ಮನವಿಗೆ ಬೆಲೆಯಿಲ್ಲವೇ?
ಮಸ್ಕಿ: ಸರ್ಕಾರದ ಅನ್ನಭಾಗ್ಯ ಯೋಜನೆಯ ಅಕ್ರಮಗಳು ಜಿಲ್ಲಾದ್ಯಂತ ನಡೆದಿದ್ದರೂ ಸಿಂಧನೂರು ತಾಲೂಕಿಗೆ ತನಿಖೆ ಸೀಮಿತಗೊಳಿಸಲಾಗಿದೆ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ.
ಲಿಂಗಸ್ಗೂರು ತಾಲೂಕಿನಲ್ಲಿ 154 ನ್ಯಾಯಬೆಲೆ ಅಂಗಡಿಗಳಿದ್ದು ಅನ್ನಭಾಗ್ಯ, ಅಕ್ಷರದಾಸೋಹ, ಅಂಗನವಾಡಿ ಕೇಂದ್ರಗಳಿಗೆ ಪಡಿತರ ಅಕ್ಕಿಯನ್ನು ಸರಬರಾಜು ಮಾಡಲಾಗುತ್ತಿದೆ. ಲಿಂಗಸ್ಗೂರು ಆಹಾರ ನಿಗಮದ ಇಲಾಖೆ ಶಿರಸ್ತೇದಾರರು ಹಾಗೂ ಗೋದಾಮು ವ್ಯವಸ್ಥಾಪಕರು ಯೋಜನೆಯ ಅಕ್ರಮದಲ್ಲಿ ಶಾಮೀಲಾಗಿದ್ದಾರೆ. ಈ ಬಗ್ಗೆ ತನಿಖೆ ಮಾಡಬೇಕೆಂದು ಲಿಂಗಸ್ಗೂರು ತಹಸೀಲ್ದಾರ ಹಾಗೂ ಸಹಾಯಕ ಆಯುಕ್ತರಲ್ಲಿ ಮನವಿ ಮಾಡಿದ್ದರೂ, ತನಿಖೆ ನಡೆಸಿಲ್ಲ ಎಂದು ದೂರಿದ್ದಾರೆ.
ಗುರುಗುಂಟಾ, ಹಡಗಲಿ, ನಾಗಲಾಪೂರುದಲ್ಲಿನ ನ್ಯಾಯಬೆಲೆ ಅಂಗಡಿಗಳಲ್ಲಿ 30 ಕೆಜಿ ಬದಲಿಗೆ ಪಡಿತರದಾರರಿಗೆ 20 ರಿಂದ 22 ಕೆಜಿ ಅಕ್ಕಿ ನೀಡಲಾಗುತ್ತಿದೆ. ಕೂಡಲೇ ಜಿಲ್ಲಾಧಿಕಾರಿ ಸಮಗ್ರ ತನಿಖೆಗೆ ಒಳಪಡಿಸಬೇಕೆಂದು ಹನುಮಂತಪ್ಪ ವೆಂಕಟಾಪೂರು, ಮಲ್ಲಯ್ಯ ಬಳ್ಳಾ, ಸುರೇಶ ಅಂತರಗಂಗಿ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.