ದೇಶದ ಭದ್ರತೆ; ನಮೋ ಆಯ್ಕೆ ಅನಿವಾರ್ಯ
ಕ.ಪ್ರ. ವಾರ್ತೆ ರಾಯಚೂರು ನ.12
ವಿದೇಶಗಳಿಂದ ಭಾರತಕ್ಕೆ ಅಪಾಯ ಕಾದಿದೆ. ದೇಶದ ಗಡಿ ಕಾಯುವ ಸೈನಿಕರ ಹತ್ಯೆಯಾಗುತ್ತಿದ್ದರೂ ಕೇಂದ್ರ ಸರ್ಕಾರ ಕೈಕಟ್ಟಿ ಕುಳಿತಿದೆ. ವಿದೇಶಿ ಮಹಿಳೆ ಸೋನಿಯಾಗಾಂಧಿ ಅವರಿಂದ ದೇಶದ ಭದ್ರತೆ ನಿರೀಕ್ಷೆ ತಪ್ಪಾದೀತು. ಸುಭದ್ರ ದೇಶಕ್ಕಾಗಿ ಸದ್ಯ ಬಿಜೆಪಿಯ ನಾಯಕ ನರೇಂದ್ರ ಮೋದಿ ಪ್ರಧಾನಿಯಾಗುವುದು ಅನಿವಾರ್ಯ ಎಂದು ಮಾಜಿ ಸಚಿವ ಶಿವನಗೌಡ ನಾಯಕ ಹೇಳಿದರು.
ನಗರದ ರಂಗಮಂದಿರದಲ್ಲಿ ಮಂಗಳವಾರ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ವಿಶೇಷ ಕಾರ್ಯಕಾರಿಣಿಯಲ್ಲಿ ಮಾತನಾಡಿ, ದೇಶದ ಗಡಿ ಕಾಯುವವರು ಪ್ರಾಣತ್ಯಾಗ ಮಾಡುತ್ತಿದ್ದರೂ ಕೇಂದ್ರ ಸರ್ಕಾರಕ್ಕೆ ಯೋಧರ ಜೀವದ ಬಗ್ಗೆ ಕಾಳಜಿಯಿಲ್ಲ ಎಂದು ಟೀಕಿಸಿದರು.
ಸರ್ಕಾರದಿಂದಲೇ ಸಾಮರಸ್ಯ ಹಾಳು: ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ತಿಪ್ಪರಾಜು ಹವಾಲ್ದಾರ್ ಮಾತನಾಡಿ, ರಾಜ್ಯ ಸರ್ಕಾರ ಶಾದಿ ಭಾಗ್ಯ ಯೋಜನೆ ಜಾರಿ ಮೂಲಕ ಮುಸ್ಲಿಂ ಸಮುದಾಯದವರ ತುಷ್ಟೀಕರಣಕ್ಕೆ ಮುಂದಾಗಿದೆ. ಆದರೆ ಅನೇಕ ಮುಸ್ಲಿಂ ನಾಯಕರು ಸರ್ಕಾರದ ಯೋಜನೆಯ ಬಗ್ಗೆಯೇ ಬೇಸರ ವ್ಯಕ್ತಪಡಿಸಿದ್ದಾರೆ. ಸರ್ಕಾರವು ಸಮಾಜದಲ್ಲಿ ಸಾಮರಸ್ಯ ಹಾಳು ಮಾಡುವ ಕಾರ್ಯ ಮಾಡಲು ಮುಂದಾಗಿದೆ ಎಂದು ಟೀಕಿಸಿದರು.
ಕುರ್ಚಿಗೆ ಕುತ್ತು: ನ.17ರಂದು ಬೆಂಗಳೂರಿನಲ್ಲಿ ನಡೆಯುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ರ್ಯಾಲಿ ನಂತರದಲ್ಲಿ ರಾಜ್ಯದ ರಾಜಕೀಯದಲ್ಲಿ ಭಾರೀ ಏರುಪೇರುಗಳಾಗಲಿವೆ. ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ಅಲುಗಾಡಲಿದೆ ಎಂದ ಅವರು, ಯುವಕರೆಲ್ಲರೂ ಮೋದಿ ಅವರ ಪರ ನಿಂತು ದೇಶದ ರಕ್ಷಣೆಗೆ ಮುಂದಾಗುವಂತೆ ಮನವಿ ಮಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ್, ಮುಖಂಡರಾದ ತ್ರಿವಿಕ್ರಮ್ ಜೋಷಿ, ಅಶೋಕ ಗಸ್ತಿ, ಬಂಡೇಶ ವಲ್ಕಂದಿನ್ನಿ, ಅಮರೇಶ್ ಹೊಸಮನಿ, ಆರ್.ತಿಮ್ಮಯ್ಯ, ನರಸಪ್ಪ ಯಕ್ಲಾಸಪುರ ಸೇರಿ ಅನೇಕರಿದ್ದರು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಬಿಜೆಪಿ ಜಿಲ್ಲಾ ಯುವಮೋರ್ಚಾದ ನೂರಾರು ಕಾರ್ಯಕರ್ತರು ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡಿದ್ದರು.