ಸಮಾಜಕ್ಕೆ ಕಾನೂನು ತಳಹದಿ ಅವಶ್ಯ
ಕನ್ನಡಪ್ರಭ ವಾರ್ತೆ ರಾಯಚೂರು ನ.9
ಸಮಾಜದಲ್ಲಿ ಎಲ್ಲರೂ ಗೌರವಪೂರ್ವಕವಾಗಿ ಜೀವನ ನಡೆಸುವಂತಾಗಲು ಕಾನೂನು ತಳಹದಿಯ ಮೇಲೆ ಸಮಾಜ ನಿರ್ಮಾಣ ಅವಶ್ಯಕ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಪಿ. ಕೃಷ್ಣಭಟ್ ಹೇಳಿದರು.
ಅವರು ನಗರದಲ್ಲಿ ಶನಿವಾರ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಳವಳ: ದೇಶದ ಜನರಲ್ಲಿ ಅವರಿಗಾಗಿಯೇ ರೂಪಿಸಿರುವ ಕಾನೂನುಗಳ ಬಗ್ಗೆ ಅರಿವಿನ ಕೊರತೆಯಿದೆ. ಕಾನೂನಿನಲ್ಲಿ ನ್ಯಾಯಪಡೆಯಲು ಇರುವ ಅವಕಾಶಗಳ ಬಗ್ಗೆ ಜಾಗೃತಿಯ ಕೊರತೆಯಿಂದಾಗಿ ಸಮಾಜದಲ್ಲಿ ನಾನಾ ರೀತಿಯ ಅಪರಾಧಗಳು ಸಂಭವಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ದೇಶದ ಪ್ರತಿಯೊಬ್ಬ ಪ್ರಜೆ ದೇಶದಲ್ಲಿನ ಕಾನೂನುಗಳು ಮತ್ತು ಅವುಗಳಿಂದಾಗುವ ಪ್ರಯೋಜನಗಳ ಕುರಿತು ಚಿಂತನೆ ನಡೆಸುವುದು ತೀರಾ ಅವಶ್ಯಕ. ಬದುಕಿನ ಗಂಭೀರತೆಯನ್ನು ಅರಿಯುವತ್ತ ಎಲ್ಲರೂ ಯೋಚಿಸಬೇಕಿದೆ. ಅದರಲ್ಲೂ ಗ್ರಾಮೀಣ ಭಾಗದ ನಿವಾಸಿಗಳಲ್ಲಿ ಕಾನೂನಿನ ಅರಿವಿನ ಕೊರತೆ ಸಾಕಷ್ಟಿದೆ ಎಂದು ಹೇಳಿದರು.
ಅರಿವಿನ ಕೊರತೆ: ಹಿರಿಯ ನ್ಯಾಯವಾದಿ ಬಸವರಾಜಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದಲ್ಲಿ ಎಷ್ಟೇ ಕಠಿಣ ಕಾನೂನುಗಳು ರೂಪುಗೊಂಡು ಜಾರಿಗೆ ತಂದಿದ್ದರೂ ಅಪರಾಧ ಸಂಖ್ಯೆ ಕಡಿಮೆಯಾಗಿಲ್ಲ. ಇದಕ್ಕೆ ಕಾನೂನು ಬಗ್ಗೆ ಜನರಲ್ಲಿ ಅರಿವಿನ ಕೊರತೆಯಿರುವುದೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅರಿವೇ ಗುರು ಎಂಬಂತೆ ಕಾನೂನಿನ ಜ್ಞಾನ ಹೊಂದುವ ಮೂಲಕ ಅಪರಾಧಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕಿದೆ ಎಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಭಾನರಾಜ್ ಮಾತನಾಡಿದರು. ನ್ಯಾಯಾಧೀಶರಾದ ಆರ್.ಜೆ.ಸತೀಶಸಿಂಗ್, ಮಹಮ್ಮದ್ ಮುಜಾಹಿದ್ ಉಲ್ಲಾ, ವಕೀಲರ ಸಂಘದ ಕಾರ್ಯದರ್ಶಿ ಪ್ರಭುದೇವ ಪಾಟೀಲ್, ಹಿರಿಯ ನ್ಯಾಯವಾದಿ ವಿ. ಸತೀಶ ಇದ್ದರು. ಸಮಾರಂಭದಲ್ಲಿ ಜಿಲ್ಲಾ ನ್ಯಾಯಾಲಯದ ನ್ಯಾಯವಾದಿಗಳು ಹಾಗೂ ಜನತೆ ಪಾಲ್ಗೊಂಡಿದ್ದರು.