ಬಳ್ಳಾರಿ ಮಾದರಿ ಗಣಿ ಸರ್ವೇ: ಯೋಗೇಶ
ಮುದಗಲ್: ರಾಜ್ಯದ ಕೇಂದ್ರ ಬಿಂದುವಾದ ಬಳ್ಳಾರಿ ಅಕ್ರಮ ಗಣಿಗಾರಿಕೆ ಪತ್ತೆ ಹಚ್ಚಿದ ಸರ್ವೇ ಕಾರ್ಯವನ್ನು ಅಕ್ರಮ ಗಣಿಗಾರಿಕೆ ಪತ್ತೆ ಹಚ್ಚುವದಕ್ಕೆ ಬಳ್ಳಾರಿ ಮಾದರಿಯನ್ನೇ ಅನುಸರಿಸಲಾಗುತ್ತಿದೆ ಎಂದು ಅಕ್ರಮ ಗಣಿಗಾರಿಕೆ ಸಮಿತಿ ತಂಡದ ಮುಖ್ಯಸ್ಥ ಹಾಗೂ ಲಿಂಗಸ್ಗೂರು ಸಹಾಯಕ ಆಯುಕ್ತ ಟಿ. ಯೋಗೇಶ ಹೇಳಿದರು.
ಅವರು ಪಟ್ಟಣದ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ಪತ್ರಿಕೆಯೊಂದಿಗೆ ಮಾತನಾಡಿ, ಮಾನ್ಯ ಜಿಲ್ಲಾಧಿಕಾರಿಗಳು ಅಕ್ರಮ ಗಣಿಗಾರಿಕೆ ಪತ್ತೆ ಹಚ್ಚುವುದಕ್ಕಾಗಿ ಸರಕಾರಕ್ಕೆ ವರದಿ ಸಲ್ಲಿಸಲು ಸಮಿತಿಯನ್ನು ರಚಿಸಿ ಆ ತಂಡದ ಮುಖ್ಯಸ್ಥನನ್ನಾಗಿ ಸಹಾಯಕ ಆಯುಕ್ತರನ್ನು ನೇಮಿಸಿದ್ದಾರೆ. ತನಿಖಾ ತಂಡದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಸರ್ವೇ, ಪರಿಸರ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳನ್ನು ನೇಮಿಸಿದ್ದಾರೆ. ಈಗಾಗಲೇ ತನಿಖಾ ತಂಡದ ಮುಖ್ಯಸ್ಥನಾಗಿ ತಂಡದ ಇತರ ಸದಸ್ಯರ ಸಭೆ ಕರೆದು ಅವರು ಮಾಡಬೇಕಾದ ಕರ್ತವ್ಯವನ್ನು ನಿರ್ವಹಿಸಲು ಸೂಚಿಸಲಾಗಿದೆ.
ಗಣಿ ಮಾಲೀಕರು ಸರ್ಕಾರದಿಂದ ಪಡೆದ ಪರವಾನಿಗೆ ಪ್ರದೇಶಕ್ಕಿಂತ ಹೆಚ್ಚು ಬಳಸುತ್ತಿರುವದು ಮೇಲ್ನೋಟಕ್ಕೆ ಕಂಡು ಬಂದರೂ ಕೂಡ ವರದಿಯಲ್ಲಿ ನಿರ್ದಾಕ್ಷಿಣ್ಯವಾಗಿ ನಕಾಶೆ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವದು. ಸರಕಾರ ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನ, ಸೂಚನೆ ಮೇರೆಗೆ ತಪ್ಪಿತಸ್ಥರು ಶಿಕ್ಷೆಗೆ ಗುರಿಯಾಗುವುದಂತೂ ತಪ್ಪಿದ್ದಲ್ಲ ಎಂದು ಹೇಳಿದರು.