ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಲಂ 371 ಸಮರ್ಪಕ ಅನುಷ್ಠಾನಕ್ಕೆ ಒಗ್ಗಟ್ಟಿರಲಿ

Lingaraj Badiger
Updated On : 11 Nov 2013, 11:30 am

ಕ.ಪ್ರ.ವಾರ್ತೆ, ರಾಯಚೂರು, ನ.10
ಹೈ-ಕ ಪ್ರದೇಶ ಅಭಿವೃದ್ಧಿಗೆ ದೊರೆತಿರುವ 371ನೇ ಕಲಂ(ಜೆ)ಅಡಿಯ ವಿಶೇಷ ಸ್ಥಾನಮಾನದ ಸಮರ್ಪಕ ಅನುಷ್‌ಠಾನದಲ್ಲಿ ಈ ಪ್ರದೇಶದ ನಿವಾಸಿಗಳ ಪಾಲ್ಗೊಳ್ಳುವಿಕೆ ಪ್ರಮುಖಪಾತ್ರ ವಹಿಸಲಿದೆ. ಜತೆಗೆ 371ನೇ ಕಲಂ(ಜೆ) ಅನುಷ್ಠಾನವು ಈ ಪ್ರದೇಶದ ಜನಪ್ರತಿನಿಧಿಗಳಿಗೆ ಬಹುದೊಡ್ಡ ಸವಾಲಾಗಿದೆ ಎಂದು ಹೈ-ಕ ಹೋರಾಟ ಸಮಿತಿ ಉಪಾಧ್ಯಕ್ಷ ಡಾ.ರಜಾಕ್ ಉಸ್ತಾದ್ ಹೇಳಿದರು.
ನಗರದಲ್ಲಿ ಭಾನುವಾರ ಜನಸಂಗ್ರಾಮ ಪರಿಷತ್‌ನಿಂದ ಆಯೋಜಿಸಿದ್ದ 371ನೇ ಕಲಂ(ಜೆ) ಹಾಗೂ ಅದರ ಅನುಷ್ಠಾನ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದುವರೆಗೆ ಹೈ-ಕ ಭಾಗದ ಜನರಲ್ಲಿನ ನಿರಾಸಕ್ತಿಯ ಲಾಭ ಪಡೆದ ಜನಪ್ರತಿನಿಧಿಗಳು ವಿಶೇಷ ಸ್ಥಾನಮಾನ ಮತ್ತು ಪ್ರದೇಶದ ಅಭಿವೃದ್ಧಿಗೆ ಇಚ್ಛಾಶಕ್ತಿ ಪ್ರದರ್ಶಿಸದೇ ಹೈ-ಕ ಭಾಗದ ಅಭಿವೃದ್ಧಿ ಕಡೆಗಣಿಸಿದ್ದಾರೆ ಎಂದು ಟೀಕಿಸಿದರು.
ಕಳೆದ ಅನೇಕ ದಶಕಗಳಿಂದ ನಡೆಸಿದ ಹೋರಾಟದ ಫಲವಾಗಿ ಸದ್ಯ ಹೈ-ಕ ಭಾಗಕ್ಕೆ ವಿಶೇಷ ಸ್ಥಾನಮಾನ ಲಭ್ಯವಾಗಿದೆ. ಆದರೆ, ಇದರ ಸಮರ್ಪಕ ಅನುಷ್ಠಾನದೊಂದಿಗೆ ಸಮಗ್ರ ಅಭಿವೃದ್ಧಿಯ ಕನಸು ನನಸಾಗಿಸಲು ನಿವಾಸಿಗಳ ಪಾಲ್ಗೊಳ್ಳುವಿಕೆ ಬಹಳ ಅವಶ್ಯಕ. ಹಾಗೆಯೇ ಜನಪ್ರತಿನಿಧಿಗಳನ್ನು ಈ ವೇಳೆ ದಾರಿ ತಪ್ಪದಂತೆ ಎಚ್ಚರಿಸುತ್ತಲೇ ಸಾಗುವುದು ಅನಿವಾರ್ಯ ಎಂದರು.
ಭ್ರಷ್ಟಾಚಾರ, ಅಕ್ರಮಗಳಿಂದಾಗಿ ಇದುವರೆಗೆ ಹೈ-ಕ ಅಭಿವೃದ್ಧಿ ಮಂಡಳಿ ಮತ್ತು ಡಿ.ಎಂ. ನಂಜುಂಡಪ್ಪ ವರದಿ ಅನುಷ್ಠಾನದ ಹೆಸರಿನಲ್ಲಿ ಕೋಟ್ಯಂತರ ರು. ವ್ಯರ್ಥವಾಗಿದೆಯೇ ವಿನಹ ಪ್ರಗತಿ ಕಂಡುಬಂದಿಲ್ಲ. ಜತೆಗೆ ಈ ಭಾಗದ ನಾಯಕರ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅಧಿಕಾರಸ್ಥರು, ಶಾಲಾ ಮಕ್ಕಳಿಗೆ ಬೈಸಿಕಲ್ ವಿತರಣೆ, ರೈತರಿಗೆ ಪ್ರತಿ ಲೀಟರ್ ಹಾಲಿಗೆ 2 ರಂತೆ ಪ್ರೋತ್ಸಾಹಧನ ನೀಡಲು ನಂಜುಂಡಪ್ಪ ವರದಿಯಡಿ ಸೇರ್ಪಡೆಗೊಳಿಸಿ ಹೈ-ಕ ಭಾಗದವರನ್ನು ವಂಚಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಂಧ್ರ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಅಲ್ಲಿನ ರಾಜಕೀಯ ನಾಯಕರು ಮತ್ತು ಜನರ ನಿರ್ಲಕ್ಷ್ಯದಿಂದಾಗಿ ವಿಶೇಷ ಸ್ಥಾನಮಾನ ಘೋಷಣೆಯಾಗಿ ಅನೇಕ ವರ್ಷಗಳ ನಂತರ ಜಾರಿಗೆ ಮುಂದಾಗಿದ್ದರಿಂದ ಅನುದಾನದ ಕೊರತೆ ಮತ್ತಿತರೆ ಕಾರಣಗಳಿಗೆ ಆ ರಾಜ್ಯಗಳ  ಹಿಂದುಳಿದ ಪ್ರದೇಶಗಳು ಸಮರ್ಪಕ ಪ್ರಗತಿ ಕಾಣಲಿಲ್ಲ. ಇಂಥ ಉದಾಹರಣೆ ಹೈ-ಕ ಭಾಗದ ನಿವಾಸಿಗಳ ಮುಂದಿದೆ. ಹೈ-ಕ ಭಾಗದಲ್ಲೂ ಅಂಥದ್ದೇ ಪರಿಸ್ಥಿತಿ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಇಲ್ಲಿನ ನಿವಾಸಿಗಳ ಹೊಣೆಯಾಗಿದೆ ಎಂದು ಎಚ್ಚರಿಸಿದರು.
ದೇಶದಲ್ಲಿ ಇದುವರೆಗೆ ಸಾವಿರಾರು ಸಂಖ್ಯೆಯ ಕಾನೂನುಗಳು ರೂಪಿಸಲ್ಪಟ್ಟಿವೆ. ಆದರೆ, ಅವೆಲ್ಲವುಗಳ ಸಮರ್ಪಕ ಅನುಷ್ಠಾನದಲ್ಲಿ ನಾವು ಎಡವುತ್ತಿದ್ದೇವೆ. ಹೈ.ಕ. ಭಾಗಕ್ಕೆ ಬಹುದಿನಗಳ ಹೋರಾಟದ ನಂತರದಲ್ಲಿ ದೊರೆತಿರುವ ವಿಶೇಷ ಸ್ಥಾನಮಾನದ ಅವಕಾಶವನ್ನು ಕೈಚೆಲ್ಲದೇ ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ. ಈ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆ, ಶೈಕ್ಷಣಿಕ ಪ್ರಗತಿ ಜತೆಗೆ ಸಮಗ್ರ ಪ್ರದೇಶಾಭಿವೃದ್ಧಿಗೆ ಪೂರಕ ಪರಿಸರ ನಿರ್ಮಿಸುವತ್ತ ಒಗ್ಗೂಡಿ ಮುಂದುವರಿಯಬೇಕಿದೆ ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಕರ್ನಾಟಕ ರೈತ ಸಂಘದ ಅಧ್ಯಕ್ಷ ಆರ್.ಮಾನಸಯ್ಯ ಮಾನಸಯ್ಯ, ಮುಖಂಡ ಮೀರ್ ಶರೀಫ್ ಅನ್ವರ್ ಸಾಬ್ ಸೇರಿ ಅನೇಕರಿದ್ದರು. ವಿವಿಧೆಡೆಯಿಂದ ಆಗಮಿಸಿದ್ದ ಜನತೆ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement