿಸುವ ಮಹತ್ವದ ನಿರ್ಧಾರಗಳನ್ನು ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಯಿತು.
ಪುರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ಗುರುವಾರ ಪುರಸಭೆ ಅಧ್ಯಕ್ಷ ಕುಮಾರಸ್ವಾಮಿ ಸಾಲ್ಮನಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪುರಸಭೆ ವ್ಯಾಪ್ತಿಯ ಎಲ್ಲ ವಾರ್ಡುಗಳಲ್ಲಿ 24 ಗಂಟೆ ಕುಡಿವ ನೀರು ಪೂರೈಸಲು ಕೃಷ್ಣಾ ನದಿಯಿಂದ ಪ್ರತ್ಯೇಕ ಪೈಪ್‌ಲೈನ್ ಅಳವಡಿಸಲು ಕ್ರೀಯಾ ಯೋಜನೆ ಸಿದ್ಧಪಡಿಸುವುದು ಹಾಗೂ ವಿವಿಧ ವಾರ್ಡುಗಳಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸುವುದು. ಅಂಗನವಾಡಿ ಕಟ್ಟಡ ನಿರ್ಮಿಸುವ ಕುರಿತು ಸಭೆಯಲ್ಲಿ ನಿರ್ಧರಿಸಲಾಯಿತು.
ಸಹಾಯಧನ ಒದಗಿಸುವ ಅಭಿಪ್ರಾಯ: ಪುರಸಭೆ ವ್ಯಾಪ್ತಿಯ ಬಹುತೇಕ ವಾರ್ಡುಗಳಲ್ಲಿ ಶೌಚಾಲಯ ನಿರ್ಮಿಸಲು ಬಡ ಕುಟುಂಬಗಳಿಗೆ ಸಹಾಯಧನ ಒದಗಿಸುವ ಕುರಿತು ಅಭಿಪ್ರಾಯ ಮಂಡಿಸಲಾಯಿತು. ಕೆಲ ಸದಸ್ಯರು ಹಲವು ವರ್ಷಗಳಿಂದ ಮನೆಯ ಕರ ಕಟ್ಟದೆ ಬಾಕಿ ಉಳಿಸಲಾಗಿದೆ. ಇಂತಹ ಕುಟುಂಬಗಳನ್ನು ಗುರುತಿಸಿ ಮನೆಯ ಕರ ಕಟ್ಟಿದ ಫಲಾನುಭವಿಗಳಿಗೆ ಸಹಾಯಧನ ಒದಗಿಸಲು ತಿಳಿಸುತ್ತಿದ್ದಂತೆ ಎಂ.ಡಿ.ರಫೀ, ಫಯಾಜ್ ಅಹ್ಮದ್, ಅನೀಸ್ ಪಾಶಾ ಸೇರಿದಂತೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ತಕ್ಷಣ ಮನೆಯ ಕರ ಕಟ್ಟಬೇಕೆಂದರೆ ಬಡ ಫಲಾನುಭವಿಗಳಿಗೆ ತೊಂದರೆಯಾಗುತ್ತದೆ. ಮೊದಲು ಶೌಚಾಲಯ ನಿರ್ಮಿಸಲು ಸಹಾಯಧನ ನೀಡಬೇಕೆಂದು ಒತ್ತಾಯಿಸಿದರು. ಈ ಸಮಯದಲ್ಲಿ ಸದಸ್ಯರ ಮಧ್ಯೆ ಕೆಲವೊತ್ತು ಮಾತಿನ ಚಕಮಕಿ ನಡೆಯಿತು.
ಸ್ಥಳೀಯ ಸಂಸ್ಥೆಯಿಂದ ಒಟ್ಟು 3 ಕೋಟಿ: ಕೇಂದ್ರ ಸರ್ಕಾರದ ಯೋಜನೆಯಾದ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಮೂಲಸೌಕರ್ಯಗಳ ಅಭಿವೃದ್ಧಿ (ಯುಐಡಿಎಸ್‌ಎನ್‌ಎಂಟಿ) ಯೋಜನೆಯಡಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಈಗಾಗಲೇ 30 ಕೋಟಿ ವೆಚ್ಚದ ಕ್ರಿಯಾ ಯೋಜನೆ ಸಲ್ಲಿಸಲಾಗಿದ್ದು, ಯೋಜನೆಗೆ ಕೇಂದ್ರ ಸರ್ಕಾರ ಶೇ.80, ರಾಜ್ಯ ಸರ್ಕಾರ ಶೇ.10 ಹಾಗೂ ಸ್ಥಳೀಯ ಸಂಸ್ಥೆ ಶೇ.10 ರಷ್ಟು ಅನುದಾನ ನೀಡಲಾಗುತ್ತದೆ. ಯೋಜನೆ ಕಾರ್ಯರೂಪಕ್ಕೆ ಬಂದರೆ ಸ್ಥಳೀಯ ಸಂಸ್ಥೆಯಿಂದ ಒಟ್ಟು 3 ಕೋಟಿ ನೀಡಬೇಕಾಗುತ್ತದೆ. ಕಾರಣ ಪುರಸಭೆಯಿಂದ 3 ಕೋಟಿ ಸಹಾಯಧನ ನೀಡಿದರೆ ಸರ್ಕಾರ ಅನುದಾನ ಮಂಜೂರು ಮಾಡಲಿದೆ ಎಂದು ಸಭೆಗೆ ಮುಖ್ಯಾಧಿಕಾರಿ ಈರಣ್ಣ ಬಿರಾದಾರ ವಿವರಿಸಿದರು. ಇದಕ್ಕೆ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.
