ಅಕ್ಕಿ ಕಳ್ಳಸಾಗಣೆ ಸಿಒಡಿ ತನಿಖೆಯಾಗಲಿ
ಸಿಂಧನೂರು: ತಾಲೂಕಿನ ಶ್ರೀಪುರಂಜಂಕ್ಷನ್ ಗೋಡಾನಮೊಂದರಲ್ಲಿ ಲಕ್ಷಾಂತರ ಮೌಲ್ಯದ ಅನ್ನಭಾಗ್ಯ ಯೋಜನೆ ಅಕ್ಕಿಯನ್ನು ಕಳ್ಳ ಸಾಗಣೆ ಮಾಡುತ್ತಿದ್ದಾರೆಂಬ ವದಂತಿಯ ಹಿನ್ನೆಲೆಯಲ್ಲಿ ತಹಸೀಲ್ದಾರ್ ವೆಂಕನಗೌಡ ಪಾಟೀಲ್ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಿಸಿರುವುದು ಸರಿಯಷ್ಟೆ. ಆದರೆ ಈ ಪ್ರಕರಣವನ್ನು ಮುಚ್ಚಿ ಹಾಕುವ ಕೆಲಸ ಇಲ್ಲಿನ ಕೆಲ ಕಾಣದ ಕೈಗಳು ಮಾಡುತ್ತವೆ. ಆದ್ದರಿಂದ ಈ ಪ್ರಕರಣವನ್ನು ಸಿಒಡಿತನಿಖೆಗೆ ಒಳಪಡಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೃಷ್ಣಪ್ಪ ಬಣದ ತಾಲೂಕ ಸಂಚಾಲಕ ಮಹಾದೇವ ಧುಮತಿ ಮುಖ್ಯಮಂತ್ರಿಗೆ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿ, ತಾಲೂಕಾದ್ಯಂತ ಆಹಾರ ಧಾನ್ಯಗಳನ್ನು ಪಡಿತರದಾರರಿಗೆ ಹಂಚದೆ ಕಾಳಸಂತೆಯಲ್ಲಿ ಮಾರಾಟ ಮಾಡುವ ಜಾಲವನ್ನು ಪತ್ತೆ ಹಚ್ಚಬೇಕು. ಇದರಲ್ಲಿ ಭಾಗಿಯಾದ ಅಧಿಕಾರಿಗಳು ಹಾಗೂ ಆಹಾರ ಪೂರೈಕೆ ಮಾಡುವ ಗುತ್ತೇದಾರರ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಅಕ್ಕಿಯನ್ನು ಕಳ್ಳತನ ಮಾಡಿರುವ ವ್ಯಕ್ತಿಗಳನ್ನು ಗಡಿಪಾರು ಮಾಡಬೇಕೆಂದು ತಿಳಿಸಿದ್ದಾರೆ.
ತಾಲೂಕಿನಲ್ಲಿ ಆಹಾರ ಧಾನ್ಯಗಳ ಕಳ್ಳತನ ವ್ಯವಹಾರ ನಿರ್ಭಯವಾಗಿ ನಡೆಯುತ್ತಿದೆ. ಕಳ್ಳ ವ್ಯಾಪಾರಿಗಳು ಕೊಡುವ ಎಂಜಲು ಕಾಸಿಗೆ ಆಸೆ ಬಿದ್ದಿರುವ ಅಧಿಕಾರಿಗಳು ದಿಢೀರನೆ ಶ್ರೀಮಂತರಾಗುತ್ತಿದ್ದಾರೆ. ಅನ್ನಭಾಗ್ಯ ಯೋಜನೆ ಕಳ್ಳ ಖದೀಮರಿಗೆ, ದಲ್ಲಾಳಿಗಳಿಗೆ, ಲೂಟಿಕೋರರಿಗೆ ವರದಾನವಾಗಿದೆ. ಕಳ್ಳತನದ ಅಕ್ಕಿ ಶೇಖರಣೆ ಮಾಡಿರುವ ಗುನ್ನೇಶ್ವರರಾವ್ ಅಕ್ಕಿಯನ್ನು ಮಹಾರಾಷ್ಟ್ರ, ಪುನಾ, ತಮಿಳುನಾಡು ಮತ್ತಿತರ ಕಡೆ ಮಾರಾಟ ಮಾಡುತ್ತಿರುವುದು ಹೊಸದೆನಲ್ಲ. ಈತ ಹಣದ ಆಸೆ ತೋರಿಸಿ ಅನೇಕ ಪ್ರಕರಣಗಳನ್ನು ಬಯಲಿಗೆ ಬರದಂತೆ ಮಾಡುವುದರಲ್ಲಿ ಮಹಾನಿಪುಣ. ಈತನಿಗೆ ಕೆಲ ಗಣ್ಯ ವ್ಯಕ್ತಿಗಳ ಕುಮ್ಮಕ್ಕು ಇದೆ. ಈತನ ವಿರುದ್ಧ ಮೊದಲು ತನಿಖೆಗೆ ಆಗ್ರಹಿಸಿದ್ದಾರೆ.