ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವಿಜಯದಾಸರ ಕ್ಷೇತ್ರದಲ್ಲಿ ಗುರುರಾಜರ ಬೃಂದಾವನ

Rashmi Kasaragodu
Updated On : 13 Nov 2013, 12:06 pm

ಕ.ಪ್ರ. ವಾರ್ತೆ  ರಾಯಚೂರು  ನ.12
ಮಾನವಿ ತಾಲೂಕಿನ ಚೀಕಲಪರ್ವಿಯ ಶ್ರೀವಿಜಯದಾಸರ ಕ್ಷೇತ್ರದಲ್ಲಿ ಮುಂದಿನ ವರ್ಷದ ವಿಜಯದಾಸರ ಆರಾಧನೆಗೂ ಮುನ್ನವೇ ಮಂತ್ರಾಲಯದ ರಾಘವೇಂದ್ರಸ್ವಾಮಿಗಳ ಮೃತ್ತಿಕಾ ಬೃಂದಾವನ ಸ್ಥಾಪನೆ ಮಾಡಲಾಗುತ್ತದೆ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀಸುಯತೀಂದ್ರ ತೀರ್ಥರು ಹೇಳಿದರು.
ಮಾನವಿ ತಾಲೂಕಿನ ಚೀಕಲಪರ್ವಿ ಗ್ರಾಮದಲ್ಲಿ ಸೋಮವಾರ ಸಂಜೆ ವಿಜಯದಾಸರ ಆರಾಧನಾ ಮಹೋತ್ಸವದ ಸಮಾರಂಭದಲ್ಲಿ ಅನುಗ್ರಹ ಸಂದೇಶ ನೀಡಿ, ಶ್ರೀವಿಜಯದಾಸರಿದ್ದ ಪವಿತ್ರ ಸ್ಥಳದಲ್ಲಿ ರಾಯರ ಬೃಂದಾವನ ಸ್ಥಾಪಿಸಲಾಗುತ್ತದೆ. ಆ ಮೂಲಕ ದಾಸರ ದರ್ಶನಕ್ಕೆ ಆಗಮಿಸುವ ಎಲ್ಲ ಭಕ್ತರಿಗೆ ವಿಶೇಷ ಪೂಜೆ ಕೈಂಕರ್ಯ ಕೈಗೊಳ್ಳಲು ಅನುಕೂಲ ಕಲ್ಪಿಸಲಾಗುತ್ತದೆ ಎಂದರು.
ನದಿ ದಡದಲ್ಲೇ ಸ್ಥಾಪನೆ: ತುಂಗಭದ್ರಾ ನದಿ ದಡದಲ್ಲಿಯೇ ಚೀಕಲಪರ್ವಿ ಗ್ರಾಮವಿರುವುದರಿಂದ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಪವಿತ್ರ ಸ್ನಾನ, ವಸತಿಗೆ ಸೂಕ್ತ ಸೌಲಭ್ಯ ಕಲ್ಪಿಸಲು ಶ್ರೀಮಠದಿಂದ ವ್ಯವಸ್ಥೆ ಮಾಡಲಾಗುತ್ತದೆ. ವಿಜಯದಾಸರ ಭಕ್ತರು, ಗ್ರಾಮದ ಜನರು ಒಟ್ಟಾಗಿ ಸೇರಿ ದಾಸರ ಆರಾಧನಾ ಮಹೋತ್ಸವವನ್ನು ಮುಂದಿನ ದಿನಗಳಲ್ಲೂ ಸಂಭ್ರಮ, ವಿಜೃಂಭಣೆಯಿಂದ ಆಚರಿಸುವಂತಾಗಬೇಕಿದೆ ಎಂದರು.
ಪ್ರಶಸ್ತಿ ಪ್ರದಾನ: ಶ್ರೀವಿಜಯದಾಸರ ಆರಾಧನಾ ಮಹೋತ್ಸವದ ಅಂಗವಾಗಿ ಮೊದಲ ಬಾರಿಗೆ ವಿಜಯ ವಿಠ್ಠಲ ಪ್ರಶಸ್ತಿಯನ್ನು ರಾಯಚೂರಿನ ಹಿರಿಯ ವಕೀಲ ಡಿ.ಸುರೇಶ್ ಅವರಿಗೆ ಪ್ರದಾನ ಮಾಡಲಾಯಿತು. ಈ ಸಂದರ್ಭ ಶ್ರೀಪಾದಂಗಳವರ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಸುಮೀಂದ್ರಾಚಾರ್ಯ ಹಾಗೂ ಎಲ್.ಆರ್. ದ್ವಾರಕನಾಥ, ಎಸ್.ಕೆ. ಪುರೋಹಿತ್ ವಕೀಲರು, ಸಂಪ್ರತಿ ಮೋಹನ್, ವಿಜಯಕುಮಾರ ಸೇರಿ ನೂರಾರು ಭಕ್ತರು ಉಪಸ್ಥಿತರಿದ್ದರು.
ಉತ್ಸವ: ಶ್ರೀವಿಜಯದಾಸರ ಮಧ್ಯಾರಾಧನೆ ಸಂದರ್ಭ ಮಂಗಳವಾರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀದಾಸರಾಯರ ಪಲ್ಲಕ್ಕಿ ಉತ್ಸವ ನಡೆಯಿತು. ವಿವಿಧೆಡೆಯಿಂದ ಆಗಮಿಸಿದ್ದ ಭಜನಾ ಮಂಡಳಿಯವರು ಭಜನೆ ಸಂಕೀರ್ತನೆ ನಡೆಸಿದರು. ವಿದ್ವಾಂಸರಿಂದ ಪ್ರವಚನ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಗೊರೇಬಾಳ ಹನುಮಂತ್ರಾಯರು ಬರೆದ ವೇಣುಗೋಪಾಲ ವಿಠಲ ದಾಸರ ಸುಳಾದಿ ಪದಗಳ ಕುರಿತ ಗ್ರಂಥ ಶ್ರೀಗಳು ಬಿಡುಗಡೆ ಮಾಡಿದರು.
ವಿವಿಧ ಧಾರ್ಮಿಕ ಕಾರ್ಯಕ್ರಮ: ಮಾನವಿ ತಾಲೂಕಿನ ಚೀಕಲಪರ್ವಿ ಗ್ರಾಮದಲ್ಲಿ ಶ್ರೀ ವಿಜಯದಾಸಾರಾರ್ಯರ ಆರಾಧನಾ ಮಹೋತ್ಸವದ ಅಂಗವಾಗಿ ಸೋಮವಾರ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು.
ಪೂರ್ವಾರಾಧನೆ ಅಂಗವಾಗಿ ಬೆಳಗ್ಗೆ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ಸಾಮೂಹಿಕ ವಿಜಯ ಕವಚ ಪಾರಾಯಣ, ನರಸಿಂಹದೇವರ, ಪ್ರಾಣದೇವರ, ರಾಯರ, ವಿಜಯದಾಸರಿಗೆ ವಿಶೇಷ ಪಂಚಾಮೃತ ಅಭಿಷೇಕ ಹಾಗೂ ಪೂಜೆ ನೆರವೇರಿಸಲಾಯಿತು.
ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಸೋಮವಾರ ರಾತ್ರಿ ಗ್ರಾಮಕ್ಕೆ ಆಗಮಿಸಿದ ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀಸುಯತೀಂದ್ರ ತೀರ್ಥರು ಹಾಗೂ ಕಿರಿಯಶ್ರೀಗಳಾದ ಸುಬುಧೇಂದ್ರ ತೀರ್ಥರನ್ನು ನೂರಾರು ಭಕ್ತರು ಭವ್ಯ ಮೆರವಣಿಗೆಯಲ್ಲಿ ವಿಜಯದಾಸರ ದೇವಸ್ಥಾನಕ್ಕೆ ಕರೆತಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement