'ಕನಕದಾಸರು ಹಾಲಷ್ಟೇ ಪವಿತ್ರರು'
ಸಿಂಧನೂರು: ವಿಶ್ವಮಾನವ ಕನಕದಾಸರು ಹಾಲಿನಷ್ಟೇ ಪವಿತ್ರರು. ಅವರು ತಮ್ಮ ಕೀರ್ತನೆಗಳಿಂದ ಸಮಾಜವನ್ನು ತಿದ್ದುವುದರ ಜೊತೆ- ಜೊತೆಗೆ ಜನಜಾಗೃತಿ ಮಾಡಿ, ಜಗತ್ತಿಗೆ ಒಳಿತನ್ನು ಬಯಸಿದವರು. ಅವರ ತತ್ವದಾರ್ಶಗಳನ್ನು ಬದುಕಿನೊಂದಿಗೆ ಅಳವಡಿಸಿಕೊಳ್ಳಬೇಕೆಂದು ಗುತ್ತೇದಾರ ಕಟ್ಟೆಪ್ಪ ಗುಂಜಳ್ಳಿ ಕರೆ ನೀಡಿದರು.
ನಗರದ ಕನಕ ಸಂಸ್ಕಾರ ಬಳಗದ ಕಾರ್ಯಾಲಯದಲ್ಲಿ ಕನಕ ಜಯಂತ್ಯುತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಕನಕ ಜಯಂತಿಯನ್ನು ಎಲ್ಲರೂ ಒಗ್ಗಟ್ಟಿನಿಂದ ಕೂಡಿಕೊಂಡು ನ.20 ರಂದು ತಾಲೂಕಾಡಳಿತದ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿಜೃಂಭಣೆಯಿಂದ ಆಚರಿಸೋಣ ಎಂದರು.
ಸೌಹಾರ್ದತೆಯಿಂದ ಬಾಳೋಣ: ಮುಖಂಡ, ಸಾಹಿತಿ ನಾಗರಾಜ ಆದೋನಿ ಕನಕದಾಸರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಂತರ ಮಾತನಾಡಿ, ಕನಕದಾಸರ ಜಯಂತಿಯನ್ನು ಉತ್ಸಾಹದಿಂದ ಆಚರಿಸಿ, ಸಮಾಜದಲ್ಲಿ ಸಹಕಾರ ಸೌಹಾರ್ದತೆಯಿಂದ ಬಾಳೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನಕ ಗುರುಪೀಠದ ತಾಲೂಕಾಧ್ಯಕ್ಷ ಟಿ. ಹನುಮಂತಪ್ಪ, ಮುಖಂಡರಾದ ಮಾಡಗಿರಿ ಮಲ್ಲಪ್ಪ, ನಿವೃತ್ತ ಕಂಟ್ರೋಲರ್ ಸಸ್ಸಣ್ಣ ಗೌಡನಭಾವಿ, ಎಸ್.ಬಿ. ಸಣ್ಣತಿಮ್ಮಯ್ಯ, ಟಿ. ಪರಸಪ್ಪ, ಅಮ್ಮಣ್ಣ ಕೋಣದ, ಬನ್ನದ ವೆಂಕೋಬ, ಜೆ.ಪಿ. ಈರಣ್ಣ ಗಿಣಿವಾರ, ಪಂಪಣ್ಣ ನಂಜಲದಿನ್ನಿ, ಮಾಡಗಿರಿ ಈರಪ್ಪ, ಕಿಷ್ಠಪ್ಪ ರಾಠೋಡ್, ಎಸ್.ಬಿ. ತಿಮ್ಮಣ್ಣ ವಾಲೇಕಾರ, ಕಟಾಲಿ ದುರುಗಪ್ಪ, ಶಶಿಧರ ಭಂಗಿ, ವೀರೇಶ ಭಂಗಿ, ಭಂಗಿ ಯಂಕಪ್ಪ ದೇವರಮನಿ, ಬಿ. ಅಮರೇಶ, ಭಂಗಿ ರಾಘವೇಂದ್ರ, ದುಡದುಡ್ಡಿ ಹನುಮಂತಪ್ಪ, ತಿಪ್ಪಣ್ಣ ಮಲ್ಲಿಗೆಮುಡಿ, ಬಾದರ್ಲಿ ಮಂಜುನಾಥ, ರಾಚಪ್ಪ ಹಾಗೂ ಕರವೇ ತಾಲೂಕಾಧ್ಯಕ್ಷ ಅಜಿತ್ ಓಸ್ತವಾಲ್ ಇದ್ದರು.
ವರ್ತೂರು ಪ್ರಕಾಶ ಯುವಸೇನೆಯ ತಾಲೂಕಾಧ್ಯಕ್ಷ ಬಿ. ಹನುಮೇಶ ಸ್ವಾಗತಿಸಿದರು. ಕನಕ ಸಂಸ್ಕಾರ ಬಳಗದ ಸಂಚಾಲಕ ಬಸವರಾಜ ಗೋಡಿಹಾಳ ಪ್ರಾಸ್ತಾವಿಕ ಮಾತನಾಡಿದರು. ಕರ್ನಾಟಕ ಹಾಲುಮತ ಜಾಗೃತಿ ಪ್ರತಿಷ್ಠಾನದ ತಾಲೂಕಾಧ್ಯಕ್ಷ ಭಂಗಿ ಬಸವರಾಜ ನಿರೂಪಣೆ ಮಾಡಿದರು.
ಸಾಧಕರಿಗೆ ಸನ್ಮಾನ: ಬಳಗದವತಿಯಿಂದ ಜಯಂತ್ಯುತ್ಸವದ ಅಂಗವಾಗಿ ಡಿಸೆಂಬರ್ ಮೊದಲ ವಾರದಲ್ಲಿ ಕನಕದಾಸರ ಕುರಿತು ವಿಚಾರ ಸಂಕಿರಣ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದೆಂದು ಸಂಚಾಲಕ ಬಸವರಾಜ ಗೋಡಿಹಾಳ ತಿಳಿಸಿದ್ದಾರೆ.