ಶಾದಿಭಾಗ್ಯ ವಿಸ್ತರಣೆಗೆ ಆಗ್ರಹಿಸಿ ಕೆಜೆಪಿ ಪ್ರತಿಭಟನೆ
ದೇವದುರ್ಗ: ಶಾದಿಭಾಗ್ಯ ಯೋಜನೆಯನ್ನು ಎಲ್ಲ ಬಡವರಿಗೆ ವಿಸ್ತರಿಸುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಕರ್ನಾಟಕ ಜನತಾ ಪಾರ್ಟಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ತಹಸೀಲ್ದಾರ್ರಿಗೆ ಮನವಿ ಸಲ್ಲಿಸಿ, ಶಾದಿಭಾಗ್ಯ ಯೋಜನೆಯ ಜಾರಿಯಲ್ಲಿ ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ಆತುರದ ನಿರ್ಧಾರ ಕೈಗೊಂಡಿದ್ದಾರೆ. ಕೇವಲ ಒಂದು ಜಾತಿಗೆ ಯೋಜನೆಯನ್ನು ಮೀಸಲಾಗಿರಿಸಿರುವುದು ಸಮಾಜದಲ್ಲಿ ಸಾಮರಸ್ಯ ಹಾಳು ಮಾಡುವ ಕ್ರಮವಾಗಿದೆ ಎಂದು ಆರೋಪಿಸಿದರು.
ಮಾಜಿ ಸಿಎಂ ಯಡಿಯೂರಪ್ಪ ಅವಧಿಯಲ್ಲಿ ಸಂವಿಧಾನಿಕವಾಗಿ ಆಡಳಿತ ನಡೆಸಿದ್ದರು. ಸರ್ಕಾರದ ಯೋಜನೆಗಳ ಲಾಭ ಎಲ್ಲರಿಗೂ ತಲುಪುವಂತೆ ನಿರ್ಧಾರ ಕೈಗೊಂಡಿದ್ದರು.
ಯಾವುದೇ ಯೋಜನೆಯ ಜಾರಿಗೂ ಮೊದಲು ಸದನದಲ್ಲಿ ಕೂಲಂಕಷ ಚರ್ಚೆಗೆ ಅವಕಾಶ ನೀಡುತ್ತಿದ್ದರು ಎಂದು ತಿಳಿಸಿದರು. ಆದರೆ ಕಾಂಗ್ರೆಸ್ ಸರ್ಕಾರ ಮತಬ್ಯಾಂಕ್ ಓಲೈಕೆ ಭರದಲ್ಲಿ ಯೋಜನೆಗಳನ್ನು ಪ್ರಕಟಿಸಿ, ಜಾರಿಗೆ ತರಲು ಮುಂದಾಗಿದೆ. ಕೂಡಲೇ ಶಾದಿ ಭಾಗ್ಯ ಯೋಜನೆಯನ್ನು ಎಲ್ಲ ಬಡವರಿಗೆ ವಿಸ್ತರಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ಭೀಮಶೇನ ರಾವ್, ಶಂಕರಗೌಡ ಚನ್ನೂರು, ವೆಂಕಟೇಶ ಪೂಜಾರಿ, ಶಿವಪ್ಪ ನಾಯಕ, ರಾಘವೇಂದ್ರ ಅಂಜಳ, ಡಾ.ಶಿವಶರಣಪ್ಪ, ಬಸವಂತ್ರಾಯ ಗೌಡ ಜೋಳದಹಡ್ಗಿ, ಮಾನಪ್ಪ ನಾಯಕ ಕರಿಗುಡ್ಡ, ರಂಗನಾಥ ವಗಡಂಬಳಿ, ಚೆನ್ನಪ್ಪ ನಾಯಕ ಸೇರಿ ಅನೇಕ ಪ್ರಮುಖರು ಉಪಸ್ಥಿತರಿದ್ದರು.