ಮಟ್ಕಾ ಜೂಜಾಟ, ಹಲವರ ಬಂಧನ
ಸಿಂಧನೂರು: ನಗರದ ಸುಕಾಲಪೇಟೆ ನಂಜುಂಡಯ್ಯಸ್ವಾಮಿ ಬಿಲ್ಡಿಂಗ್ ಹಿಂಭಾಗದಲ್ಲಿ ಜೂಜಾಟ ಆಡುತ್ತಿದ್ದ ಹಲವರನ್ನು ಪಿಎಸ್ಐ ಬಾಳನಗೌಡ ಬಂಧಿಸಿದರು.
ಆರೋಪಿಗಳಾದ ರಂಗಪ್ಪ, ಹೊಸಗೇರಪ್ಪ, ಬಸವರಾಜ ಬಾದರ್ಲಿ, ಭೀಮಣ್ಣ ಬೇವಿನಾಳ, ದುರುಗಪ್ಪ, ಭೀಮಣ್ಣ ಭಂಗಿ, ಬಸವರಾಜ ದೇವರಮನಿ, ದುರುಗಪ್ಪ, ಶಿವಪುತ್ರಪ್ಪ ಅವರನ್ನು ಬಂಧಿಸಿ 53 ಸಾವಿರ ಹಣವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗ್ರಾಮೀಣ ಠಾಣೆ, ಬಳಗಾನೂರು ಠಾಣೆ ಮತ್ತು ತುರ್ವಿಹಾಳ ಠಾಣೆ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿಯೂ ರಾಜಾ ರೋಷವಾಗಿ ಜೂಜಾಟ ನಡೆಯುತ್ತಿದೆ ಎಂದು ಗೊತ್ತಾಗಿದೆ. ಹಲವು ಕಡೆಗಳಲ್ಲಿ ಮಟ್ಕಾ ಅಡ್ಡೆಗಳನ್ನೇ ಸ್ಥಾಪಿಸಿಕೊಂಡು ವ್ಯವಹಾರ ಮಾಡುತ್ತಿದ್ದಾರೆಂದು ತಿಳಿದುಬಂದಿದೆ. ಗಾಂಧೀನಗರ, ಭೀಮರಾಜಾ ಕ್ಯಾಂಪ್, ಜವಳಗೇರಾ ಸೇರಿದಂತೆ ನಗರದ ಕೆಲ ಪ್ರತಿಷ್ಠಿತರ ಕಟ್ಟಡಗಳಲ್ಲಿಯೂ ಜೂಜಾಟ ನಡೆಯುತ್ತಿದ್ದು, ಪೊಲೀಸರು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಪ್ರತಿನಿತ್ಯ ಜೂಜಾಟ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಮೌನವಾಗಿದೆ ಎಂದು ಸಾರ್ವಜನಿಕರು ಆಪಾದಿಸಿದ್ದಾರೆ.