ತಾಪಂ ಕಾಂಗ್ರೆಸ್ ಸದಸ್ಯರಿಗೆ ವಿಪ್ ಜಾರಿ
ಮುದಗಲ್: ತಾಲೂಕಿನ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ತಾಲೂಕು ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ವಿರುದ್ಧ ಇಂದು ಅವಿಶ್ವಾಸ ನಿರ್ಣಯ ಸಭೆಯನ್ನು ಕರೆಯಲಾಗಿದೆ.
ಅಧ್ಯಕ್ಷ- ಉಪಾಧ್ಯಕ್ಷರು ಕಾಂಗ್ರೆಸ್ ಪಕ್ಷದವರಿದ್ದುದರಿಂದ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಮತ್ತು ಕಾಂಗ್ರೆಸ್ ನ ಕೆಲ ಸದಸ್ಯರು ಸೇರಿ ಅಧ್ಯಕ್ಷೆ ಲಲಿತಮ್ಮ ಶಿವನಗೌಡರ ವಿರುದ್ಧ ಅವಿಶ್ವಾಸಕ್ಕೆ ಮುಂದಾಗಿದ್ದು ಸಹಾಯಕ ಆಯುಕ್ತರಿಗೆ ಮನವಿ ಮಾಡಿದ್ದರು. ಇಂದು ಸಭೆಗೆ ದಿನಾಂಕ ನಿಗದಿಪಡಿಸಿದ್ದರಿಂದ ಅವಿಶ್ವಾಸ ಸಭೆಯನ್ನು ವಿಫಲಗೊಳಿಸುವಂತೆ ಕಾಂಗ್ರೆಸ್ ಅಧ್ಯಕ್ಷರು ಸದಸ್ಯರಿಗೆ ವಿಪ್ ಜಾರಿ ಮಾಡಿದ್ದಾರೆ.
ಕಾಂಗ್ರೆಸ್ ಸದಸ್ಯರ ಮನೆಗೆ ತೆರಳಿದ ಮುದಗಲ್ ಬ್ಲಾಕ್ ಅಧ್ಯಕ್ಷ ಮುನ್ವರಖಾನ್, ಎಸ್ಸಿ ಘಟಕದ ಅಧ್ಯಕ್ಷ ರಾಮಣ್ಣ ಹಿರೇಮನಿ, ತಾಪಂ ಸದಸ್ಯರಾದ ಗುರಬಾಯಿ ವಿರುಪಾಕ್ಷಪ್ಪ ಸಾಹುಕಾರ ಲೆಕ್ಕಿಹಾಳ, ರುದ್ರಗೌಡ ಪಾಟೀಲ್ ತುರಡಗಿ, ಬಸವರಾಜ ನಾಯಕ ನಾಗಲಾಪುರ ಇವರ ಮನೆ ಬಾಗಿಲಿಗೆ ವಿಪ್ ಪತ್ರವನ್ನು ಅಂಟಿಸಿದ್ದಾರೆ. ಸಭೆಗೆ ಹಾಜರಾಗದಂತೆ ವಿಪ್ನಲ್ಲಿ ಸೂಚಿಸಲಾಗಿದೆ.