ಆಸ್ಪತ್ರೆಗೆ ಮೂಲ ಸೌಲಭ್ಯ ಕಲ್ಪಿಸಲು ತೀರ್ಮಾನ
ಮುದಗಲ್: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಗತ್ಯವಾಗಿರುವ ಮೂಲ ಸೌಲಭ್ಯಗಳನ್ನು ಕೂಡಲೇ ಒದಗಿಸಲು ತೀರ್ಮಾನಿಸಲಾಯಿತು.
ಆರೋಗ್ಯ ಕೇಂದ್ರದಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಹಾಯಕ ಆಯುಕ್ತ ಟಿ.ಯೋಗೇಶ್ವರ ಮಾತನಾಡಿ, ಆಸ್ಪತ್ರೆಯಲ್ಲಿ ತುರ್ತಾಗಿ ಬೇಕಾದ ಔಷಧ ಖರೀದಿ, ರೋಗಿಗಳಿಗೆ ಕುಡಿಯುವ ನೀರು, ವಿದ್ಯುತ್ ಮುಂತಾದ ಸೌಲಭ್ಯಗಳ ಕುರಿತು ಚರ್ಚೆ ನಡೆಸಿದರು.
ಮೂಲ ಸೌಕರ್ಯಗಳಿಲ್ಲ: ಸಮಿತಿ ಕಾರ್ಯದರ್ಶಿ ಡಾ. ರಾಜೇಂದ್ರ ಮನಗೂಳಿ ಮಾತನಾಡಿ, ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಮರ್ಪಕ ಕುಡಿವ ನೀರು ಸಿಗುತ್ತಿಲ್ಲ. ಊಟ ಮಾಡಲು ಪ್ರತ್ಯೇಕ ಶೆಡ್, ಕಾಂಪೌಂಡ್, ಎಕ್ಸ್ರೇ ಮತ್ತು ಸ್ಕ್ಯಾನಿಂಗ್ ಮಷಿನ್ ಅವಶ್ಯವಿದೆ. ಆಯುರ್ವೇದಿಕ್ ವೈದ್ಯರಿದ್ದು ಅವರಿಗೆ ಬೇಕಾದ ಮಸಾಜ್ ಸಾಮಗ್ರಿ ಸೇರಿದಂತೆ ಮೂಲ ಸೌಲಭ್ಯಗಳಿಲ್ಲ ಎಂದರು.
ಮುದಗಲ್ 10 ಲಕ್ಷ: ಆರೋಗ್ಯ ಇಲಾಖೆಯಿಂದ ಮುದಗಲ್ ಆಸ್ಪತ್ರೆಗೆ 10 ಲಕ್ಷ ಮಂಜೂರಾತಿ ಸಿಕ್ಕಿದ್ದು, ಅದರಲ್ಲಿ ಎಕ್ಸ್ರೇ, ಸ್ಕ್ಯಾನಿಂಗ್ ಯಂತ್ರಗಳನ್ನು, ಮಸಾಜ್ ಸಾಮಗ್ರಿಗಳನ್ನು ಒದಗಿಸಲು ಸರ್ಕಾರಕ್ಕೆ ಯೋಜನೆ ಸಿದ್ಧಪಡಿಸಿ ಕಳುಹಿಸಲಾಗಿದೆ ಎಂದರು.
ಸಹಾಯಕ ಆಯುಕ್ತ ಟಿ.ಯೋಗೇಶ ಮಾತನಾಡಿ, ಮುದಗಲ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪಪಂ.ಗೆ ಬಿಡುಗಡೆಯಾಗುವ ಸರ್ಕಾರದ ಅನುದಾನದಲ್ಲಿ ಕುಡಿವ ನೀರು, ರೋಗಿಗಳಿಗೆ ಅವರ ಹಿಂದೆ ಬರುವವರಿಗೆ ಊಟ ಮಾಡಲು ಬಿಆರ್ಜಿಎಫ್ ಅನುದಾನದಲ್ಲಿ ಶೆಡ್ ನಿರ್ಮಿಸಿಕೊಡಲು ತಿರ್ಮಾನಿಸಲಾಯಿತು.
30ರಂದು ಹಲ್ಲಿನ ಚಿಕಿತ್ಸಾ ಶಿಬಿರ: ನ.30ರಂದು ಪಪಂ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಉಚಿತ ಹಲ್ಲಿನ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲು ತೀರ್ಮಾನಿಸಿದ್ದು, ಧಾರವಾಡದ ಧರ್ಮಸ್ಥಳ ಮಂಜುನಾಥೇಶ್ವರ ಡೆಂಟಲ್ ಕಾಲೇಜಿನ ವೈದ್ಯರು, ಸಿಬ್ಬಂದಿ ಆಗಮಿಸಲಿದ್ದಾರೆ ಎಂದು ಡಾ. ಈಶ್ವರ ಸವಡಿ ತಿಳಿಸಿದರು.
ಸಭೆಯಲ್ಲಿ ಪಪಂ ಅಧ್ಯಕ್ಷ ರಜ್ಜಬಲಿ ಟಿಂಗ್ರಿ, ತಾಲೂಕು ಆರೋಗ್ಯಾಧಿಕಾರಿ ಡಾ. ನಂದಕುಮಾರ, ಡಾ. ಸಂಗನಗೌಡ, ಮುಖ್ಯಾಧಿಕಾರಿ ಎಂ.ವಿಜಯಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಹೆಮಂತ ನಾಲಗಾಪೂರ, ಜೆಸ್ಕಾಂ ಶಾಖಾಧಿಕಾರಿ ಮುದ್ದನಗೌಡ, ಎಎಸ್ಐ, ಸದಸ್ಯರಾದ ವೀರೇಶ ವಡ್ಡರ, ಮಾಸೂಮ ಷರೀಫ್, ಶಿವರಾಜ ತಳವಾರ, ಎಂ.ಡಿ. ಸಾದಿಕ್ ಅಲಿ, ಬಂದೇನವಾಜ, ಖಾಜಾಪಾಷಾ ಮುಂತಾದವರು ಉಪಸ್ಥಿತರಿದ್ದರು.