ಸ್ತನ ಕ್ಯಾನ್ಸರ್ ತಡೆಗೆ ಗುಣಮಟ್ಟದ ಆಹಾರ ಸೇವಿಸಿ: ಡಾ.ನಿರಣಿ
ಕ.ಪ್ರ.ವಾರ್ತೆ, ರಾಯಚೂರು, ನ.10
ಬದಲಾದ ಆಹಾರ ಪದ್ಧತಿ ಮತ್ತು ಜೀವನಶೈಲಿಗಳಿಂದಾಗಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ. ಆರಂಭದಲ್ಲಿಯೇ ರೋಗ ಪತ್ತೆಯಾದಲ್ಲಿ ಗುಣಪಡಿಸಬಹುದಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರು ಗುಣಮಟ್ಟದ ಆಹಾರ ಸೇವನೆ ಮತ್ತು ಜೀವನಶೈಲಿಯಲ್ಲಿ ಮಾರ್ಪಾಟು ಮಾಡಿಕೊಳ್ಳುವುದು ಅವಶ್ಯಕ ಎಂದು ಡಾ.ನಿರಣಿ ಫೌಂಡೇಷನ್ ಮುಖ್ಯಸ್ಥ ಡಾ.ಎಸ್.ಎಸ್.ನಿರಣಿ ಹೇಳಿದರು.
ನಗರದಲ್ಲಿ ಭಾನುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಫೌಂಡೇಷನ್ ಇದುವರೆಗೆ ಅನೇಕ ಕಡೆ ಸ್ತನ ಕ್ಯಾನ್ಸರ್ ಪತ್ತೆ ಮತ್ತು ಚಿಕಿತ್ಸೆ ಶಿಬಿರಗಳನ್ನು ನಡೆಸಲಾಗಿದೆ. ಅಂಥ ಸಂದರ್ಭದಲ್ಲಿ ಪ್ರತಿ 10 ಜನ ಮಹಿಳೆಯರಲ್ಲಿ ಒಬ್ಬರಿಗೆ ಅಂಥ ಕ್ಯಾನ್ಸರ್ ರೋಗವಿರುವುದು ಕಂಡುಬಂದಿದೆ. ಇದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು.
ಮಹಿಳೆಯರಲ್ಲಿ 40 ರಿಂದ 60 ವರ್ಷಗಳ ವಯಸ್ಸಿನಲ್ಲಿ ಸಾಮಾನ್ಯವಾಗಿ ಈ ರೋಗ ಕಂಡುಬರುತ್ತದೆ. ಆದರೆ, ಈಚಿನ ದಿನಗಳಲ್ಲಿ 25 ರಿಂದ 30 ವರ್ಷ ವಯಸ್ಸಿನ ಅನೇಕ ಯುವತಿಯರಲ್ಲಿಯೂ ಸ್ತನ ಕ್ಯಾನ್ಸರ್ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸುವುದು ಅವಶ್ಯಕ ಎಂದರು.
ಸ್ತನ ಕ್ಯಾನ್ಸರ್ ಸುಲಭವಾಗಿ ಪತ್ತೆ ಹಚ್ಚಬಹುದು. ಮಹಿಳೆಯರು ಕಾಲದಿಂದ ಕಾಲಕ್ಕೆ ವೈದ್ಯರಲ್ಲಿ ತೆರಳಿ ಪರೀಕ್ಷಿಸಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು. ಕ್ಯಾನ್ಸರ್ ಮೊದಲ ಹಂತದಲ್ಲಿಯೇ ಪತ್ತೆಯಾದಲ್ಲಿ ಚಿಕಿತ್ಸೆ ಮೂಲಕ ಗುಣಪಡಿಸ ಬಹುದಾಗಿದೆ ಎಂದು ಹೇಳಿದರು.
ರಾಜ್ಯದ ಬಹುತೇಕ ಪ್ರದೇಶದಲ್ಲಿ ತಂಬಾಕು ಜಗಿಯುವುದು ಮತ್ತು ಧೂಮಪಾನದಿಂದಲೇ ಕ್ಯಾನ್ಸರ್ನಂಥ ಮಾರಕ ರೋಗಕಂಡುಬರುತ್ತಿದೆ. ಮಹಿಳೆಯರೂ ಸಹ ಆಧುನಿಕ ಜೀವನಶೈಲಿಗೆ ಮಾರುಹೋಗುತ್ತಿರುವುದು ಕ್ಯಾನ್ಸರ್ಗೆ ದಾರಿ ಮಾಡುತ್ತಿದೆ. ಗುಣಮಟ್ಟದ ಆಹಾರ, ಜೀವನ ಶೈಲಿಯಲ್ಲಿ ಕೆಲ ಮಾರ್ಪಾಟು ಮಾಡಿಕೊಳ್ಳುವ ಮೂಲಕ ಕ್ಯಾನ್ಸರ್ನಿಂದ ಪಾರಾಗಬಹುದಾಗಿದೆ ಎಂದು ತಿಳಿಸಿದರು.
ಮಹಿಳೆಯರಿಗೆ 30 ವರ್ಷದ ನಂತರದಲ್ಲಿ ಮದುವೆ ಆಗುವುದೂ ಸ್ತನ ಕ್ಯಾನ್ಸರ್ಗೆ ಕಾರಣವಾಗಲಿದೆ. ಮ್ಯಾಮೋಗ್ರಾಫಿ ಪದ್ಧತಿಯಲ್ಲಿ ಸ್ತನ ಕ್ಯಾನ್ಸರ್ ಪತ್ತೆ ಮಾಡಬಹುದು. ಫೌಂಡೇಷನ್ ವತಿಯಿಂದ ಹೈ-ಕ. ಭಾಗದಲ್ಲಿ ವಿವಿಧೆಡೆ ಶಿಬಿರಗಳನ್ನು ಆಯೋಜಿಸಿ ಮ್ಯಾಮೋಗ್ರಾಫಿ ಪದ್ಧತಿಯಡಿ ಮಹಿಳೆಯರ ಆರೋಗ್ಯದ ತಪಾಸಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಈಚಿನ ದಿನಗಳಲ್ಲಿ ಕ್ಯಾನ್ಸರ್ ಬಗ್ಗೆ ನಗರ ಮತ್ತು ಪಟ್ಟಣ ಪ್ರದೇಶದ ಜನರಲ್ಲಿ ಜಾಗೃತಿ ಮೂಡಿದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಈಗಲೂ ಅನೇಕರಿಗೆ ಕ್ಯಾನ್ಸರ್ ಮತ್ತು ಅದರ ಕಾರಣಗಳ ಬಗ್ಗೆ ಜನತೆಗೆ ಅರಿವಿಲ್ಲ. ಹಾಗಾಗಿ, ಗ್ರಾಮೀಣ ಪ್ರದೇಶದಲ್ಲಿ ಅನೇಕರು ಕ್ಯಾನ್ಸರ್ಗೆ ಸೂಕ್ತ ಚಿಕಿತ್ಸೆ ಇಲ್ಲವೇ ಆರಂಭದಲ್ಲಿಯೇ ಪತ್ತೆ ಮಾಡದೇ ಸಾವಿಗೀಡಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ನಿಟ್ಟಿನಲ್ಲಿ ಫೌಂಡೇಷನ್ ವತಿಯಿಂದ ಜಾಗೃತಿ ಕಾರ್ಯಕ್ರಮ ಮತ್ತು ಗ್ರಾಮೀಣ ಪ್ರದೇಶದಲ್ಲಿ ಉಚಿತ ತಪಾಸಣೆ ಮತ್ತು ಸಲಹೆ ನೀಡಿಕೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಹೈ-ಕ ಭಾಗದವರಾದ ತಾವು ಈ ಭಾಗದ ಜನಾರೋಗ್ಯದ ಸುಧಾರಣೆಗೆ ಹೆಚ್ಚು ಒತ್ತು ನೀಡುತ್ತಿರುವುದಾಗಿ ತಿಳಿಸಿದರು.
'ಸ್ತನ ಕ್ಯಾನ್ಸರ್ ಜನಜಾಗೃತಿ ಅವಶ್ಯ'
ರಾಯಚೂರು: ನಗರದಲ್ಲಿ ಭಾನುವಾರ ಹೈದರಾಬಾದ್ನ ಡಾ.ನಿರಣಿ ಫೌಂಡೇಷನ್, ರಾಯಚೂರಿನ ಇನ್ನರ್ವೀಲ್ ಕ್ಲಬ್ ಆಶ್ರಯದಲ್ಲಿ ಸ್ತನ ಕ್ಯಾನ್ಸರ್ ವಿಷಯಾಧಾರಿತ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಶಿಬಿರವನ್ನು ಡಾ.ನಿರಣಿ ಫೌಂಡೇಷನ್ ಮುಖ್ಯಸ್ಥ ಡಾ. ಎಸ್.ಎಸ್. ನಿರಣಿ ಉದ್ಘಾಟಿಸಿ ಮಾತನಾಡಿ, ಕ್ಯಾನ್ಸರ್ ರೋಗಕ್ಕೆ ಪ್ರತಿವರ್ಷ ಅನೇಕರು ಬಲಿಯಾಗುತ್ತಿದ್ದಾರೆ. ರೋಗ ಬಾರದಂತೆ ತಡೆಯುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಹೇಳಿದರು.
ಜನರು ತಮ್ಮ ಜೀವನಶೈಲಿಯಲ್ಲಿ ಬದಲಾವಣೆ, ವ್ಯಾಯಾಮ, ಉತ್ತಮ ಆರೋಗ್ಯ ಸೇವನೆಯಿಂದ ಕ್ಯಾನ್ಸರ್ ಬಾರದಂತೆ ತಡೆಯಬಹುದಾಗಿದೆ ಎಂದ ಅವರು, ಕ್ಯಾನ್ಸರ್ಗೆ ಕಾರಣವಾಗುವ ಅಂಶಗಳ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾರಾಯಣಪ್ಪ ಮಾತನಾಡಿದರು. ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ಸುಷ್ಮಾ ಪತಂಗೆ, ಕಾರ್ಯದರ್ಶಿ ಅರ್ಚನಾ ಪಾಧ್ಯೆ, ಭ್ರಮರಾಂಬಾ ವಿಶ್ವನಾಥ್ ಸೇರಿ ಅನೇಕರಿದ್ದರು. ವಿವಿಧೆಡೆಯಿಂದ ಆಗಮಿಸಿದ್ದ ಮಹಿಳೆಯರು ಸ್ತನ ಕ್ಯಾನ್ಸರ್ ಕುರಿತ ಆರೋಗ್ಯದ ಉಚಿತ ತಪಾಸಣೆಗೊಳಗಾದರು.