ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಎಲ್ಲ ಬಡವರಿಗೆ ಶಾದಿಭಾಗ್ಯ ವಿಸ್ತರಿಸಿ

Rashmi Kasaragodu
Updated On : 12 Nov 2013, 11:59 am

ಕ.ಪ್ರ. ವಾರ್ತೆ   ರಾಯಚೂರು  ನ.11
ರಾಜ್ಯದ ಕಾಂಗ್ರೆಸ್ ಸರ್ಕಾರ ಪ್ರಕಟಿಸಿರುವ ಶಾದಿಭಾಗ್ಯ ಯೋಜನೆಯನ್ನು ಸಮಾಜದ ಎಲ್ಲ ಬಡವರ್ಗದವರಿಗೆ ವಿಸ್ತರಿಸುವಂತೆ ಹಾಗೂ ಪಡಿತರ ವ್ಯವಸ್ಥೆಯಲ್ಲಿ ಆಹಾರ ಧಾನ್ಯವನ್ನು ಎಪಿಎಲ್ ಕಾರ್ಡುದಾರರಿಗೂ ನೀಡುವಂತೆ ಒತ್ತಾಯಿಸಿ ಕೆಜೆಪಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ಧರಣಿ ನಡೆಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದ ಪ್ರಮುಖರು ಹಾಗೂ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಮನವಿ ಸಲ್ಲಿಸಿ, ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ಶಾದಿ ಭಾಗ್ಯ ಯೋಜನೆಯನ್ನು ಜಾರಿ ಮಾಡಿದ್ದು ಸ್ವಾಗತಾರ್ಹ. ಆದರೆ ಈ ಯೋಜನೆಯನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸಿದ್ದು ಸರಿಯಲ್ಲ ಎಂದು ದೂರಿದರು.
ಮತಬ್ಯಾಂಕ್ ಓಲೈಕೆ: ರಾಜ್ಯದ ಕಾಂಗ್ರೆಸ್ ಸರ್ಕಾರ ಮುಂದಿನ ದಿನಗಳಲ್ಲಿ ನಡೆಯುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಶಾದಿ ಭಾಗ್ಯ ಯೋಜನೆ ಘೋಷಿಸಿದೆ. ಆ ಮೂಲಕ ಮತಬ್ಯಾಂಕ್ ಓಲೈಕೆ ರಾಜಕಾರಣ ಮಾಡುತ್ತಿದೆ. ಇಂಥ ಸರ್ಕಾರದ ವರ್ತನೆಯನ್ನು ಪಕ್ಷ ಖಂಡಿಸುತ್ತದೆ ಎಂದು ಟೀಕಿಸಿದರು.
ಸಮಾಜದ ಎಲ್ಲ ವರ್ಗಗಳಲ್ಲಿ ಬಡವರಿದ್ದಾರೆ. ಅಂಥವರಿಗೆ ಸರ್ಕಾರದ ನೆರವಿನ ಅವಶ್ಯತೆಯಿದೆ. ಆದರೆ ರಾಜ್ಯ ಸರ್ಕಾರ ಕೇವಲ ಶಾದಿಭಾಗ್ಯ ಯೋಜನೆಯನ್ನು ಒಂದು ಜಾತಿಗೆ ನೀಡುವ ಮೂಲಕ ಕೋಮು ಸಾಮರಸ್ಯ ಹಾಳುಗೆಡುವವ ಕಾರ್ಯ ಮಾಡಿದೆ ಎಂದು ಆರೋಪಿಸಿದರು.
ಶಾದಿಭಾಗ್ಯ ಯೋಜನೆಯನ್ನು ಒಂದು ಜಾತಿಗೆ ಸೀಮಿತಗೊಳಿಸುವ ಮೂಲಕ ಇನ್ನುಳಿದ ಸಮಾಜದಲ್ಲಿನ ಬಡವರಿಗೆ ಸರ್ಕಾರ ಅನ್ಯಾಯ ಮಾಡಿದೆ. ಸಮಾಜದ ಎಲ್ಲ ವರ್ಗಗಳಲ್ಲಿ ಬಡವರಿದ್ದು, ಅಂಥ ಬಡ ಹೆಣ್ಣು ಮಕ್ಕಳಿಗೆ ದ್ರೋಹ ಬಗೆದಂತಾಗಿದೆ ಎಂದು ಟೀಕಿಸಿದರು.
