ಸ್ನಾತಕೋತ್ತರ ಕೇಂದ್ರದ ಅವ್ಯವಸ್ಥೆ: ಪ್ರತಿಭಟನೆ
ರಾಯಚೂರು: ತಾಲೂಕಿನ ಯರಗೇರಾದಲ್ಲಿರುವ ಗುಲ್ಬರ್ಗ ವಿವಿಯ ಸ್ನಾತಕೋತ್ತರ ಕೇಂದ್ರದ ವಸತಿ ನಿಲಯದ ಅವ್ಯವಸ್ಥೆ ಖಂಡಿಸಿ ಸೋಮವಾರ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದರು.
ಕಳೆದ ಅನೇಕ ದಿನಗಳಿಂದ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಗುಲ್ಬರ್ಗ ವಿವಿ ಆಡಳಿತ ಊಟದ ಸೌಲಭ್ಯ ಕಲ್ಪಿಸಿಲ್ಲ. ಅದರಿಂದಾಗಿ ವಿದ್ಯಾರ್ಥಿಗಳು ಹೊರಗಿನ ಆಹಾರ ಸೇವಿಸುವಂತಾಗಿದೆ. ವಸತಿ ನಿಲಯಕ್ಕೆ ಅಡುಗೆ ತಯಾರಕರನ್ನು ನೇಮಿಸುವಂತೆ ಆಡಳಿತಕ್ಕೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ವಸತಿ ನಿಲಯದಲ್ಲಿ ಇದುವರೆಗೆ ಕೆಲಸ ಮಾಡುತ್ತಿದ್ದ ಇಬ್ಬರು ಸಿಬ್ಬಂದಿಯೂ ಕೆಲಸ ತ್ಯಜಿಸಿದ್ದು, ಅದರಿಂದ ವಸತಿ ನಿಲಯ ಅವ್ಯವಸ್ಥೆಯ ಗೂಡಾಗಿದೆ. ವಿದ್ಯಾರ್ಥಿಗಳೇ ಅಡುಗೆ ಮಾಡಿಕೊಂಡು ಊಟ ಮಾಡುವಂಥ ಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಆಡಳಿತದ ನಿರ್ಲಕ್ಷ್ಯದ ಧೋರಣೆಯನ್ನು ವಿದ್ಯಾರ್ಥಿಗಳು ತೀವ್ರವಾಗಿ ಖಂಡಿಸಿದರು.
ಸ್ನಾತಕೋತ್ತರ ಕೇಂದ್ರವು ಕಾರ್ಯಾರಂಭ ಮಾಡಿ ಎರಡು ತಿಂಗಳಾದರೂ ಇದುವರೆಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿಲ್ಲ. ಹಾಗಾಗಿ ಅನೇಕ ವಿಷಯಗಳ ಬೋಧನೆ ಆರಂಭವಾಗಿಲ್ಲ. ಗುಲ್ಬರ್ಗ ವಿವಿ ಆಡಳಿತ ಕೂಡಲೇ ಯರಗೇರಾದಲ್ಲಿರುವ ರಾಯಚೂರು ಸ್ನಾತಕೋತ್ತರ ಕೇಂದ್ರದಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಚಂದ್ರು, ಸಾಬಣ್ಣ, ಅಮರೇಶ್, ಸಿದ್ದಪ್ಪ, ದೇವಪ್ಪ, ಆನಂದ, ಹುಲಿಗೆಪ್ಪ ಸೇರಿ ಅನೇಕರಿದ್ದರು.