ವಿದ್ಯಾರ್ಥಿನಿ ಶ್ರುತಿಗೆ ರಾಜ್ಯಪಾಲರಿಂದ ಎನ್ಎಸ್ಎಸ್ ರಾಜ್ಯ ಪ್ರಶಸ್ತಿ ಪ್ರದಾನ
ಸಿಂಧನೂರು: ನಗರದ ದುದ್ದುಪುಡಿ ಶಿಕ್ಷಣ ಸಂಸ್ಥೆಯಲ್ಲಿ 1ನೇ ತರಗತಿಯಿಂದ ವಿದ್ಯಾಭ್ಯಾಸ ಮಾಡಿ ಪಿಯುಸಿಯಿಂದ ಎನ್ಎಸ್ಎಸ್ ಶಿಬಿರದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದ ತಾಲೂಕಿನ ಬೂತಲದಿನ್ನಿ ಗ್ರಾಮದ ಶ್ರುತಿ ತಮ್ಮಿನೀಡಿ ಎಂಬ ವಿದ್ಯಾರ್ಥಿನಿಗೆ ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯಪ್ರಶಸ್ತಿ ಲಭಿಸಿದೆ.
ಸದ್ಯ ದುದ್ದುಪುಡಿ ಮಹಾವಿದ್ಯಾಲಯದಲ್ಲಿ ಅಂತಿಮ ವರ್ಷದ ಬಿಎಸ್ಸಿ ಪದವಿ ವ್ಯಾಸಂಗ ಮಾಡುತ್ತಿರುವ ಶ್ರುತಿ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸಲ್ಲಿಸಿದ ಉತ್ತಮ ಸೇವೆಗಾಗಿ ಬೆಂಗಳೂರಿನಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಈಚೆಗೆ ರಾಜ್ಯ ಪ್ರಶಸ್ತಿ ಹಾಗೂ 5000 ಗೌರವ ನೀಡಿ ಪುರಸ್ಕರಿಸಿದರು. ವಿದ್ಯಾರ್ಥಿನಿಯ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ರಾಮಕೃಷ್ಣಮೂರ್ತಿ, ಕಾರ್ಯದರ್ಶಿ ಆರ್.ಸಿ. ಪಾಟೀಲ್ ಅಭಿನಂದಿಸಿದ್ದಾರೆ.
ಇಂದು ಉಪನ್ಯಾಸ
ರಾಯಚೂರು: ನಗರದಲ್ಲಿ ನ.10ರಂದು ಜನಸಂಗ್ರಾಮ ಪರಿಷತ್ತಿನಿಂದ 371ನೇ ಕಲಂ (ಜೆ) ಮತ್ತು ಅನುಷ್ಠಾನ ಕುರಿತು ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 10.30ಕ್ಕೆ ನಗರದ ಟಿಪ್ಪು ಸುಲ್ತಾನ್ ರಸ್ತೆಯ ಶಮೀಮ್ ಫಂಕ್ಷನ್ ಹಾಲ್ನಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಿಷತ್ತಿನ ರಾಜ್ಯ ಸಂಚಾಲಕ ರಾಘವೇಂದ್ರ ಕುಷ್ಟಗಿ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ವೈಜನಾಥ ಪಾಟೀಲ್ ಪಾಲ್ಗೊಳ್ಳಲಿದ್ದಾರೆ. ಹೈ.ಕ. ಹೋರಾಟ ಸಮಿತಿ ಉಪಾಧ್ಯಕ್ಷ ಡಾ. ರಜಾಕ್ ಉಸ್ತಾದ್ ವಿಶೇಷ ಉಪನ್ಯಾಸ ನೀಡಲಿದ್ದಾರೆಂದು ಪರಿಷತ್ತಿನ ಪ್ರಕಟಣೆ ತಿಳಿಸಿದೆ.
ನಾಳೆ ಜಿಲ್ಲೆಗೆ
ಸಚಿವ ಖಾದರ್
ರಾಯಚೂರು: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು. ಟಿ. ಖಾದರ್ ಅವರು ನ.11 ರಂದು ತಮ್ಮ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಗರದಲ್ಲಿ ನಡೆಸಲಿದ್ದಾರೆ. ನ.11ರಂದು ಯಾದಗಿರಿಯಿಂದ ನಗರಕ್ಕೆ ರಾತ್ರಿ 7.30ಕ್ಕೆ ಆಗಮಿಸಿ ರಾತ್ರಿ 8ಕ್ಕೆ ನಗರದ ಆರೋಗ್ಯ ಇಲಾಖೆಯ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಸಭೆ ನಡೆಸಿ ನಂತರ ನ.12ರಂದು ಬೆಳಗ್ಗೆ 6ಕ್ಕೆ ಬಿಜಾಪುರಕ್ಕೆ ಪ್ರಯಾಣಿಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ.
ಟಿಪ್ಪುಸುಲ್ತಾನ್ ಜಯಂತಿ ಇಂದು
ಸಿಂಧನೂರು: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಪುರುಷ, ಮೈಸೂರು ಹುಲಿ ಖ್ಯಾತಿಯ ಟಿಪ್ಪುಸುಲ್ತಾನ 264ನೇ ಜನ್ಮ ದಿನಾಚರಣೆಯನ್ನು ಸಿಂಧನೂರು ತಾಲೂಕಿನ ಟಿಪ್ಪು ಸುಲ್ತಾನ ಸಮಿತಿಯಿಂದ ನ.10 ಭಾನುವಾರ ಆಚರಿಸಲಾಗುವು ಎಂದು ಅಧ್ಯಕ್ಷ ಖಾಜಿ ಮಲ್ಲಿಕ್ ವಕೀಲರು ಹಾಗೂ ಬಡಿಬೇಸ್ ಟಿಪ್ಪುಸುಲ್ತಾನ್ ಘಟಕದ ಅಧ್ಯಕ್ಷ ಜಹಿರುದ್ದೀನ್ ಬಾಬರ್ ತಿಳಿಸಿದ್ದಾರೆ. ಟಿಪ್ಪು ಸುಲ್ತಾನ್ ಕಾಲೋನಿ, ವೃತ್ತ, ರಸ್ತೆಯ ನಾಮಫಲಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಜನ್ಮ ದಿನಾಚರಣೆ ಆಚರಿಸಲಾಗುವದು. ನಂತರ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಾಲು- ಬ್ರೆಡ್ ಹಣ್ಣುಗಳನ್ನು ವಿತರಣೆ ಹಾಗೂ ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಬೇಕು. ಜನ್ಮದಿನವನ್ನು ಸರ್ಕಾರಿ ರಜೆ ಘೋಷಣೆ ಮಾಡಬೇಕೆಂದು ಒತ್ತಾಯಿಸಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವದು. ಟಿಪ್ಪು ಸುಲ್ತಾನ್ ಸಮಿತಿ ಪದಾಧಿಕಾರಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
ಟಿಪ್ಪು ಬಡಿಬೇಸ್ ಘಟಕ ಅಸ್ತಿತ್ವಕ್ಕೆ
ಸಿಂಧನೂರು: ಟಿಪ್ಪುಸುಲ್ತಾನ್ ಸಂಘದ ಬಡಿಬೇಸ್ ಯುವ ಘಟಕ ನೂತನವಾಗಿ ಅಸ್ತಿತ್ವಕ್ಕೆ ಬಂದಿದ್ದು, ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಇತ್ತೀಚೆಗೆ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಜಹಿರುದ್ದೀನ್ ಬಾಬರ, ಉಪಾಧ್ಯಕ್ಷ ಎಚ್.ಬಾಷಾ, ಕಾರ್ಯದರ್ಶಿ ಶಮ್ಲುಸಾಬ, ಜಂಟಿ ಕಾರ್ಯದರ್ಶಿ ಅಬರಾರ್, ಖಜಾಂಚಿ ಎಂ.ಡಿ. ಕಲೀಮ್, ಜಂಟಿ ಖಜಾಂಚಿಯಾಗಿ ಅಜ್ಮೀರ, ಸದಸ್ಯರಾಗಿ ಜಾಕೀರ, ಕಲೀಮ್, ಪಾಷಾ, ಪಿ.ಸಿ, ಬಾಷಾ ವಕೀಲರು ಹಾಗೂ ಮುರ್ತುಜಾ ಆಯ್ಕೆಯಾಗಿದ್ದಾರೆಂದು ತಾಲೂಕಾಧ್ಯಕ್ಷ ಖಾಜಿ ಮಲಿಕ್ ಅಹ್ಮದ ವಕೀಲರು ತಿಳಿಸಿದ್ದಾರೆ.
ಇಂದು ಉದ್ಘಾಟನೆ
ರಾಯಚೂರು: ನಗರದಲ್ಲಿ ನ.10ರಂದು ಕೇಬಲ್ ಆಪರೇಟರ್ಸ್ ಅಸೋಸಿಯೇಶನ್ನ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ.
ನಗರದ ಟ್ಯಾಗೋರರ್ಬಿಎಡ್ ಕಾಲೇಜಿನಲ್ಲಿ ನ.10ರಂದು ಬೆಳಗ್ಗೆ 10.30ಕ್ಕೆ ಶಾಸಕ ಡಾ.ಶಿವರಾಜ್ ಪಾಟೀಲ್ ಅಸೋಸಿಯೇಶನ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಅಸೋಸಿಯೇಶನ್ ಅಧ್ಯಕ್ಷ ಬಷೀರುದ್ದೀನ್ ವಹಿಸುವರು. ಮುಖ್ಯ ಅತಿಥಿಗಳಾಗಿ ನಗರಸಭೆ ಸದಸ್ಯ ಹಾಗೂ ಅಸೋಸಿಯೇಶನ್ ಉಪಾಧ್ಯಕ್ಷ ಎಂ.ಪವನಕುಮಾರ, ರವೀಂದ್ರ ಜಲ್ದಾರ್, ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಸರಸಂಕರ್, ಜಂಟಿ ಕಾರ್ಯದರ್ಶಿ ವೆಂಕಟೇಶಗೌಡ, ವೀರೇಂದ್ರ ರೆಡ್ಡಿ ಸೇರಿ ಅನೇಕರು ಪಾಲ್ಗೊಳ್ಳಲಿದ್ದಾರೆಂದು ಪ್ರಕಟಣೆ ತಿಳಿಸಿದೆ.
ನಾಳೆ ಪ್ರತಿಭಟನೆ
ದೇವದುರ್ಗ: ಕರ್ನಾಟಕ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ತಾಲೂಕು ಸಮಿತಿಯಿಂದ ನ.11ರಂದು ಪಟ್ಟಣದ ತಾಪಂ ಎದುರು ಪ್ರತಿಭಟನೆ ಆಯೋಜಿಸಲಾಗಿದೆ. ಸಂಘದ ಅಧ್ಯಕ್ಷ ಮರಿಯಮ್ಮ ಪ್ರಕಟಣೆ ನೀಡಿ, ಬಿಸಿಯೂಟ ನೌಕರರ ಕಾಯಂಗೊಳಿಸುವುದು ಸೇರಿ ಕನಿಷ್ಟ ವೇತನ 10 ಸಾವಿರ ನಿಗದಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಪಂ ಎದುರು ಹೋರಾಟ ಆಯೋಜಿಸಲಾಗಿದೆ. ತಾಲೂಕಿನ ಬಿಸಿ ಊಟ ನೌಕರರು ಅಂದು ಬೆಳಗ್ಗೆ 11ಕ್ಕೆ ಎಪಿಎಂಸಿ ಆವರಣದಲ್ಲಿ ಸೇರುವಂತೆ ಅಧ್ಯಕ್ಷೆ ಮರಿಯಮ್ಮ, ಗೌರವಾಧ್ಯಕ್ಷ ಪಿ. ಗಿರಿಯಪ್ಪ, ಕಾರ್ಯದರ್ಶಿ ಶಶಿಕಲಾ ಮನವಿ ಮಾಡಿದ್ದಾರೆ.
ಅಕ್ರಮ ಹತ್ತಿ ಸಾಗಣೆ 18000 ದಂಡ
ಲಿಂಗಸ್ಗೂರು: ಪಟ್ಟಣದ ಬಸ್ನಿಲ್ದಾಣ ವೃತ್ತದಲ್ಲಿ ಅಕ್ರಮವಾಗಿ ಹತ್ತಿ ಸಾಗಿಸುತ್ತಿದ್ದ ಲಾರಿಯನ್ನು ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಜಾಗೃತದಳ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ದಂಡ ವಿಧಿಸಿದ್ದಾರೆ. ಕೃಷಿ ಮಾರುಕಟ್ಟೆ ಇಲಾಖೆ ಜಾಗೃತ ದಳದ ಜಂಟಿ ನಿರ್ದೇಶಕರು ಮಾಹಿತಿ ಪಡೆದು ದಾಳಿ ನಡೆಸಿ ಅಂದಾಜು 80 ಕ್ವಿ. ಹತ್ತಿ ಮತ್ತು ಲಾರಿಯನ್ನು ಜಪ್ತಿ ಮಾಡಿದ್ದಾರೆ. ಅಲ್ಲದೆ ಮಾರುಕಟ್ಟೆ ಶುಲ್ಕ ನೀಡದೆ ಪರವಾನಗಿ ಪ್ರಮಾಣ ಪತ್ರ ಇರದೆ ಸಾಗಿಸುತ್ತಿದ್ದರಿಂದ ಒಟ್ಟು 18 ಸಾವಿರ ದಂಡ ವಿಧಿಸಿದ್ದಾರೆ. ಶಹಪೂರ ತಾಲೂಕಿನ ಸಗರ ಗ್ರಾಮದಿಂದ ಧಾರವಾಡ ಜಿಲ್ಲೆಯ ನರಗುಂದ ಪಟ್ಟಣಕ್ಕೆ ಹತ್ತಿ ತುಂಬಿದ್ದ ಲಾರಿ ಹೊರಟಿತ್ತು.
ಅಪರಿಚಿತನ ಸಾವು
ರಾಯಚೂರು: ತಾಲೂಕಿನ ಹುಣಸಿಹಾಳ ಹುಡಾ ಗ್ರಾಮದಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಮೃತನು 55 ವರ್ಷದವನಾಗಿದ್ದು, ಕಳೆದ ಕೆಲ ದಿನಗಳಿಂದ ಗ್ರಾಮದ ಹನುಮಾನ್ ಮಂದಿರದಲ್ಲಿ ವಾಸವಾಗಿದ್ದ. ಈತನಿಗೆ ಗ್ರಾಮಸ್ಥರು ಆಶ್ರಯ ನೀಡಿದ್ದು, ಹನುಮಾನ್ ದೇವಸ್ಥಾನದ ಮುಂದಿನ ಬಯಲು ಪ್ರದೇಶದಲ್ಲಿ ಮಲಗಿದ್ದು, ಅಲ್ಲಿಯೇ ಸಾವಿಗೀಡಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ರಾಯಚೂರು ಗ್ರಾಮೀಣ ಠಾಣೆಯಲ್ಲಿ ಕೇಸ್ ದಾಖಲಾಗಿದೆ.