35 ಲಕ್ಷ ವೆಚ್ಚದ ಉದ್ಯಾನವನ: ಪಟ್ಟಣದ ಬಿಲ್ಲಮರಾಜನ ಕೆರೆ ದಂಡೆಯ ಒಳಾಂಗಣ ಕ್ರೀಡಾಂಗಣದ ಆವರಣದಲ್ಲಿ 35 ಲಕ್ಷ ವೆಚ್ಚದ ಉದ್ಯಾನವನ ನಿರ್ಮಿಸಲು ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು. ವಿವಿಧ ವಾರ್ಡುಗಳಲ್ಲಿ ಮರಮ್ ಹಾಕುವುದು, ಜಂಗಲ್ ಕಟಿಂಗ್, ಚರಂಡಿ ದುರಸ್ತಿ ಸೇರಿದಂತೆ ಇನ್ನಿತರೆ ಕಾಮಗಾರಿ ಕೈಗೊಳ್ಳುವುದು. ಹೊಸದಾಗಿ 6 ಬೋರ್‌ವೆಲ್ ಕೊರೆಯುವ ಕುರಿತು ಸಭೆಯಲ್ಲಿ ನಿರ್ಧರಿಸಲಾಯಿತು. ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಯಾದ ನಿವೇಶನಗಳು ಮೂರು ತಿಂಗಳೊಳಗೆ ಮುಟೇಶನ್ (ವರ್ಗಾವಣೆ) ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ನಿವೇಶನ ಬೆಲೆಗೆ ಶೇ.1ರಷ್ಟು ತೆರಿಗೆ ದಂಡ ರೂಪದಲ್ಲಿ ಸಂಬಂಧಿಸಿದ ನಿವೇಶನ ಮಾಲೀಕರು ಪುರಸಭೆಗೆ ಕಟ್ಟಬೇಕಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಈರಣ್ಣ ಬಿರಾದಾರ ತಿಳಿಸಿದರು. ಸಭೆಯಲ್ಲಿ ಸ್ಥಾಯಿ ಸಮಿತಿ ರಚನೆಗೆ ಒಂಭತ್ತು ಸದಸ್ಯರ ಹೆಸರನ್ನು ಸೂಚಿಸುವ ಮೂಲಕ ಸಮಿತಿ ಅಧ್ಯಕ್ಷರ ಆಯ್ಕೆಗೆ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ಹಾಗೂ ಮಾರ್ಚ್‌ನಿಂದ ನವೆಂಬರ್ 2013 ರವರೆಗಿನ ಜಮಾ ಖರ್ಚುಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಪುರಸಭೆ ಅಧ್ಯಕ್ಷ ಕುಮಾರಸ್ವಾಮಿ ಸಾಲ್ಮನಿ, ಉಪಾಧ್ಯಕ್ಷೆ ಛೋಟಿಮಾ, ಮುಖ್ಯಾಧಿಕಾರಿ ಈರಣ್ಣ ಬಿರಾದಾರ, ಸದಸ್ಯರಾದ ಎಂ.ಡಿ.ರಫೀ, ಫಯಾಜ್ ಅಹ್ಮದ್, ಅನೀಸ ಪಾಶಾ, ಶಿವಪ್ರಸಾದ, ರುದ್ರಪ್ಪ ಬ್ಯಾಗಿ, ಬಸವರಾಜ ಯತಗಲ್, ಬಾಬಾ ಖಾಜಿ, ಗುಂಡುರಾವ್ ದೇಸಾಯಿ, ರವಿಕುಮಾರ್, ಶರಣಗೌಡ, ಬಾಬುರೆಡ್ಡಿ, ಅನುಬೇಗಂ, ವಿನಯಕುಮಾರ್, ಪಾರ್ವತಿ ಬಾಳೆಗೌಡ, ಲಕ್ಷ್ಮವ್ವ, ಜರೀನಾ ಬೇಗಂ, ಗದ್ದೆಮ್ಮ ಸೇರಿದಂತೆ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement