ತಡೆಗೋಡೆ ಪೂರ್ಣಗೊಳಿಸಲು ಮನವಿ
ಲಿಂಗಸ್ಗೂರು: ತಾಲೂಕಿನ ಗೌಡೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹತ್ತಿರದ ತಡೆಗೋಡೆ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯಿಸಿ ಗ್ರಾಮಸ್ಥರು ತಾಪಂ ಕಚೇರಿ ಸಿಬ್ಬಂದಿ ಚನ್ನಬಸವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಗೌಡೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹತ್ತಿರ ನಿರ್ಮಿಸುತ್ತಿರುವ ತಡೆಗೋಡೆ ಅಪೂರ್ಣಗೊಂಡ ಪರಿಣಾಮ ಗ್ರಾಮದ ಕೊಳಚೆ ನೀರು ಶೇಖರಣೆಗೊಳ್ಳುತ್ತದೆ.
ಮಳೆ ಬಂದಾಗ ಗ್ರಾಮದ ಆರಾಧ್ಯ ದೈವ ವೀರಭದ್ರೇಶ್ವರ ದೇವಸ್ಥಾನ ಮತ್ತು ಶಾಲೆ ಒಳಗೆ ನೀರು ಬರುತ್ತದೆ.
ಇದರಿಂದ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಈ ಕುರಿತು ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
ಕೂಡಲೇ ವಾರದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲದಿದ್ದ ತಾಪಂ ಕಚೇರಿ ಮುಂದೆ ಅನಿರ್ಧಿಷ್ಟ ಧರಣಿ ನಡೆಸಲಾಗುವುದೆಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮದ ವೀರಭದ್ರಪ್ಪ ನಾಯಕ, ಹನುಮಂತ ನೆಲೋಗಿ, ಬಸವರಾಜ ನಾಯಕ, ಗೌರಮ್ಮ ಕೋಳೂರು, ಈರಮ್ಮ ಕಡ್ಡೋಣಿ, ಹನುಮಮ್ಮ ಕಡ್ಡೋಣಿ, ರುದ್ರಮ್ಮ, ಶಿವಮ್ಮ ಕಡ್ಡೋಣಿ, ರಾಚಮ್ಮ, ಶಿವಗಂಗಮ್ಮ, ಬಸಮ್ಮ ಗಣಾಚಾರಿ, ಮಹಾದೇವಮ್ಮ, ಪಾರ್ವತೆಮ್ಮ, ಸಿದ್ಧಮ್ಮ, ರತ್ನಮ್ಮ, ಅನ್ನಪೂರ್ಣ, ದೇವಮ್ಮ ಸೇರಿದಂತೆ ಇನ್ನಿತರರು ಇದ್ದರು.