ಎಂಎಂಎಲ್ ಕಂಪನಿ ಜಮೀನು ಕಬಳಿಕೆಗೆ ಸಂಚು?
ಕ.ಪ್ರ.ವಾರ್ತೆ, ಮುದಗಲ್, ನ.10
ಪಟ್ಟಣದ ಹೊರವಲಯದಲ್ಲಿರುವ ಸರ್ಕಾರಿ ಸ್ವಾಮ್ಯದ ಮೈಸೂರು ಮಿನರಲ್ ಕಂಪನಿಗೆ ಸೇರಿದ ಜಮೀನನ್ನು ಕಬಳಿಸುವ ಸಂಚು ನಿರಂತರವಾಗಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಪಟ್ಟಣದ ಮಸ್ಕಿ ರಸ್ತೆಯ ಸ.ನಂ. 618, 400, 396 ರಲ್ಲಿ ಒಟ್ಟು 242 ಎಕರೆ ಜಮೀನು ಸರ್ಕಾರದ್ದಾಗಿದೆ. ಅದರಲ್ಲಿ 98 ಎಕರೆ ಭೂ ಪ್ರದೇಶವನ್ನು 1990ರಲ್ಲಿ ಎಂಎಂಎಲ್ ಕಂಪನಿಗೆ ಸರ್ಕಾರ ಗಣಿಗಾರಿಕೆ ನಡೆಸಲು ಅನುಮತಿ ನೀಡಿತ್ತು. ಅದರಲ್ಲಿ ಸರ್ಕಾರ ಭೂಹೀನರಿಗೆ 16 ಎಕರೆ ಜಮೀನು ನೀಡಿದೆ. ಇನ್ನುಳಿದ 80 ಎಕರೆ ಜಮೀನು ಪಾಳು ಬಿದ್ದಿದೆ.
ಅರ್ಜಿ ಸಲ್ಲಿಕೆ: 2006 ರಿಂದ 8ರವರೆಗೆ ಗಣಿಗಾರಿಕೆ ನಡೆಸಲು ಚೆನ್ನೈ ಮೂಲದ ಕಟ್ಟಿಮಾ ಗ್ರಾನೈಟ್ ಕಂಪನಿಗೆ, ಮೈಸೂರು ಮಿನರಲ್ ಕಂಪನಿ 64 ಎಕರೆ ಜಮೀನನ್ನು ಲೀಜ್ ನೀಡಿತ್ತು. ಕಳೆದ ನಾಲ್ಕು ವರ್ಷಗಳಿಂದ ಗಣಿಗಾರಿಕೆ ಸ್ಥಗಿತಗೊಂಡಿದೆ. ಅಲ್ಲದೆ ಈ ಜಮೀನನು ವಿವಾದ ನ್ಯಾಯಾಲಯದಲ್ಲಿದೆ. ಜಮೀನು ಸರ್ವೇ ಮಾಡುವಂತೆ ಕಂಪನಿಯವರು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಕಂಕರ್ ಯಂತ್ರ ಪರವಾನಗಿ: ಮೈಸೂರು ಮಿನಿರಲ್ ಕಂಪನಿಗೆ ಸೇರಿದ ಸರ್ಕಾರಿ ಜಮೀನಲ್ಲೇ ಕಂಕರ್ ಕ್ರಷರ್ ಯಂತ್ರಗಳನ್ನು ಅಳವಡಿಸಲು ಸರ್ಕಾರ ಪರವಾನಗಿ ನೀಡಿದೆ. 14 ಕಂಪನಿಗಳಿಗೆ ತಲಾ ಎರಡು ಎಕರೆ ಜಮೀನು ಬಾಡಿಗೆ ರೂಪದಲ್ಲಿ ನೀಡಿದೆ. ಇದರಿಂದಾಗಿ ಗಣಿ ಮಾಲಿಕರಿಗೆ ಮತ್ತಷ್ಟು ಒಳಿತಾಗಿದೆ. ಸರ್ಕಾರಿ ಸ್ವಾಮ್ಯದ ಎಂಎಂಎಲ್ ಕಂಪನಿಯ ಜಮೀನು ಖಾಸಗಿಯವರ ಪಾಲಾಗುತ್ತಿದ್ದು ಅದರ ರಕ್ಷಣೆಗೆ ಯಾರು ಮುಂದಾಗುತ್ತಿಲ್ಲ ಎಂದು ಆರೊಪಿಸಲಾಗಿದೆ.
ತನಿಖೆ ಚುರುಕು: ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಕುರಿತು ಸಮಗ್ರ ತನಿಖೆ ನಡೆದಿದ್ದರಿಂದ ಗಣಿ ಮಾಲಿಕರಿಗೆ ನಿದ್ದೆಗೆಡಿಸಿದ್ದು, ಅಲ್ಲದೆ ಸರ್ಕಾರದಿಂದ ಭೂ ಹೀನರಿಗೆ ನೀಡಲಾದ ಜಮೀನಲ್ಲಿ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ದೂರುಗಳು ಹೋಗಿದ್ದರಿಂದ ತನಿಖೆ ಚುರುಕಾಗಿ ನಡೆದಿದ್ದರಿಂದ ಅನೇಕ ರೈತರು ಕಲ್ಲು ಬಂಡೆಗಳ ಅಕ್ಕ ಪಕ್ಕದಲ್ಲಿ ಹುರಳಿ ಬೆಳೆಯನ್ನು ಬಿತ್ತನೆ ಮಾಡಿ ಅಧಿಕಾರಿಗಳ ತನಿಖೆಗೆ ತಣ್ಣೀರು ಎರಚುವ ಪ್ರಯತ್ನ ನಡೆಸಿದ್ದಾರೆ.
ಅಧಿಕಾರಿಗಳ ಕೈವಾಡ: ಸರ್ಕಾರದಿಂದ ಭೂ ಹಿನರಿಗೆ ಉಳುಮೆ ಮಾಡಲು ನೀಡಲಾದ ಜಮೀನುಗಳಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಲು ಕಂದಾಯ ಇಲಾಖೆ ಅಧಿಕಾರಿಗಳ ಕೈವಾಡವಿದೆ. ಎನ್‌ಒಸಿ ನೀಡುವ ಸಮಯದಲ್ಲಿ ಕಂದಾಯ ಅಧಿಕಾರಿಗಳು ಪಂಚನಾಮೆ ಮಾಡಿ ಸರ್ಕಾರಕ್ಕೆ ವರದಿ ಕಳಿಸಿದ ಮೇಲೆಯೇ ಲೀಜ್ ಪರವಾನಗಿ ನೀಡಲಾಗುತ್ತದೆ. ಇದರಲ್ಲಿ ಅಧಿಕಾರಿಗಳ ಹಸ್ತಕ್ಷೇಪ ನಡೆದಿದೆ ಎನ್ನಲಾಗುತ್ತಿದೆ.
ಪಟ್ಟಭದ್ರರ ಕಣ್ಣು: ಪಟ್ಟಣದ ಹೊರ ವಲಯದಲ್ಲಿ ನೂರಾರು ಎಕರೆ ಸರ್ಕಾರಿ ಜಮೀನು ಖಾಲಿ ಇದ್ದು, ಇಲ್ಲಿ ಬಹು ಬೇಡಿಕೆಯ ಗ್ರಾನೈಟ್ ಕಲ್ಲು ದೊರೆಯುತ್ತಿದ್ದರಿಂದ ಗಣಿಗಾರಿಕೆ ನಡೆಸಬೇಕೆಂದು ಪಟ್ಟಭದ್ರ ಹಿತಾಸಕ್ತಿಗಳ ಕಣ್ಣು ಅದರ ಮೇಲೆ ಬಿದ್ದಿದೆ. ಸರ್ಕಾರಿ ಜಮೀನು ಕಬಳಿಸಲು ಸಾಕಷ್ಟು ರಾಜಕೀಯ ಮುಖಂಡರು, ಗ್ರಾನೈಟ್ ಉದ್ಯಾಮಿಗಳು ಜಮೀನಿನ ಮೇಲೆ ಕಣ್ಣು ಇಟ್ಟಿದ್ದಾರೆ. ಸರ್ಕಾರದ ಜಮೀನು ಕಬಳಿಕೆಯಲ್ಲಿ ರಾಜಕೀಯ ಮುಖಂಡರು, ಬಂಡವಾಳಶಾಹಿಗಳು ಮುಂದಾಗಿರುವುದಂತೂ ನಿಜ.
ಸರ್ಕಾರಿ ಭೂಮಿ ರಕ್ಷಿಸಲು ಯಾವ ಅಧಿಕಾರಿಗಳು ಮುಂದೆ ಬರುವವರು?
-ಪಂಪಯ್ಯ ಮಠ