ಕನಕ ಜಯಂತಿ ಅದ್ಧೂರಿ ಆಚರಣೆಗೆ ನಿರ್ಧಾರ
ರಾಯಚೂರು: ಕನಕದಾಸ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಅಧಿಕಾರಿಗಳಿಗೆ ಆದೇಶಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸಂಜೆ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಎಲ್ಲಾ ಶಾಲೆ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಕನಕ ಜಯಂತಿ ಆಚರಿಸಬೇಕು. ಶಾಲಾ ಮಕ್ಕಳಿಂದ ವೇಷ ಭೂಷಣ ಸ್ಪರ್ಧೆ, ಭಾಷಣ, ಪ್ರಬಂಧ ಸ್ಪರ್ಧೆ ಏರ್ಪಡಿಸಲು ಡಿಡಿಪಿಐಗೆ ಸೂಚಿಸಿದರು.
ಕನಕ ರತ್ನ ಪ್ರಶಸ್ತಿಯನ್ನು ವಿತರಿಸುವ ಕುರಿತು ಉಪ ಸಮಿತಿ ರಚಿಸಲು ಹೇಳಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಕನಕರತ್ನ ಪ್ರಶಸ್ತಿಗೆ ಗುರುತಿಸಲು ಸೂಚಿಸಲಾಯಿತು. ನ.20 ರಂದು ಬೆಳಗ್ಗೆ 8.30ಕ್ಕೆ ಕನಕದಾಸ ವೃತ್ತದಿಂದ ಮೆರವಣಿಗೆ ನಡೆಸಬೇಕು. ಮಹಾಬಳೇಶ್ವರ ವೃತ್ತ, ಮಹಾವೀರ ವೃತ್ತ, ತೀನ್ ಕಂದಿಲ್, ಅಂಬೇಡ್ಕರ್ ವೃತ್ತದ ಮೂಲಕ ರಂಗಮಂದಿರ ತಲುಪಲು ಸೂಚಿಸಿದರು. ಸಮಾರಂಭ ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಯಿತು.