30ರಂದು ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ
ಕನ್ನಡಪ್ರಭ ವಾರ್ತೆ ರಾಯಚೂರು ನ.11
ನ್ಯಾ. ಸದಾಶಿವ ಆಯೋಗದ ವರದಿಯ ಯಥಾವತ್ತು ಜಾರಿಗೆ ಆಗ್ರಹಿಸಿ ಬೆಳಗಾವಿಯಲ್ಲಿ ನಡೆಯಲಿರುವ ರಾಜ್ಯ ವಿಧಾನ ಮಂಡಲದ ಅಧಿವೇಶನಕ್ಕೆ ನ. 30ರಂದು ಬೈಕ್ ರ್ಯಾಲಿ ನಡೆಸುವುದಾಗಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಅಂಬಣ್ಣ ಅರೋಲಿಕರ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ನ್ಯಾ. ಸದಾಶಿವ ಆಯೋಗದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರ ಆ ವರದಿಯನ್ನು ಒಪ್ಪಿದೆ. ಆದರೆ ವರದಿಯ ಶಿಫಾರಸು ಜಾರಿ ಮಾಡುವ ನಿಟ್ಟಿನಲ್ಲಿ ವಿಳಂಬ ತೋರಲಾಗಿದೆ ಎಂದು ಆರೋಪಿಸಿದರು.
ಹೋರಾಟ ಹತ್ತಿಕ್ಕಲು ಯತ್ನಿಸಿತ್ತು: ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಿ ಎರಡು ವರ್ಷಗಳೇ ಕಳೆದಿವೆ. ಆಗಿನ ಸಿಎಂ ಜಗದೀಶ್ ಶೆಟ್ಟರ್ ನೇತೃತ್ವದ ಸರ್ಕಾರ ಬೆಳಗಾವಿಯಲ್ಲಿ ಅಧಿವೇಶನ ನಡೆಸಿದಾಗಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಸಾವಿರಾರು ಕಾರ್ಯಕರ್ತರು ಬೆಳಗಾವಿಯ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದಾಗ ಲಾಠಿ ಪ್ರಹಾರ ನಡೆಸಿ ಹೋರಾಟ ಹತ್ತಿಕ್ಕುವ ಕಾರ್ಯ ಮಾಡಿತು ಎಂದು ಆರೋಪಿಸಿದರು.
ಈ ಹಿಂದೆ ಬೆಳಗಾವಿಯಲ್ಲಿ ನಡೆಸಿದ ಹೋರಾಟದ ವೇಳೆ ನೂರಾರು ಕಾರ್ಯಕರ್ತರ ವಿರುದ್ಧ ಅನಗತ್ಯವಾಗಿ ಪ್ರಕರಣ ದಾಖಲಿಸಲಾಗಿದೆ. ಆಗಿನ ಗೃಹ ಸಚಿವ ಆರ್.ಅಶೋಕ್ ಅವರು ಪ್ರಕರಣ ಹಿಂಪಡೆಯುವುದಾಗಿ ಆನಂತರ ಹೇಳಿದ್ದು ಈಗಲೂ ಈಡೇರಿಲ್ಲ. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ವಿಳಂಬ ಮಾಡದೇ ಸದಾಶಿವ ಆಯೋಗದ ವರದಿಯ ಯಥಾವತ್ತು ಜಾರಿಗೆ ಕೂಡಲೇ ಮುಂದಾಗಬೇಕೆಂದು ಒತ್ತಾಯಿಸಿದರು.
ಸಿಎಂ ವಿರುದ್ಧ ಅಸಮಾಧಾನ: ಅಹಿಂದ ಪರಿಕಲ್ಪನೆಯ ಮುಂಚೂಣಿ ನಾಯಕ ಸಿದ್ದರಾಮಯ್ಯ ಅವರು ಸದ್ಯ ಸಿಎಂ ಆಗಿದ್ದು, ಪರಿಶಿಷ್ಟ ಜಾತಿಗಳ ಬಹುದಿನಗಳ ಬೇಡಿಕೆಯಾದ ಸದಾಶಿವ ಆಯೋಗದ ಶಿಫಾರಸು ಜಾರಿಗಾಗಿ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗಿದೆ. ಆದರೆ ಇದುವರೆಗೆ ಸಿದ್ದರಾಮಯ್ಯ ಅವರು ವರದಿಯನ್ನು ಸರ್ಕಾರ ಪರಿಶೀಲಿಸಿಲ್ಲ ಎಂದು ಹೇಳುತ್ತಲೇ ಬಂದಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರು ಈ ಮೊದಲು ಪ್ರತಿಪಕ್ಷ ನಾಯಕ ಸ್ಥಾನದಲ್ಲಿದ್ದಾಗಿನಿಂದಲೂ ವರದಿಯನ್ನು ನೋಡಿಲ್ಲ ಎಂದು ಹೇಳುತ್ತಲೇ ಸಾಗಿದ್ದಾರೆ. ಸದ್ಯ ಸಿಎಂ ಆದ ನಂತರವೂ ಅದೇ ಉತ್ತರ ನೀಡುತ್ತಿರುವುದು, ಸಾಮಾಜಿಕ ನ್ಯಾಯ ಪ್ರತಿಪಾದಿಸುವ ಅವರ ಬಗ್ಗೆಯೇ ಅನುಮಾನ ಮೂಡುವಂತೆ ಮಾಡಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಅಹೋರಾತ್ರಿ ಧರಣಿಗೆ ನಿರ್ಧಾರ: ಸರ್ಕಾರದ ನಿಧಾನಗತಿ ಧೋರಣೆಯಿಂದ ಬೇಸತ್ತು ಮಾದಿಗ ಮೀಸಲಾತಿ ಹೋರಾಟ ಸಮಿತಿ ನೇತೃತ್ವದಲ್ಲಿ ನ. 25ರಿಂದ ಡಿ.6ರವರೆಗೆ ನಡೆಯಲಿರುವ ಬೆಳಗಾವಿ ಅಧಿವೇಶನದ ಸಂದರ್ಭ ಬೆಳಗಾವಿಯಲ್ಲಿ ಡಿ.3ರಿಂದ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಿಂದ ಸಾವಿರಾರು ಸಂಖ್ಯೆಯ ಸಂಘಟನೆಯ ಕಾರ್ಯಕರ್ತರು ಬೆಳಗಾವಿಗೆ ಆಗಮಿಸಲಿದ್ದಾರೆ. ಅದರಲ್ಲೂ ರಾಯಚೂರು ಸೇರಿದಂತೆ ಹೈ.ಕ. ಭಾಗದಿಂದ 1 ಸಾವಿರ ಕಾರ್ಯಕರ್ತರು ಬೈಕ್ ರ್ಯಾಲಿಯಲ್ಲಿ ಬೆಳಗಾವಿಗೆ ತೆರಳಿ ಸರ್ಕಾರವನ್ನು ಎಚ್ಚರಿಸಲಿದ್ದಾರೆಂದು ಹೇಳಿದರು.
ಉಗ್ರ ಹೋರಾಟದ ಎಚ್ಚರಿಕೆ: ನ.30ರಂದು ನಗರದ ಅಂಬೇಡ್ಕರ್ ವೃತ್ತದಿಂದ ಬೈಕ್ ರ್ಯಾಲಿ ಬೆಳಗಾವಿಗೆ ತೆರಳಲಿದ್ದು, ಪರಿಶಿಷ್ಟ ಜಾತಿಯಲ್ಲಿನ ಅಸ್ಪೃಶ್ಯರು ಹೆಚ್ಚಿನ ಸಂಖ್ಯೆಯಲ್ಲಿ ಒಳಮೀಸಲಾತಿಗಾಗಿನ ಹೋರಾಟದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿ ಜಾರಿಗೆ ಮುಂದಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಜೆ.ಬಿ. ರಾಜು, ಜಿಲ್ಲಾಧ್ಯಕ್ಷ ಹೇಮರಾಜ ಅಸ್ಕಿಹಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ರಹಾಂ ಹೊನ್ನಟಗಿ, ತಿಮ್ಮಪ್ಪ ಆಲ್ಕೂರು ಸೇರಿ ಅನೇಕರಿದ್ದರು.