ಅನ್ಯಾಯ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಪಡಿತರ ಆಹಾರ ಧಾನ್ಯ ವಿತರಣೆ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ ಮಾಡಿದ್ದು, ಎಪಿಎಲ್ ಕಾರ್ಡುದಾರರಿಗೆ ನೀಡಲಾಗುತ್ತಿದ್ದ ಆಹಾರ ಧಾನ್ಯ ಸ್ಥಗಿತಗೊಳಿಸಲಾಗಿದೆ.
 ಸಮಾಜದ ಬಡ ಮತ್ತು ಮಧ್ಯಮ ವರ್ಗದವರಿಗೆ ಈ ಮೂಲಕ   ಸರ್ಕಾರ ಅನ್ಯಾಯ ಮಾಡಿದೆ ಎಂದು ದೂರಿದರು.
ಈ ಹಿಂದೆ ಕೆಜೆಪಿ ನಾಯಕ ಯಡಿಯೂರಪ್ಪ ರಾಜ್ಯದ ಸಿಎಂ ಆಗಿದ್ದ ಸಂದರ್ಭದಲ್ಲಿ ಎಲ್ಲ ಸಮಾಜದ, ವರ್ಗಗಳ ಜನರಿಗೆ ಅನುಕೂಲವಾಗುವಂಥ ಯೋಜನೆಗಳನ್ನು ಪ್ರಕಟಿಸಿ ಎಲ್ಲರಿಗೂ ಪ್ರಯೋಜನ ದೊರೆಯುವಂತೆ ಮಾಡಿದ್ದರು. ಆದರೆ ಸದ್ಯದ ಸರ್ಕಾರ ಕೇವಲ ಒಂದೇ ಜಾತಿಗೆ ಸೀಮಿತಗೊಳಿಸಿ ಯೋಜನೆ ಪ್ರಕಟಿಸುತ್ತಿರುವುದು ಸರಿಯಲ್ಲ ಎಂದು ಆರೋಪಿಸಿದರು.
ಕ್ರಮ ಕೈಗೊಳ್ಳಿ: ಕೂಡಲೇ ರಾಜ್ಯ ಸರ್ಕಾರ ಶಾದಿ ಭಾಗ್ಯ ಯೋಜನೆಯನ್ನು ಸಮಾಜದ ಎಲ್ಲ ಬಡವರಿಗೆ ವಿಸ್ತರಿಸಬೇಕು. ಪಡಿತರ ವ್ಯವಸ್ಥೆಯಡಿ ಎಪಿಎಲ್ ಕಾರ್ಡುದಾರರಿಗೂ ಪಡಿತರ ಆಹಾರ ಧಾನ್ಯ ವಿತರಣೆಗೆ ಕ್ರಮ ಕೈಗೊಳ್ಳಬೇಕು.
 ಬಿಪಿಎಲ್ ಕಾರ್ಡುದಾರರಿಗೆ ದೊರೆಯುವಂತೆ ಆಹಾರಧಾನ್ಯ ಹಂಚಿಕೆ ಮಾಡಬೇಕೆಂದು ಆಗ್ರಹಿಸಿದರು. ಈ ನಿಟ್ಟಿನಲ್ಲಿ ರಾಜ್ಯಪಾಲರು ಸರ್ಕಾರಕ್ಕೆ ಸೂಚನೆ ನೀಡಿ ಬಡವರಿಗೆ ಅನುಕೂಲವಾಗುವ ಎಲ್ಲ ಯೋಜನೆಗಳನ್ನು ಎಲ್ಲರಿಗೂ ದೊರೆಯುವಂತೆ ಮಾಡಲು ತಾಕೀತು ಮಾಡುವಂತೆ ಕಾರ್ಯಕರ್ತರು ಒತ್ತಾಯಿಸಿದರು.
ಧರಣಿಯಲ್ಲಿ ಕೆಜೆಪಿ ಜಿಲ್ಲಾಧ್ಯಕ್ಷ ವೆಂಕನಗೌಡ ಮಲ್ಕಾಪುರ, ನಾಯಕರಾದ ಬಸವರಾಜ ಕಳಸ, ಶಶಿರಾಜ ಮಸ್ಕಿ, ಶಿವುಕುಮಾರ್ ಪೊಲೀಸ್ ಪಾಟೀಲ್, ಮಲ್ಲೇಶ ನಾಯಕ, ಮಲ್ಲಿಕಾರ್ಜುನ, ವೆಂಕಟಾಪುರ ರಮೇಶ್, ವೆಂಕನಗೌಡ ತಡ್ಕಲ್, ನಾಗರಾಜಗೌಡ ಚಿಕ್ಕಸೂಗೂರು ಸೇರಿ ಅನೇಕರು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement